ಪೊಲೀಸ್ ಅಧಿಕಾರಿಗಳ ಪತ್ರ, ಕಿರುಕುಳ ಆರೋಪ ವಿಚಾರ: ವರದಿ ನೀಡಲು ಸೂಚನೆ : ಗೃಹ ಸಚಿವ ಜಿ.ಪರಮೇಶ್ವರ್

ಬೆಂಗಳೂರು : ಮಂಗಳೂರು ನಗರ ಪೊಲೀಸ್ ಆಯುಕ್ತರ ವಿರುದ್ಧ ಡಿಜಿಪಿಗೆ ಎಸ್ಪಿ ಪತ್ರ ಹಾಗೂ ಡಿಸಿಆರ್‌ಇ ಇನ್‍ಸ್ಪೆಕ್ಟರ್ ಗೆ ಮೇಲ್ಜಾತಿ ಅಧಿಕಾರಿಗಳ ಕಿರುಕುಳ ಆರೋಪ ಸಂಬಂಧ ಕುರಿತು ವರದಿ ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಅಧಿಕಾರಿಗಳ ಆರೋಪ ಕುರಿತು ಮಾಧ್ಯಮಗಳಲ್ಲಿ ವರದಿ ಗಮನಿಸಿದ್ದೇನೆ. ಡಿಸಿಆರ್‌ಇ ಇನ್‍ಸ್ಪೆಕ್ಟರ್ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ಎಸ್ಪಿ ಎಸ್.ಎಸ್.ಕಾಶಿ ಪತ್ರ ಬರೆದಿದ್ದಾರೆ. ಈ ಎರಡು ಪ್ರಕರಣಗಳ ಕುರಿತು ಡಿಜಿಪಿಯವರನ್ನು ವರದಿ ಕೇಳಿದ್ದೇನೆ. ವರದಿ ಬಳಿಕ ಸತ್ಯಾಸತ್ಯತೆಯನ್ನು ಆಧರಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಾಸಕರಾದ ಎನ್.ಎ.ಹಾರಿಸ್ ಅವರ ಮಕ್ಕಳ ನಿವಾಸಗಳ ಮೇಲೆ ದಾಳಿ ನಡೆಸಿರುವ ಒಳ ವಿಚಾರಗಳು ನಮಗೆ ತಿಳಿದಿಲ್ಲ. ಯಾವ ವಿಚಾರಕ್ಕೆ ದಾಳಿ ನಡೆಸಿದ್ದಾರೆ, ಏನೆಲ್ಲ ಸಿಕ್ಕಿದೆ ಎಂಬುದನ್ನು ಈಡಿ ಅಧಿಕಾರಿಗಳು ಮಾಹಿತಿ ನೀಡಬೇಕು. ಸಾಮಾನ್ಯವಾಗಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡುತ್ತಾರೆ. ಅಲ್ಲಿಯವರೆಗೂ ಕಾಯಬೇಕು. ಇದರ ನಡುವೆ ನಾವು ಹೇಳಿಕೆಗಳನ್ನು ಕೊಟ್ಟರೆ ಅಪ್ರಸ್ತುತ ಆಗುತ್ತದೆ ಎಂದರು.
ಬಿಟ್ ಕಾಯಿನ್ ಹಗರಣದ ಕುರಿತಂತೆ ರಾಜ್ಯದಲ್ಲಿ ಎಸ್‍ಐಟಿ ರಚನೆ ಮಾಡಲಾಗಿತ್ತು. ತನಿಖೆ ಕೊನೆ ಹಂತದಲ್ಲಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವ್ಯಾಪ್ರಿ ಹೊಂದಿದೆ. ಅನೇಕ ವಿಚಾರಗಳಲ್ಲಿ ಮಾಹಿತಿಯನ್ನು ಕಲೆ ಹಾಕಿ ಅಂತಿಮ ವರದಿ ಕೊಡಬೇಕು. ಅಂತಿಮ ಹಂತದಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಗತ್ಯ ಮಾಹಿತಿ ಸಿಗುವವರೆಗೂ ತನಿಖೆ ನಡೆಸುತ್ತಾರೆ. ಆದರೆ, ಮಧ್ಯಂತರ ಚಾರ್ಜ್‍ಶೀಟ್ ಸಲ್ಲಿಸಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.






