ಗಾಂಜಾ ಮಾರಾಟ ಆರೋಪ: ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ದೂರು

ಬೆಂಗಳೂರು, ಅ. 1: ಇಲ್ಲಿನ ಆರ್.ಆರ್.ನಗರದಲ್ಲಿ ಗಾಂಜಾ ಮಾರಾಟವಾಗುತ್ತಿದೆ. ಇದರಲ್ಲಿ ಶಾಸಕ ಮುನಿರತ್ನ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಜಿ.ಕೆ. ವೆಂಕಟೇಶ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಯುವಕನೊರ್ವ ಸಿಸಿಬಿ ಪೊಲೀಸರಿಗೆ ದೂರು ನೀಡಿರುವುದಾಗಿ ವರದಿಯಾಗಿದೆ.
ಈ ಸಂಬಂಧ ಸಂತೋಷ್ ಎಂಬ ಯುವಕ ನೀಡಿದ ದೂರನ್ನು ಆಧರಿಸಿ ಮಾಜಿ ಸಚಿವ ಮುನಿರತ್ನ ವಿರುದ್ಧ ಸಿಸಿಬಿ ಪೊಲೀಸರು ಕ್ರಮ ಜರುಗಿಸಿದ್ದು, ತನಿಖೆ ಆರಂಭಿಸಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಡ್ರಗ್ ಪೆಡ್ಲರ್ ಗಳು ಪೊಲೀಸರ ಜೊತೆಗೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಾರೆ. ಆರ್.ಆರ್. ನಗರದಲ್ಲಿ ಎಗ್ಗಿಲ್ಲದೆ ಗಾಂಜಾ ಮಾರಾಟವಾಗುತ್ತಿದ್ದು, ಇದರಲ್ಲಿ ಶಾಸಕ ಮುನಿರತ್ನ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಜಿ.ಕೆ. ವೆಂಕಟೇಶ ಅವರುಗಳು ಕೂಡ ಭಾಗಿಯಾಗಿದ್ದಾರೆ. ಈ ಕುರಿತು ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.
ಈ ಹಿಂದೆ ಕ್ಷೇತ್ರದ ವಾರ್ಡ್‍ವೊಂದರ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಮುನಿರತ್ನ ಅವರು ಮಾತನಾಡುತ್ತಾ, ಆರ್ ಆರ್ ನಗರ ಕ್ಷೇತ್ರದ ವಾರ್ಡ್ ಒಂದರಲ್ಲೇ 14 ಕೆಜಿ ಗಾಂಜಾ ಮಾರಾಟವಾಗುತ್ತದೆ ಎಂಬ ಹೇಳಿಕೆಯನ್ನೂ ಸಹ ನೀಡಿದ್ದರು.





