ಕರಾವಳಿಯಲ್ಲಿ ಹೆಚ್ಚು ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆಗೆ ಆದ್ಯತೆ ನೀಡಿ : ಅಧಿಕಾರಿಗಳಿಗೆ ಸಿಎಂ ಸೂಚನೆ

ಬೆಂಗಳೂರು : ಕರಾವಳಿ ಸಂಸ್ಕೃತಿಯನ್ನು ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮಾಡುವುದರ ಜತೆಗೆ ಹೆಚ್ಚು ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ನಡೆದ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸದ್ಯ ಅನುಮೋದಿಸಿರುವ 45 ಯೋಜನೆಗಳಿಂದ 4500 ಉದ್ಯೋಗ ಸೃಷ್ಟಿಯಾಗುತ್ತದೆ. ಈ ಪ್ರಮಾಣ ಇನ್ನಷ್ಟು ಹೆಚ್ಚಾಗಬೇಕು ಎಂದು ಹೇಳಿದರು.
ಅತಿ ಉದ್ದದ ಸಮುದ್ರ ತೀರಗಳು ಇರುವ ಪ್ರದೇಶಗಳಲ್ಲಿ ರಾಜ್ಯದ ಕರಾವಳಿಯೂ ಸೇರಿದೆ. ನಮ್ಮ ಪರಿಸರಕ್ಕೆ ಧಕ್ಕೆ ಆಗದಂತೆ ಸಮುದ್ರ ತೀರಗಳನ್ನು ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಪರಿಗಣಿಸಬೇಕು. ಹೂಡಿಕೆದಾರರಿಗೆ ಸುಗಮವಾದ ಮತ್ತು ಸರಳವಾದ ಮಾರ್ಗಗಳನ್ನು ಸೃಜಿಸಬೇಕು. ಉದ್ಯಮಿಗಳಿಗೆ ಆಗುತ್ತಿರುವ ಇಲಾಖಾ ಕಿರಿಕಿರಿಗಳಿಗೆ ಪರಿಹಾರ ಕಂಡು ಹಿಡಿಯಬೇಕು ಎಂದು ಮುಖ್ಯಮಂತ್ರಿ ಖಡಕ್ ಸೂಚನೆ ನೀಡಿದರು.
ಕರಾವಳಿಯಲ್ಲಿ ಸಚಿವ ಸಂಪುಟ ಸಭೆ: ಕರಾವಳಿಯಲ್ಲಿ ಸಚಿವ ಸಂಪುಟ ಸಭೆ ನಡೆಸುತ್ತೇವೆ ಎಂದು ಘೋಷಿಸಿದ ಮುಖ್ಯಮಂತ್ರಿ, ಸಿಆರ್‍ಝಡ್ ಮತ್ತು ಅರಣ್ಯ ಇಲಾಖೆಯಿಂದ ಆಗುತ್ತಿರುವ ತಾಂತ್ರಿಕ ತಕರಾರುಗಳ ಬಗ್ಗೆ 15-20 ದಿನಗಳಲ್ಲಿ ವರದಿ ಸಿದ್ದಪಡಿಸಿ ಪರಿಹಾರಗಳನ್ನು ಸಿದ್ದಪಡಿಸುವಂತೆ ತಾಕೀತು ಮಾಡಿದರು.
ಕಲೆಗೆ ಪ್ರಾಶಸ್ತ್ಯ ಹೆಚ್ಚಿಸಬೇಕು: ಕರಾವಳಿಯ ಜನಪದ ಕಲೆ, ಸಂಗೀತಕ್ಕೆ ಪ್ರೋತ್ಸಾಹ ನೀಡಬೇಕು. ಸಿನಿಮಾ ಚಿತ್ರೀಕರಣಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸುವುದರಿಂದ ಕೇರಳ-ಗೋವಾ-ಕರ್ನಾಟಕದ ಸಿನಿಮಾ ಜಗತ್ತಿಗೆ ಹೆಚ್ಚು ಅನುಕೂಲ ಆಗಲಿದೆ ಎಂದು ಚಲನಚಿತ್ರ ನಟ-ನಿರ್ದೇಶಕ ರಿಷಬ್ ಶೆಟ್ಟಿ ಮಾಡಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ, ಅಭಿವೃದ್ಧಿ ಯೋಜನೆಗಳಿಗೆ ತಾಂತ್ರಿಕ ತೊಂದರೆ ಆಗದಂತೆ ನಾನಾ ಅನುಮತಿಗಳನ್ನು ಪಡೆಯಲು ಏಕ ಗವಾಕ್ಷಿ (ಸಿಂಗಲ್ ವಿಂಡೋ) ವ್ಯವಸ್ಥೆ ಜಾರಿಗೆ ತರುವ ಕುರಿತು ಒಲವು ವ್ಯಕ್ತಪಡಿಸಿದರು.
ಹೆಲಿ ಟೂರಿಸಂ ಅಭಿವೃದ್ಧಿಗೆ ಒತ್ತು ನೀಡಲು ಮುಖ್ಯಮಂತ್ರಿಗೆ ಉದ್ಯಮಿಗಳು ಮನವಿ ಮಾಡಿದರು. ಕರ್ನಾಟಕ ಪ್ರವಾಸೋದ್ಯಮ ನೀತಿಯಡಿಯಲ್ಲಿ 718.63 ಕೋಟಿ ರೂಪಾಯಿ ಅಂದಾಜು ಹೂಡಿಕೆಯ 45 ಯೋಜನೆಗಳನ್ನು ಅನುಮೋದಿಸಲಾಗಿರುವ ಬಗ್ಗೆ ಅಧಿಕಾರಿಗಳು ಮುಖ್ಯಮಂತ್ರಿಯ ಗಮನಕ್ಕೆ ತಂದರು.
ವಿಶೇಷ ಕ್ಷೇತ್ರವಾಗಿ ಕರಾವಳಿ ಪ್ರವಾಸೋದ್ಯಮ: ಪ್ರವಾಸೋದ್ಯಮ ವಲಯಗಳು ಮತ್ತು ಬೃಹತ್ ಪ್ರವಾಸೋದ್ಯಮ ಯೋಜನೆಗಳು, ಕರಾವಳಿ ಮೇಳಗಳು, ಉತ್ಸವವಗಳು ಮತ್ತು ಮಾರ್ಕೆಟಿಂಗ್, ಕರಾವಳಿ ಸಂಸ್ಕೃತಿ, ಆಚರಣೆ, ಹೆಮ್ಮೆಯನ್ನು ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮತ್ತು ಪ್ರಚಾರ ಮಾಡುವುದು. ಸರಕಾರದ ಈ ಮಹತ್ವಾಕಾಂಕ್ಷೆಯನ್ನು ಸಾಧಿಸಲು ಮತ್ತು ಬಂಡವಾಳ ಆಕರ್ಷಿಸಲು ಸಹಾಯಧನ, ಬಡ್ಡಿ ಸಹಾಯಧನ ಮತ್ತು ರಿಯಾಯ್ತಿಗಳ ಮೂಲಕ ಪ್ರೋತ್ಸಾಹಗಳನ್ನು ನೀಡುವ ಬಗ್ಗೆ ಮುಖ್ಯಮಂತ್ರಿ ಒತ್ತು ನೀಡಿದರು.
ಸಭೆಯಲ್ಲಿ ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್, ಶಾಸಕರಾದ ಜಿ.ಟಿ.ದೇವೇಗೌಡ, ಸತೀಶ್ ಸೈಲ್, ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀನಿವಾಸ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ತ್ರಿಲೋಕ್ ಚಂದ್ರ ಮತ್ತಿತರರು ಉಪಸ್ಥಿತರಿದ್ದರು.






