ಮಂಡ್ಯ ಹೆಚ್ಚುವರಿ ಎಸ್.ಪಿ ತಿಮ್ಮಯ್ಯ ವರ್ಗಾವಣೆ; ಗೃಹಸಚಿವ ಜಿ.ಪರಮೇಶ್ವರ್ ಹೇಳಿದ್ದೇನು?

ಬೆಂಗಳೂರು : ಮದ್ದೂರು ಗಲಾಟೆ ಘಟನೆ ನಡೆದ ಬೆನ್ನಲ್ಲೇ ಮಂಡ್ಯ ಹೆಚ್ಚುವರಿ ಎಸ್ಪಿ-1 ತಿಮ್ಮಯ್ಯ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಈ ಸಂಬಂಧ ಪ್ರತಿಕ್ರಿಯಿಸಿದ ಗೃಹ ಸಚಿವ ಜಿ.ಪರಮೇಶ್ವರ್ ಅವರು, "ಆಂತರಿಕ ಭದ್ರತಾ ಲೋಪಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸುತ್ತದೆ. ಹಾಗಾಗಿ ಮಂಡ್ಯ ಹೆಚ್ಚುವರಿ ಎಸ್ಪಿ-1 ತಿಮ್ಮಯ್ಯ ವಿರುದ್ಧ ಕ್ರಮ ಆಗಿದೆ" ಎಂದು ತಿಳಿಸಿದ್ದಾರೆ.
ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಂತರಿಕ ಭದ್ರತಾ ಲೋಪ ಕಂಡು ಬಂದಿದೆ. ಭದ್ರತಾ ಲೋಪ ಕಂಡು ಬಂದಾಗ ಇಲಾಖೆ ಕ್ರಮ ಕೈಗೊಳ್ಳಬೇಕಲ್ಲವೇ? ಇನ್ಸ್ಪೆಕ್ಟರ್, ಪಿಎಸ್ಐ ಯಾರೇ ಇರಲಿ ಲೋಪ ಕಂಡು ಬಂದರೆ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಸಿ.ಟಿ.ರವಿ ಹಾಗೂ ಯತ್ನಾಳ್ ವಿರುದ್ಧದ ಎಫ್ಐಆರ್ ಸಂಬಂಧ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಅಲ್ಲಿಗೆ ಹೋಗಿ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ. ಮತ್ತೆ ಜನರನ್ನು ಪ್ರಚೋದಿಸುವುದು ಸರಿಯಲ್ಲ. ವೀರಾವೇಶದಲ್ಲಿ ಬಳಸಬಾರದ ಪದಗಳನ್ನು ಬಿಜೆಪಿಯವರು ಬಳಸಿದ್ದಾರೆ. ಇದರಿಂದ ಬಿಜೆಪಿಯವರು ಏನು ಸಾಧನೆ ಮಾಡಿದ ಹಾಗೆ ಆಯಿತು. ರಾಜಕೀಯ ಮಾಡಬೇಡಿ ಎಂದು ನಾವು ಮೊದಲಿನಿಂದಲೂ ಹೇಳುತ್ತಿದ್ದೇವೆ. ಕಾನೂನು ವಿರುದ್ಧ ಯಾರೇ ನಡೆದುಕೊಂಡರೂ ಕ್ರಮ ಆಗುತ್ತದೆ ಎಂದು ಎಚ್ಚರಿಸಿದರು.





