ಗಾಂಧೀಜಿ ಹತ್ಯೆ ಕುರಿತು ಜಂಟಿ ಸಂಸದೀಯ ಸಮಿತಿ ರಚನೆ ಕೋರಿದ್ದ ಪಿಐಎಲ್ ವಜಾ; ಅರ್ಜಿದಾರರಿಗೆ 10 ಸಾವಿರ ರೂ. ದಂಡ ವಿಧಿಸಿದ ಹೈಕೋರ್ಟ್

Photo credit: PTI
ಬೆಂಗಳೂರು: ಮಹಾತ್ಮ ಗಾಂಧಿ ಹತ್ಯೆಯಾಗಿ 17 ವರ್ಷಗಳು ಕಳೆಯುವವರೆಗೂ ಭಾರತ ಸರ್ಕಾರ ಏಕೆ ನ್ಯಾಯಾಂಗ ತನಿಖಾ ಆಯೋಗವನ್ನು ರಚಿಸಲಿಲ್ಲ ಎಂಬುದನ್ನು ಪತ್ತೆ ಹಚ್ಚಲು ಜಂಟಿ ಸಂಸದೀಯ ಸಮಿತಿ ರಚಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿರುವ ಕರ್ನಾಟಕ ಹೈಕೋರ್ಟ್, ಅರ್ಜಿದಾರರಿಗೆ 10 ಸಾವಿರ ರೂ. ದಂಡ ವಿಧಿಸಿದೆ.
ಜಾಗೃತ ಕರ್ನಾಟಕ, ಜಾಗೃತ ಭಾರತ ಸಂಸ್ಥೆಯ ಅಧ್ಯಕ್ಷ ಕೆ.ಎನ್. ಮಂಜುನಾಥ್ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಯಾವುದೇ ಸಾರ್ವಜನಿಕ ಹಿತ ಕಾಣುತ್ತಿಲ್ಲ. ನ್ಯಾಯಾಂಗದ ಅಮೂಲ್ಯ ಸಮಯ ವ್ಯರ್ಥ ಮಾಡಲು ಸಲ್ಲಿಸಿರುವ ಇದೊಂದು ಪ್ರಚಾರದ ಅರ್ಜಿಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ವಿಚಾರಣೆ ವೇಳೆ ಅರ್ಜಿ ಪರಿಶೀಲಿಸಿದ ನ್ಯಾಯಪೀಠ, ಈ ಹಿಂದೆಯೂ ಇಂಥದೇ ಮನವಿ ಮಾಡಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಇದೀಗ ಮತ್ತೆ ಅದೇ ಮನವಿಯೊಂದಿಗೆ ಅರ್ಜಿ ಸಲ್ಲಿಸಿದ್ದೀರಿ. ಅರ್ಜಿಯಲ್ಲಿ ಯಾವುದೇ ರೀತಿಯ ಸಾರ್ವಜನಿಕ ಹಿತಾಸಕ್ತಿ ಅಡಗಿಲ್ಲ. ನಿಮ್ಮ ನಡೆ ನ್ಯಾಯಾಂಗ ವ್ಯವಸ್ಥೆಯ ಅಮೂಲ್ಯ ಸಮಯವನ್ನು ಪೋಲು ಮಾಡುವ ಪ್ರಕ್ರಿಯೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿತು.
ಪ್ರಕರಣದಲ್ಲಿ ರಾಷ್ಟ್ರೀಯ ಹಿತಾಸಕ್ತಿ ಅಡಗಿದೆ. ಆದ್ದರಿಂದ, ನಮ್ಮ ವಾದ ಆಲಿಸಬೇಕು ಎಂದು ಅರ್ಜಿದಾರರು ಪದೇಪದೆ ಮನವಿ ಮಾಡಿದರು. ಆದರೆ, ಅರ್ಜಿದಾರರ ಮನವಿ ತಿರಸ್ಕರಿಸಿದ ನ್ಯಾಯಪೀಠ ಅರ್ಜಿ ವಜಾಗೊಳಿಸಿ ದಂಡ ವಿಧಿಸಿ ಆದೇಶಿಸಿತಲ್ಲದೆ, ದಂಡದ ಮೊತ್ತವನ್ನು ಮುಂದಿನ 2 ವಾರಗಳಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಬೇಕು ಎಂದು ನಿರ್ದೇಶಿಸಿತು.
ಅರ್ಜಿದಾರರ ಮನವಿ:
ಮಹಾತ್ಮ ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ 1965ರವರೆಗೂ ಅಂದರೆ 17 ವರ್ಷಗಳ ಕಾಲ ನ್ಯಾಯಾಂಗ ವಿಚಾರಣಾ ಆಯೋಗವನ್ನು ರಚನೆ ಮಾಡದಿರಲು ಕಾರಣವೇನು ಎಂಬುದನ್ನು ತಿಳಿಯಲು ಜಂಟಿ ಸಂಸದೀಯ ಸಮಿತಿ ರಚನೆ ಮಾಡಬೇಕು. ಅಲ್ಲದೆ, 17 ವರ್ಷಗಳ ಬಳಿಕ ಅಂದರೆ 1965ರಲ್ಲಿ ನ್ಯಾಯಾಂಗ ವಿಚಾರಣೆಯನ್ನು ಪ್ರಾರಂಭಿಸಿದ ಅಂಶಗಳ ಕುರಿತು ತನಿಖೆ ನಡೆಸಬೇಕು ಎಂದು ಪಿಐಎಲ್ನಲ್ಲಿ ಕೋರಲಾಗಿತ್ತು.
ಬ್ರಿಟಿಷ್ ವೈಸರಾಯ್ಗೆ 1947ರ ಮೇ 8ರಂದು ಬರೆಯಲಾಗಿದ್ದ ಪತ್ರದಲ್ಲಿ ಭಾರತದ ವಿಭಜನೆಯನ್ನು ತಡೆಯಲು ಶಸ್ತ್ರಸಜ್ಜಿತ ಸಂಘರ್ಷವನ್ನೂ ಒಂದು ಆಯ್ಕೆಯಾಗಿ ಗಾಂಧೀಜಿ ಪರಿಗಣಿಸಿದ್ದರು ಎಂಬ ಉಲ್ಲೇಖದ ಹಿನ್ನೆಲೆಯನ್ನು ಪರಿಶೀಲಿಸಬೇಕು ಎಂದೂ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.
ಗಾಂಧೀಜಿಯವರ ಆತ್ಮಕಥೆಯ ಎರಡನೇ ಸಂಪುಟದ ಕರಡು ದಾಖಲೆಗಳು 2008ರಲ್ಲಿ ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯದಿಂದ ಸ್ಥಳಾಂತರಿಸಲಾಯಿತು ಎನ್ನಲಾದ 51 ಪೆಟ್ಟಿಗೆಗಳ ದಾಖಲೆಗಳ ಪತ್ತೆಗೆ ವಿಶೇಷ ಶೋಧ ಕಾರ್ಯಾಚರಣೆ ನಡೆಸಬೇಕು. ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ 1947ರ ಡಿಸೆಂಬರ್ 30ರಂದು ಗಾಂಧೀಜಿ ವಿಶ್ವಸಂಸ್ಥೆಗೆ ಬರೆದಿದ್ದಾರೆ ಎನ್ನಲಾದ ಪತ್ರವು ಕಾಣೆಯಾಗಿದ್ದು, ಅದರ ಬದಲಿಗೆ 1948ರ ಜನವರಿ 1ರ ಮತ್ತೊಂದು ಪತ್ರವನ್ನು ಬಳಸಲಾಗಿದೆ. ಈ ವಿಷಯದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದ ತನಿಖೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅರ್ಜಿದಾರರು ಕೋರಿದ್ದರು.






