ಜ್ಞಾನೇಶ್ ಕುಮಾರ್‌ರನ್ನು ಹುದ್ದೆಯಿಂದ ವಜಾಗೊಳಿಸಬೇಕು : ಜಿ.ಪರಮೇಶ್ವರ್

ಬೆಂಗಳೂರು : ‘ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಕೂಡಲೇ ಹುದ್ದೆಯಿಂದ ವಜಾಗೊಳಿಸಬೇಕು ಮತ್ತು ಈ ವಿಚಾರವನ್ನು ಸ್ವತಂತ್ರ ಹಾಗೂ ನಿಷ್ಪಕ್ಷಪಾತ ತನಿಖೆಗೆ ಒಳಪಡಿಸಬೇಕು. ದೇಶದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಮತ್ತು ಪ್ರಜಾಪ್ರಭುತ್ವದ ಮೇಲಿರುವ ನಂಬಿಕೆಯ ವಿಚಾರಗಳಲ್ಲಿ ರಾಜಿಯಾಗಬಾರದು’ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಗುರುವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಜ್ಞಾನೇಶ್ ಕುಮಾರ್ ಕಾರ್ಯವೈಖರಿಯನ್ನು ಖಂಡಿಸುತ್ತೇನೆ. ಅವರ ನೇತೃತ್ವದಲ್ಲಿ ತೆಗೆದುಕೊಳ್ಳಲಾದ ನಿರ್ಧಾರಗಳ ಕುರಿತು ಗಂಭೀರ ಪ್ರಶ್ನೆಗಳು ಉದ್ಭವವಾಗಿರುವ ಸಂದರ್ಭದಲ್ಲಿ, ಅವರು ತಮ್ಮ ಹುದ್ದೆಯಲ್ಲಿ ಮುಂದುವರಿಯುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎನ್ನುವುದು ನನ್ನ ಭಾವನೆ ಎಂದು ತಿಳಿಸಿದ್ದಾರೆ.
ಚುನಾವಣಾ ಆಯೋಗದ ಕಾರ್ಯವೈಖರಿ ಮತ್ತು ಅದು ತೆಗೆದುಕೊಂಡಿರುವ ಕೆಲವು ನಿರ್ಧಾರಗಳ ಕುರಿತು ಇಬ್ಬರು ಚುನಾವಣಾ ಆಯುಕ್ತರು ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಪ್ರಕಟಗೊಂಡಿರುವ ವರದಿಗಳು ಇಡೀ ದೇಶವಾಸಿಗಳಲ್ಲಿ ಆತಂಕ ಮೂಡಿಸುವಂತಿದೆ. ಮೂವರು ಸದಸ್ಯರಿರುವ ಸಂವಿಧಾನಾತ್ಮಕ ಸಂಸ್ಥೆಯು ಏಕವ್ಯಕ್ತಿಯ ಪಾರುಪತ್ಯಕ್ಕೆ ಸೀಮಿತವಾಗಿದೆಯೇ ಎಂಬ ಗಂಭೀರ ಪ್ರಶ್ನೆಯನ್ನು ಇದು ಹುಟ್ಟುಹಾಕಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರೊಬ್ಬರದ್ದೇ ಸಂಸ್ಥೆಯಾಗಿ ಮಾರ್ಪಟ್ಟಿದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದು ಅವರು ಸಂಶಯ ವ್ಯಕ್ತಪಡಿಸಿದ್ದಾರೆ.
ಆಯೋಗದಲ್ಲಿ ಮೂವರು ಆಯುಕ್ತರಿದ್ದಾರೆ. ಕಾನೂನಿನ ಪ್ರಕಾರ, ಸಾಧ್ಯವಾದಷ್ಟು ನಿರ್ಧಾರಗಳು ಸರ್ವಾನುಮತದಿಂದ ತೆಗೆದುಕೊಳ್ಳಬೇಕು. ಭಿನ್ನಾಭಿಪ್ರಾಯ ಉಂಟಾದಲ್ಲಿ, ಬಹುಮತದ ನಿರ್ಧಾರವೇ ಅಂತಿಮವಾಗಬೇಕು. ಇಬ್ಬರು ಆಯುಕ್ತರ ಆಕ್ಷೇಪಣೆಗಳು ಸಾಮಾನ್ಯ ಆಡಳಿತಾತ್ಮಕ ವಿಷಯಗಳಿಗೆ ಸೀಮಿತವಾಗಿಲ್ಲ. ಹೊಸ ಮತದಾರರ ಸೇರ್ಪಡೆ, ಮತದಾರರ ಪಟ್ಟಿಯಲ್ಲಿನ ಹೆಸರುಗಳ ಅಳಿಸುವಿಕೆ ಮತ್ತು ಮರುಸೇರ್ಪಡೆ, ಎಸ್‍ಐಆರ್ ಪ್ರಕ್ರಿಯೆಗಳ ಕುರಿತಾದ ವಿಚಾರಗಳಾಗಿವೆ.
ಅರ್ಜಿ ನಮೂನೆ-6ರ ಬದಲಾವಣೆ ಅನಧಿಕೃತ ಮತ್ತು ಕಾನೂನು ಬಾಹಿರ. ರಾಜ್ಯ ಮಟ್ಟದಲ್ಲಿನ ಶಾಸನಬದ್ಧ ಅಧಿಕಾರಿಗಳ ಅಧಿಕಾರವನ್ನು ಬದಿಗೊತ್ತಿ ಮತದಾರರ ಪಟ್ಟಿಯ ದತ್ತಾಂಶಗಳನ್ನು (ಡೇಟಾಬೇಸ್) ಕೇಂದ್ರೀಕರಣ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಇದರಲ್ಲಿ ಸೇರಿವೆ. ಕಾಂಗ್ರೆಸ್ ಪಕ್ಷ ಮತ್ತು ವಿಪಕ್ಷ ನಾಯಕ ರಾಹುಲ್ ಗಾಂಧಿ ಚುನಾವಣಾ ಪ್ರಕ್ರಿಯೆಯ ಸಮಗ್ರತೆ ಕುರಿತು ನಿರಂತರವಾಗಿ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.
ಆಯೋಗದೊಳಗಿನಿಂದಲೇ ಹೊರಬರುತ್ತಿರುವ ವಿಚಾರಗಳು ಗಂಭೀರ ಸ್ವರೂಪದ್ದಾಗಿವೆ. ಆಯೋಗದ ಕಾರ್ಯವೈಖರಿಯ ಬಗ್ಗೆ ಹೊರಗಿನ ವ್ಯಕ್ತಿಗಳು ಈ ವರೆಗೆ ಎತ್ತುತ್ತಿದ್ದ ಪ್ರಶ್ನೆಗಳು ಈಗ ಆಯೋಗದೊಳಗೇ ದಾಖಲಾಗಿರುವ ಆಕ್ಷೇಪಣೆಗಳ ರೂಪದಲ್ಲಿ ಪ್ರತಿಧ್ವನಿಸುತ್ತಿವೆ. ಈ ಹಿನ್ನೆಲೆಯಲ್ಲಿ, ಕರ್ನಾಟಕ ಸೇರಿದಂತೆ ದೇಶಾದ್ಯಂತ ಎಸ್‍ಐಆರ್ ಅನ್ನು ನಡೆಸುತ್ತಿರುವ ವಿಧಾನವೂ ಈ ಆತಂಕಕ್ಕೆ ಇಂಬು ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಆಯುಕ್ತರು ಸಮಾನರಲ್ಲಿ ಮೊದಲಿಗರು. ಆದರೆ, ಆಯೋಗಕ್ಕಿಂತ ಮೇಲಿನವರಲ್ಲ. ಚುನಾವಣಾ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವಂತಹ ನಿರ್ಧಾರಗಳನ್ನು ಇಬ್ಬರು ಆಯುಕ್ತರ ಅಭಿಪ್ರಾಯವನ್ನು ಬದಿಗೊತ್ತಿ ತೆಗೆದುಕೊಳ್ಳಲಾಗಿದ್ದರೆ, ಅದು ಕಾನೂನಿನಲ್ಲಿ ಹೇಳಲಾಗಿರುವ ಸಾಮೂಹಿಕ ನಿರ್ಧಾರ ಕೈಗೊಳ್ಳುವಿಕೆಯ ಮೂಲತತ್ವಕ್ಕೆ ವಿರುದ್ಧವಾದುದ್ದು. ಹಾಗೆಯೇ ಈ ಕುರಿತು ಸ್ವತಂತ್ರ ಪರಿಶೀಲನೆ ನಡೆಯಬೇಕೆಂಬ ಅಗತ್ಯವನ್ನು ಒತ್ತಿಹೇಳುತ್ತದೆ. ಇದರಿಂದ ಆಯೋಗದ ವಿಶ್ವಾಸಾರ್ಹತೆ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯ ಮೇಲೆ ಜನರು ಇಟ್ಟಿರುವ ನಂಬಿಕೆಗೆ ಹಾನಿಯಾಗಿದೆ. ಆ ನಂಬಿಕೆಯನ್ನು ಪುನರ್ ಸ್ಥಾಪಿಸುವ ಕಾರ್ಯ ಆರಂಭವಾಗಬೇಕು ಎಂದು ಅವರು ಆಗ್ರಹಿಸಿದರು.






