ಪೊಲೀಸ್ ಠಾಣೆಯೊಳಗೆ ರಾಜಿ ಪಂಚಾಯಿತಿ ನಡೆಸುವಂತಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್

ಬೆಂಗಳೂರು : ಯಾವ ಪೊಲೀಸ್ ಅಧಿಕಾರಿಯೂ ಠಾಣೆಗಳಲ್ಲಿ ಯಾವುದೇ ರಾಜಿ ಪಂಚಾಯಿತಿ ನಡೆಸಬಾರದು. ರಿಯಲ್ ಎಸ್ಟೇಟ್ ವ್ಯವಹಾರದೊಂದಿಗೆ ಕೈಜೋಡಿಸಬಾರದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಾಕೀತು ಮಾಡಿದ್ದಾರೆ.
ಗುರುವಾರ ಇಲ್ಲಿನ ಚಿಕ್ಕಬಾಣವಾರ ಸಹಾಯಕ ಪೊಲೀಸ್ ಆಯುಕ್ತರ ಕಚೇರಿ, ಚಿಕ್ಕಬಾಣಾವರ ಸಂಚಾರ ಪೊಲೀಸ್ ಠಾಣೆಯ ನೂತನ ಕಟ್ಟಡ ನಿರ್ಮಾಣ, ಆವತಿಯಲ್ಲಿ ಭಾರತೀಯ ಮೀಸಲು ಪಡೆಯ ಶಂಕುಸ್ಥಾಪನೆ ಹಾಗೂ ವಾಯವ್ಯ ವಿಭಾಗ ಉಪ ಪೊಲೀಸ್ ಆಯುಕ್ತರ ಕಚೇರಿ, ಚಿಕ್ಕ ಬಾಣಾವರ ಪೊಲೀಸ್ ಠಾಣೆಯ ನೂತನ ಕಚೇರಿ, ಈಶಾನ್ಯ ವಿಭಾಗ ಉಪ ಪೊಲೀಸ್ ಆಯುಕ್ತರ ಕಚೇರಿ, ದೇವನಹಳ್ಳಿ ಸಹಾಯಕ ಪೊಲೀಸ್ ಆಯುಕ್ತರ ಕಚೇರಿ ಮತ್ತು ದೇವನಹಳ್ಳಿ ಪೊಲೀಸ್ ಠಾಣೆಯ ನೂತನವಾಗಿ ನಿರ್ಮಿಸಲಾದ ಕಚೇರಿ ಕಟ್ಟಡಗಳ ಉದ್ಘಾಟನೆಯನ್ನು ನೆರವೇರಿಸಿದ ಬಳಿಕ ದೇವನಹಳ್ಳಿಯಲ್ಲಿ ನಡೆದ ವೇದಿಕೆ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ನೊಂದವರು, ಶೋಷಿತರಿಗೆ ನ್ಯಾಯ ಕೊಡಿಸಲು ಪೊಲೀಸ್ ಇಲಾಖೆ ಇದೆ. ಈ ನಿಟ್ಟಿನಲ್ಲಿ ಪೊಲೀಸರು ಕೆಲಸ ಮಾಡಬೇಕು. ಆದರೆ, ಯಾವ ಅಧಿಕಾರಿಯೂ ಕೂಡ ರಿಯಲ್ ಎಸ್ಟೇಟ್ ವ್ಯವಹಾರ ಮಾಡಬಾರದು. ಪೊಲೀಸ್ ಠಾಣೆಯಲ್ಲಿ ರಾಜಿ ಪಂಚಾಯಿತಿ ನಡೆಯಬಾರದು. ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಪೊಲೀಸ್ ಠಾಣೆಗೆ ಬಂದವರನ್ನು ಸರಿಯಾದ ರೀತಿಯಲ್ಲಿ ಗೌರವದಿಂದ ವರ್ತಿಸಬೇಕು ಎಂದು ಅವರು ಸೂಚನೆ ನೀಡಿದರು.
ಪೊಲೀಸ್ ಇಲಾಖೆ ಶಿಸ್ತುಬದ್ಧಿನ ಇಲಾಖೆ. ಇಡೀ ದೇಶದಲ್ಲಿ ಶಿಸ್ತು, ಸಂಯಮದಿಂದ ಜನಸ್ನೇಹಿಯಾಗಿ ಕೆಲಸ ಮಾಡುತ್ತಿದೆ. ಸರಕಾರವು ಪೊಲೀಸ್ ಇಲಾಖೆಯಲ್ಲಿ ಅನೇಕ ಹೊಸ ಬದಲಾವಣೆಗಳನ್ನು ತಂದಿದೆ. ಕರ್ನಾಟಕ ಪೊಲೀಸ್ ನ್ಯಾಯ ಒದಗಿಸುವುದರಲ್ಲಿ ಮೊದಲ ಸ್ಥಾನದಲ್ಲಿದೆ ಎಂದ ಅವರು, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಎಲ್ಲ ರೀತಿಯ ಸವಲತ್ತು ನಮ್ಮ ಸರಕಾರ ಒದಗಿಸಿದೆ. ಪೊಲೀಸ್ ಗೃಹ ಯೋಜನೆಯಡಿ 38 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತವಾದ ವಸತಿ ನಿರ್ಮಿಸಲಾಗುತ್ತಿದೆ. ಈವರೆಗೆ ಸಿಬ್ಬಂದಿಗಳಿಗೆ ಶೇ.40ರಷ್ಟು ವಸತಿಗಳನ್ನು ನಿರ್ಮಿಸಿ ಕೊಡಲಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರೂ ಆದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ. ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋಥ್ ಸೇರಿದಂತೆ ಪ್ರಮುಖರಿದ್ದರು.






