ಪೆಟ್ರೋಲ್ ಸೆಸ್ ಇಳಿಕೆ ವಿಚಾರ: ಸಾಧಕ-ಬಾಧಕ ನೋಡಿ ತೀರ್ಮಾನ : ಜಿ.ಪರಮೇಶ್ವರ್

ಬೆಂಗಳೂರು : ರಾಜ್ಯ ಸರಕಾರ ಪೆಟ್ರೋಲ್ ಮೇಲಿನ ಸೆಸ್ ಇಳಿಕೆ ವಿಚಾರ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಧಕ-ಬಾಧಕ ನೋಡಿ ತೀರ್ಮಾನ ಮಾಡುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆಟ್ರೋಲ್ ಮೇಲಿನ ಸೆಸ್ ಇಳಿಕೆ ವಿಚಾರ ಸಚಿವ ಸಂಪುಟದಲ್ಲಿ ಪ್ರಸ್ತಾಪಿಸಿದರೆ ಚರ್ಚೆ ಮಾಡುತ್ತೇವೆ. ಇಲ್ಲವೇ ಮುಖ್ಯಮಂತ್ರಿ ಒಬ್ಬರೇ ತೀರ್ಮಾನ ಮಾಡಬಹುದು. ಈ ಸಂಬಂಧ ಅವರೇ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.
ಒಳಮೀಸಲಾತಿ ವಿಚಾರವಾಗಿ ಮಾತನಾಡಿದ ಅವರು, ಎಲ್ಲ ಸಮುದಾಯಗಳ ಬೇಡಿಕೆ ಇದ್ದು, ನ್ಯಾಯ ಸಿಗಬೇಕೆಂದು ಹೋರಾಟ ಕೈಗೊಂಡಿದ್ದಾರೆ. ಆದರೆ, ಸರಕಾರ ಕಾನೂನು ಚೌಕಟ್ಟಿನಲ್ಲಿ ತೀರ್ಮಾನಿಸುತ್ತದೆ. ಸಾಮಾಜಿಕ ನ್ಯಾಯ ಒದಗಿಸುವ ಕೆಲಸ ಮಾಡುತ್ತದೆ ಎಂದು ಉಲ್ಲೇಖಿಸಿದರು.
ಆರ್‌ಸಿಬಿ ಟಿಕೆಟ್ ವಿಚಾರವಾಗಿ ಮಾತನಾಡಿದ ಅವರು, ಶಾಸಕರು ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ. ಆದರೆ, ಇಲ್ಲಿಯವರೆಗೆ ಸರಕಾರ ಮಧ್ಯ ಪ್ರವೇಶಿಸಿಲ್ಲ. ದುರಂತ ಆದ ಕಾರಣ ಕಮಿಟಿ ರಚಿಸಿದ್ದೆವು. ಶಿಫಾರಸು ಅಳವಡಿಸಿಕೊಂಡು ಪಂದ್ಯಕ್ಕೆ ಅವಕಾಶ ನೀಡಿದ್ದೇವೆ ಎಂದು ನುಡಿದರು.




