ʼಮಂಡ್ಯದಲ್ಲಿ ಜಾಗತಿಕ ಕ್ರೀಡಾ ಸೌಲಭ್ಯ; ಕೇಂದ್ರದಿಂದ 14 ಕೋಟಿ ರೂ.ಮಂಜೂರು’ : ಎಚ್ಡಿಕೆ ಮನವಿಗೆ ಸ್ಪಂದಿಸಿದ ಕೇಂದ್ರ ಕ್ರೀಡಾ ಸಚಿವ ಮಾಂಡವೀಯ

ಸಾಂದರ್ಭಿಕ ಚಿತ್ರ | PC : PC : freepik
ಬೆಂಗಳೂರು : ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜಾಗತಿಕ ಗುಣಮಟ್ಟದ ಕ್ರೀಡಾ ಮೂಲಸೌಕರ್ಯ ಕಲ್ಪಿಸುವ ಉದ್ದೇಶಕ್ಕಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಮನವಿಯ ಮೇರೆಗೆ ಕೇಂದ್ರ ಸರಕಾರವು 14 ಕೋಟಿ ರೂ.ಮಂಜೂರು ಮಾಡಿದೆ.
ಮಂಡ್ಯ ಜಿಲ್ಲೆಯಲ್ಲಿ ಕ್ರೀಡಾ ಸೌಕರ್ಯವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಕುಮಾರಸ್ವಾಮಿ ಅವರು ಕೇಂದ್ರದ ಕ್ರೀಡಾ ಮತ್ತು ಯುವಜನ ಸಬಲೀಕರಣ ಖಾತೆ ಸಚಿವ ಮನ್ಸುಖ್ ಮಾಂಡವೀಯ ಅವರಿಗೆ ಪತ್ರ ಬರೆದು ವಿನಂತಿಸಿದ್ದರು. ಅದಕ್ಕೆ ಸ್ಪಂದಿಸಿ, ಖೇಲೋ ಇಂಡಿಯಾ ಯೋಜನೆಯಡಿ ಮಂಡ್ಯ ಜಿಲ್ಲೆಯಲ್ಲಿ ಬಹುಪಯೋಗಿ ಕ್ರೀಡಾ ಸೌಲಭ್ಯ ನಿರ್ಮಾಣಕ್ಕೆ 14 ಕೋಟಿ ರೂ.ಗಳನ್ನು ಕ್ರೀಡಾ ಸಚಿವರು ಮಂಜೂರು ಮಾಡಿದ್ದಾರೆ.
ಈ ಅನುಮೋದಿತ ವೆಚ್ಚದಲ್ಲಿ ಮಂಡ್ಯದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಬಹುಪಯೋಗಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಮಂಡ್ಯ ಜಿಲ್ಲೆಯ ಅನೇಕ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ ಮತ್ತು ರಾಷ್ಟ್ರವನ್ನು ಪ್ರತಿನಿಧಿಸಿದ್ದಾರೆ. ಅನೇಕ ಯುವ ಪ್ರತಿಭೆಗಳು ಜಿಲ್ಲೆಯಲ್ಲಿ ಅವಕಾಶ ಸಿಗದೆ ಹೊರ ಭಾಗಗಳಲ್ಲಿ ತರಬೇತಿಗೆ ಹೋಗುತ್ತಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಅನೇಕ ಕ್ರೀಡಾಪಟುಗಳು ರಾಷ್ಟ್ರೀಯ ಶಿಬಿರಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇಂತಹ ಸೌಕರ್ಯವನ್ನು ಮಂಡ್ಯದಲ್ಲಿಯೆ ಒದಗಿಸುವ ಉದೇಶದಿಂದ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಇದು ಉತ್ತಮ ಯೋಜನೆಯಾಗಿದೆ. ನನ್ನ ಮನವಿಗೆ ಸ್ಪಂದಿಸಿದ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರಿಗೆ ಧನ್ಯವಾದ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಜಿಲ್ಲೆಯ ಕ್ರೀಡೆಗೆ ಬಹುದೊಡ್ಡ ಉತ್ತೇಜನ: ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರವು ದೇಶದ ಉದ್ದಗಲಕ್ಕೂ ಜಾಗತಿಕ ಗುಣಮಟ್ಟದ ಕ್ರೀಡಾ ಸೌಕರ್ಯ ಅಭಿವೃದ್ಧಿಪಡಿಸಿ ಗ್ರಾಮೀಣ ಮಟ್ಟದ ಕ್ರೀಡಾಪಟುಗಳಿಗೆ ಪ್ರೋ ತ್ಸಾಹ ನೀಡುತ್ತಿದೆ. ಈ ಯೋಜನೆಯ ಭಾಗವಾಗಿ ಮಂಡ್ಯದಲ್ಲಿ 14 ಕೋಟಿ ರೂ.ವೆಚ್ಚದಲ್ಲಿ ಅತ್ಯುತ್ತಮ ಗುಣಮಟ್ಟದ ಕ್ರೀಡಾ ಸೌಲಭ್ಯವನ್ನು ನಿರ್ಮಾಣ ಮಾಡಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಬಹುಪಯೋಗಿ ಕ್ರೀಡಾ ಸೌಲಭ್ಯಕ್ಕೆ ಈಗ ಅನುಮೋದನೆ ದೊರೆತಿರುವುದರಿಂದ ಮಂಡ್ಯ ಕ್ರೀಡಾ ಅಭಿವೃದ್ಧಿ ಮತ್ತು ಉತ್ತೇಜನದಲ್ಲಿ ಹೊಸ ಯುಗಕ್ಕೆ ನಾಂದಿಯಾಗಲಿದೆ. ಈ ಕ್ರೀಡಾ ಸಮುಚ್ಚಯದಲ್ಲಿ ಯುವ ಕ್ರೀಡಾಪಟುಗಳ ತರಬೇತಿ, ಜಿಲ್ಲಾ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸುವುದು, ಸಾರ್ವಜನಿಕರಲ್ಲಿ ಫಿಟ್ನೆಸ್ ಅನ್ನು ಉತ್ತೇಜಿಸುವ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಈ ಮಂಜೂರಾತಿಯು ಮಂಡ್ಯಕ್ಕೆ ಮಹತ್ವದ ಕೊಡುಗೆಯಾಗಿದೆ ಎಂದು ಅವರು ಹೇಳಿದ್ದಾರೆ.
ಕೃಷಿ ಆಧರಿತವಾದ ಮಂಡ್ಯ ಜಿಲ್ಲೆಯೂ ಪ್ರತಿಭೆಗಳ ಆಗರ. ಆನೇಕ ಪ್ರತಿಭಾವಂತರು ರಾಷ್ಟ್ರ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಈ ನಿಟ್ಟಿನಲ್ಲಿ ಕ್ರೀಡೆಯನ್ನು ಉತ್ತೇಜಿಸುವುದು ಅಗತ್ಯವಾಗಿದೆ. ಆರೋಗ್ಯವಂತ ಸಶಕ್ತ ಮಂಡ್ಯ ಜಿಲ್ಲೆ ನಿರ್ಮಾಣಕ್ಕೆ ಈ ಯೋಜನೆ ಪೂರಕವಾಗಿದೆ. ಇದು ಪ್ರಧಾನಿ ಮೋದಿ ಅವರ ಕನಸು ಕೂಡ ಆಗಿದೆ ಎಂದು ಕುಮಾರಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







