ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ಪತ್ರ ವಿಚಾರ: ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡುತ್ತಾರೆ: ಜಿ.ಪರಮೇಶ್ವರ್

ಬೆಂಗಳೂರು :ಕಾಂಗ್ರೆಸ್ ಪಕ್ಷ ರಾಜ್ಯದ ಮುಸ್ಲಿಮರನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ಖಂಡಿಸಿ ಕರ್ನಾಟಕ ರಾಜ್ಯ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಬರೆದಿರುವ ಪತ್ರಕ್ಕೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕೂಟದ ಪತ್ರ ಸಂಬಂಧ ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡುತ್ತಾರೆ. ಈ ಬಗ್ಗೆ ರಾಹುಲ್ ಗಾಂಧಿ ಅವರು ಸೂಚನೆ ನೀಡುತ್ತಾರೆ. ನಾವು ಯಾವತ್ತು ಕೂಡ ಚುನಾವಣೆಗಳಲ್ಲಿ ಸ್ಪರ್ಧಿಸಲು ಮುಸ್ಲಿಮ್ ಸಮುದಾಯದವರಿಗೆ ಆದ್ಯತೆ ನೀಡಿದ್ದೇವೆ ಎಂದು ಹೇಳಿದರು.
ಸಾಮಾನ್ಯವಾಗಿ ಕಾಂಗ್ರೆಸ್ ಪಕ್ಷದಲ್ಲಿ ಮೃತಪಟ್ಟ ಕುಟುಂಬದವರಿಗೆ ಟಿಕೆಟ್ ನೀಡುವ ಪದ್ಧತಿ ಇದೆ. ಇದನ್ನು ಬೇರೆ ರೀತಿ ಅರ್ಥೈಸಿಕೊಳ್ಳಲಾಗಿದೆ. ದಾವಣಗೆರೆಯಲ್ಲಿ ಮತದಾರರು ಜಾಸ್ತಿ ಇದ್ದೇವೆ ಎಂದು ಟಿಕೆಟ್ ಕೇಳಿದ್ದಾರೆ. ಆದರೆ, ಅದು ಕೂಡ ತಪ್ಪಲ್ಲ. ಕಾರಣಾಂತರಗಳಿಂದ ಶಾಮನೂರು ಶಿವಶಂಕರಪ್ಪ ಅವರ ಮನೆಯವರಿಗೆ ಟಿಕೆಟ್ ಕೊಟ್ಟಿರುವುದನ್ನು ಬೇರೆ ರೀತಿ ಅರ್ಥೈಸಿಕೊಳ್ಳುವುದು ಸರಿಯಲ್ಲ. ಇದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿಗಳು ಸೇರಿದಂತೆ ನಾವೆಲ್ಲ ಸರಿಪಡಿಸುತ್ತೇವೆ ಎಂದು ತಿಳಿಸಿದರು.






