ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಎಂಟು ಲಕ್ಷ ಜನ ಭಾಗಿ; ಎಲ್ಲೂ ಅಹಿತಕರ ಘಟನೆ ನಡೆದಿಲ್ಲ: ಜಿ.ಪರಮೇಶ್ವರ್

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಈ ಹೊಸ ವರ್ಷಕ್ಕೆ ಎಂಟು ಲಕ್ಷ ಜನ ಭಾಗವಹಿಸಿದ್ದರು. ಎಲ್ಲೂ ಅಹಿತಕರ ಘಟನೆಗಳು ನಡೆದಿಲ್ಲ, ಸಂಚಾರ ದಟ್ಟಣೆ ಕೂಡಾ ಆಗಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಗುರುವಾರ ಇಲ್ಲಿನ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹೊಸ ವರ್ಷಕ್ಕೆ ಬೆಂಗಳೂರಿನ ವಿವಿಧೆಡೆಗಳಲ್ಲಿ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇತ್ತು. ಒಂದು ಲೆಕ್ಕದ ಪ್ರಕಾರ ಏಳೆಂಟು ಲಕ್ಷ ಜನ ಭಾಗವಹಿಸಿದ್ದರು. ನಾನೂ ಕೂಡಾ ಕಮಾಂಡ್ ಸೆಂಟರ್‍ಗೆ ಹೋಗಿ ವೀಕ್ಷಿಸಿದೆ. ಈ ಬಾರಿ ಜವಾಬ್ದಾರಿಯಿಂದ ಜನ ಹೊಸವರ್ಷ ಆಚರಿಸಿದ್ದಾರೆ ಎಂದರು.
ಯಾರೂ ಅಪಘಾತ ಮಾಡಿಕೊಂಡು ಪ್ರಾಣ ಹಾನಿ ಮಾಡಿಕೊಳ್ಳಲಿಲ್ಲ. ಮಾಧ್ಯಮದವರೂ ಸಹ ಹೊಸ ವರ್ಷಾಚರಣೆಗೆ ಸಹಕರಿಸಿದರು. 20 ಸಾವಿರ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಎಲ್ಲರೂ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಜಿ.ಪರಮೇಶ್ವರ್ ಹೇಳಿದರು.
30ಕ್ಕೂ ಹೆಚ್ಚು ಜನ ಡಿಐಜಿ, ಐಜಿಗಳಿಗೆ ಪದೋನ್ನತಿ ಕೊಡಲಾಗಿದೆ. ಇಷ್ಟೊಂದು ಮಂದಿಗೆ ಈ ಮೊದಲು ಒಟ್ಟಿಗೆ ಪದೋನ್ನತಿ ಸಿಕ್ಕಿರಲಿಲ್ಲ. ಎಲ್ಲರಿಗೂ ಜವಾಬ್ದಾರಿ ಕೊಡಲಾಗಿದೆ ಎಂದು ಜಿ.ಪರಮೇಶ್ವರ್ ತಿಳಿಸಿದರು.
ಬೆಳಗಾವಿಯಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ. ಹೊರಗಡೆಯಿಂದ ಕಳ್ಳರ ತಂಡ ಬಂದಿರಬಹುದಾ ಎಂದು ಪರಿಶೀಲನೆ ನಡೆಸಲಾಗುತ್ತಿದೆ. ಈ ಸಂಬಂಧ ಅಧಿಕಾರಿಗಳ ಸಭೆ ಮಾಡಿದ್ದು, ಕ್ರಮ ಕೈಗೊಳ್ಳುತ್ತೇವೆ ಎಂದು ಜಿ.ಪರಮೇಶ್ವರ್ ಹೇಳಿದರು.
ಇತ್ತೀಚೆಗೆ ಹುಬ್ಬಳ್ಳಿಯ ಮರ್ಯಾದೆಗೇಡು ಹತ್ಯೆ ನಡೆದ ಸ್ಥಳಕ್ಕೆ ಹೋಗಿದ್ದೆ. ಮರ್ಯಾದೆಗೇಡು ಹತ್ಯೆಗಳು ಈ ಕಾಲದಲ್ಲೂ ನಡೆಯುತ್ತಿವೆ. ಸಮಾಜಕ್ಕೆ ಸರಿಯಾದ ಸಂದೇಶ ಹೋಗುತ್ತಿಲ್ಲವೇನೋ? ಕಾನೂನಿನ ಬಗ್ಗೆ ಜನರಲ್ಲಿ ಅರಿವೂ ಬರಬೇಕು ಎಂದು ಜಿ.ಪರಮೇಶ್ವರ್ ತಿಳಿಸಿದರು.







