ನಾಗೇಂದ್ರರನ್ನು ಕೋರ್ಟ್ ಕೂಡಾ ದೋಷಿಯೆಂದು ತೀರ್ಪು ನೀಡಿಲ್ಲ: ಉಪಮುಖ್ಯಮಂತ್ರಿ ಪರಮೇಶ್ವರ್

ಬೆಂಗಳೂರು: ‘ಜಾರಿ ನಿರ್ದೇಶನಾಲಯ(ಈಡಿ) ಮತ್ತು ಕೇಂದ್ರ ತನಿಖಾ ಸಂಸ್ಥೆ(ಸಿಬಿಐ)ಗಳು ತಮ್ಮ ಛಾರ್ಜ್‍ಶೀಟ್‍ಗಳಲ್ಲಿ ಬಿ.ನಾಗೇಂದ್ರ ಹೆಸರನ್ನು ಸೇರಿಸಿದ್ದರೂ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳದಂತೆ ಕೋರ್ಟ್ ನಿರ್ದೇಶನ ನೀಡಿದೆ. ನಾಗೇಂದ್ರರನ್ನು ಯಾವ ಕೋರ್ಟ್ ದೋಷಿಯೆಂದು ತೀರ್ಪು ನೀಡಿರುವುದಿಲ್ಲ. ಹೀಗಾಗಿ ವಿಪಕ್ಷಗಳು ಹಠಕ್ಕೆ ಬಿದ್ದು ಸದನದಲ್ಲಿ ಪ್ರತಿಭಟನೆ ನಡೆಸುತ್ತಿರುವುದು ಸಂಸದೀಯ ವ್ಯವಸ್ಥೆಗೆ ಮಾಡುವ ಅಪಮಾನ’ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿರುಗೇಟು ನೀಡಿದ್ದಾರೆ.
ಬುಧವಾರ ಉಭಯ ಸದನಗಳಲ್ಲಿ ಬಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ಸರಕಾರದ ಪರವಾಗಿ ಸ್ವಯಂ ಪ್ರೇರಿತ ಹೇಳಿಕೆ ನೀಡಿದ ಪರಮೇಶ್ವರ್, ಪ್ರತಿಪಕ್ಷಗಳು ತಮ್ಮ ಹೋರಾಟವನ್ನು ಕೈಬಿಟ್ಟು ರಾಜ್ಯದಲ್ಲಿ ಬರ ಪರಿಸ್ಥಿತಿ ಸೇರಿದಂತೆ ಇನ್ನಿತರ ಗಂಭೀರ ವಿಚಾರಗಳ ಚರ್ಚೆಗೆ ಅವಕಾಶ ನೀಡಬೇಕು. ವಾಲ್ಮೀನಿ ನಿಗಮದ ಅಕ್ರಮಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಕೂಟ ರಚಿಸಿಕೊಂಡು 84.63ಕೋಟಿ ರೂ.ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಹಣದಲ್ಲಿ ಈಗಾಗಲೆ 79.68 ಕೋಟಿ ರೂ.ಗಳಷ್ಟು ಹಣ ಹಾಗೂ ವಸ್ತುಗಳನ್ನು ವಸೂಲಿ ಮಾಡಲಾಗಿರುತ್ತದೆ. ಬಾಕಿ ಉಳಿದ ಹಣವನ್ನೂ ವಶ ಪಡಿಸಿಕೊಳ್ಳುವ ಪ್ರಕ್ರಿಯೆ ಜಾರಿಯಲ್ಲಿರುತ್ತದೆ ಎಂದರು.
ನಾಗೇಂದ್ರ ವಿರುದ್ಧ ವಿಪಕ್ಷಗಳು ಸಲ್ಲದ ಆರೋಪ ಮಾಡುತ್ತಾ ಸುಗಮವಾಗಿ ಕಲಾಪ ನಡೆಯಲು ಅಡ್ಡಿ ಪಡಿಸುತ್ತಿದ್ದಾರೆ. ಜನರ ತೆರಿಗೆ ಹಣದಲ್ಲಿ ನಾವು ಕಲಾಪ ನಡೆಸುತ್ತಿದ್ದೇವೆ. ಇಲ್ಲಿ ಜನರ ಆಶೋತ್ತರಗಳನ್ನು ಪ್ರತಿಬಿಂಬಿಸಬೇಕು. ರಾಜಕೀಯ ಕಾರಣಗಳಿಗಾಗಿ ಕಲಾಪಕ್ಕೆ ಅಡ್ಡಿ ಮಾಡುವುದು ಜನರಿಗೆ ಹಾಗೂ ಸಂವಿಧಾನಕ್ಕೆ ಅಪಚಾರ. ಹೀಗಾಗಿ ವಿಪಕ್ಷ ಸದಸ್ಯರು ಸದನದ ಕಲಾಪಕ್ಕೆ ಅಡ್ಡಿಪಡಿಸದೆ ಸಾಂವಿಧಾನಿಕ ಪ್ರಜಾತಂತ್ರ ವಿಧಾನಗಳನ್ನು ಅನುಸರಿಸಿ ಚರ್ಚೆ ಮಾಡುವುದರ ಮೂಲಕ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕೆಂದು ಅವರು ಕೋರಿದರು.
ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿರುವ ಅಫಿಡವಿಟ್‍ನಲ್ಲಿ ತಿಳಿಸಿರುವಂತೆ ದೇಶದ 4,192 ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳ ಮೇಲೆ ಕ್ರಿಮಿನಲ್ ಪ್ರಕರಣಗಳು ಬಾಕಿಯಿರುತ್ತವೆ. ಆ ಪೈಕಿ 251 ಹಾಲಿ ಸಂಸದರು(170 ಜನರ ಮೇಲೆ ಅತ್ಯಂತ ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳಿವೆ) ಹಾಗೂ 75 ರಾಜ್ಯಸಭಾ ಸದಸ್ಯರ ಮೇಲೆ ಕ್ರಿಮಿನಲ್ ಪ್ರಕರಣಗಳು ಚಾಲ್ತಿಯಲ್ಲಿವೆ. ದೇಶದ 14 ಮಂದಿ ಸಿಎಂಗಳ ಮೇಲೆಯೂ ಕ್ರಿಮಿನಲ್ ಪ್ರಕರಣಗಳು ಚಾಲ್ತಿಯಲ್ಲಿವೆ ಎಂದು ಅವರು ಉಲ್ಲೇಖಿಸಿದರು.
ನಾಗೇಂದ್ರರನ್ನು ಸಿಬಿಐ ವಿಶೆಷ ತನಿಖಾ ತಂಡವೂ ಆರೋಪಿಯನ್ನಾಗಿ ಎಲ್ಲೂ ಹೆಸರಿಸಿಲ್ಲ. 2024ರ ಸೆಪ್ಟಂಬರ್ 9ರಂದು ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಈ.ಡಿ ಸಲ್ಲಿಸಿದ 25 ಆರೋಪಿಗಳಲ್ಲಿ ಬಿ.ನಾಗೇಂದ್ರರನ್ನು ಎ-1 ಎಂದು ಹೆಸರಿಸಿದೆ. ಆದರೆ, 2024ರ ಅಕ್ಟೋಬರ್ 14ರಂದು ಈ.ಡಿ ಪ್ರಕರಣದಲ್ಲಿ ಕೋರ್ಟ್ ಬಿ.ನಾಗೇಂದ್ರರಿಗೆ ಜಾಮೀನು ಮಂಜೂರು ಮಾಡಿದೆ ಎಂದು ಅವರು ಮಾಹಿತಿ ನೀಡಿದರು.






