ಕನ್ನಡ ಭಾಷೆ ಶಿಕ್ಷಕರ ನೇಮಕಾತಿಗೆ ಆದ್ಯತೆ ನೀಡಿ: ಡಾ. ಪುರುಷೋತ್ತಮ ಬಿಳಿಮಲೆ

ಡಾ. ಪುರುಷೋತ್ತಮ ಬಿಳಿಮಲೆ
ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯು ಆರಂಭಿಸಿರುವ 15ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಕನ್ನಡ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಕೈಬಿಟ್ಟಿರುವುದು ಕನ್ನಡ ಭಾಷೆ, ಭಾಷಾ ನೀತಿಗೆ ಗಂಭೀರ ಧಕ್ಕೆಯುಂಟು ಮಾಡುವ ಕ್ರಮ. ಆದುದರಿಂದ ಸರಕಾರ ಶಿಕ್ಷಕರ ನೇಮಕಾತಿಯಲ್ಲಿ ಕನ್ನಡ ಶಿಕ್ಷಕರ ಹುದ್ದೆಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ.
ಶುಕ್ರವಾರ ಈ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಅವರು, ಶಾಲಾ ಶಿಕ್ಷಣ ಇಲಾಖೆಯ ಈ ಕ್ರಮ ರಾಜ್ಯದ ಸರಕಾರಿ ಶಾಲೆಗಳನ್ನು ಹಂತ ಹಂತವಾಗಿ ಆಂಗ್ಲ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸುವ ದಿಕ್ಕಿನ ಸ್ಪಷ್ಟ ಸೂಚನೆಯಾಗಿದೆ ಎಂದು ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದ ಹಾಗೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಸಾವಿರಾರು ಪ್ರತಿಭಾವಂತ ಅಭ್ಯರ್ಥಿಗಳಿಗೆ ಸಮಾನ ಅವಕಾಶದ ತತ್ವವನ್ನು ನಿರಾಕರಿಸುವ ಪ್ರಕ್ರಿಯೆಯಾಗಿದೆ. ಆದ್ದರಿಂದ ಈ ಕೂಡಲೇ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿ ಇಲಾಖೆಯ ಕನ್ನಡ ವಿರೋಧಿ ಕ್ರಮಕ್ಕೆ ತಡೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ವಿಶ್ವದಾದ್ಯಂತ ನಡೆದಿರುವ ಶಿಕ್ಷಣ ಸಂಶೋಧನೆಗಳು ಮಗುವಿನ ಬೌದ್ಧಿಕ ಬೆಳವಣಿಗೆ, ಸೃಜನಶೀಲತೆ ಮತ್ತು ಕಲಿಕೆಯ ಗುಣಮಟ್ಟಕ್ಕೆ ಮಾತೃ ಭಾಷೆಯೇ ಅತ್ಯುತ್ತಮ ಮಾಧ್ಯಮ ಎಂಬುದನ್ನು ಪುನರುಚ್ಛರಿಸಿವೆ. ಇಂತಹ ಸಂದರ್ಭದಲ್ಲಿ ಮಾತೃ ಭಾಷೆಯ ಸ್ಥಾನವನ್ನು ದುರ್ಬಲಗೊಳಿಸುವ ಯಾವುದೇ ನೀತಿ ಕನ್ನಡದ ಭವಿಷ್ಯಕ್ಕೆ ಮಾರಕವಾಗುತ್ತದೆ. ಇದರ ಪರಿಣಾಮವಾಗಿ ಮುಂದಿನ ಪೀಳಿಗೆಗೆ ಕನ್ನಡದೊಂದಿಗೆ ಹೊಂದಿರುವ ಭಾವನಾತ್ಮಕ, ಸಾಂಸ್ಕೃತಿಕ ಮತ್ತು ಜ್ಞಾನಾತ್ಮಕವಾದ ಸಂಬಂಧವೂ ಕ್ಷೀಣಿಸುವ ಅಪಾಯ ಎದುರಾಗುತ್ತದೆ ಎಂದು ತಿಳಿಸಿದ್ದಾರೆ.
ಸರಕಾರವು ಶಿಕ್ಷಕರ ನೇಮಕಾತಿಯಲ್ಲಿ ಕನ್ನಡ ಶಿಕ್ಷಕರ ಹುದ್ದೆಗಳಿಗೆ ಅವಕಾಶ ಕಲ್ಪಿಸಬೇಕು. ವಿವಿಧ ವಿಷಯಗಳ ಶಿಕ್ಷಕರ ನೇಮಕಾತಿಗೆ ವಿಧಿಸಿರುವ ಆಂಗ್ಲಭಾಷೆ ಪ್ರೌಢಿಮೆ ಪರೀಕ್ಷೆಯನ್ನು ಹಿಂಪಡೆಯಬೇಕು. ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡಕ್ಕೆ ಸಲ್ಲಬೇಕಾದ ಸಂವಿಧಾನಬದ್ಧ ಮತ್ತು ನಾಡಿನ ಆಶಯಕ್ಕೆ ತಕ್ಕ ಪ್ರಾಮುಖ್ಯತೆಯನ್ನು ಕಾಪಾಡುವಲ್ಲಿ ಸರಕಾರವು ದೃಢ ನಿಲುವನ್ನು ಪ್ರಕಟಿಸಬೇಕು ಎಂದು ಒತ್ತಾಯಿಸಿದ್ದಾರೆ.






