6 ಸಾವಿರ ಗ್ರಾ.ಪಂ.ಗಳಲ್ಲಿ ಕೆಪಿಎಸ್ ಶಾಲೆ ಆರಂಭಿಸುವ ಗುರಿ: ಸಚಿವ ಮಧು ಬಂಗಾರಪ್ಪ

ಬೆಂಗಳೂರು: ರಾಜ್ಯದಲ್ಲಿ 6 ಸಾವಿರ ಗ್ರಾಮ ಪಂಚಾಯಿತಿಗಳಿದ್ದು, ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಒಂದರಂತೆ 6 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆ(ಕೆಪಿಎಸ್)ಗಳನ್ನು ಆರಂಭಿಸುವ ಗುರಿಯನ್ನು ನಮ್ಮ ಸರಕಾರ ಹೊಂದಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಮಂಗಳವಾರ ನಗರದ ದೇವರಾಜ ಅರಸು ಭವನದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಿರ್ದೇಶನಾಲಯ ವತಿಯಿಂದ ದೇಶದ ಪ್ರಥಮ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಝಾದ್ ಅವರ ಜನ್ಮದಿನ ಪ್ರಯುಕ್ತ ಆಯೋಜಿಸಲಾಗಿದ್ದ ‘ರಾಷ್ಟ್ರೀಯ ಶಿಕ್ಷಣ ದಿನ-2025’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ನಮ್ಮ ಸರಕಾರ ಅಧಿಕಾರಕ್ಕೆ ಬಂದಾಗ 308 ಇದ್ದ ಕೆಪಿಎಸ್ ಶಾಲೆಗಳ ಸಂಖ್ಯೆ ಈಗ 900 ಆಗಿದೆ. ಬಜೆಟ್‍ನಲ್ಲಿ 500 ಕೆಪಿಎಸ್ ಶಾಲೆಗಳನ್ನು ಆರಂಭಿಸುವುದಾಗಿ ಘೋಷಿಸಲಾಗಿತ್ತು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಕ್ಷರ ಆವಿಷ್ಕಾರ ಯೋಜನೆಯಡಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಹೊಸದಾಗಿ 100 ಕೆಪಿಎಸ್ ಶಾಲೆಗಳನ್ನು ಮಾಡುತ್ತಿರುವುದಕ್ಕೆ ನಾನು ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.
ಕೆಪಿಎಸ್ ಶಾಲೆಗಳಲ್ಲಿ ಒಂದನೆ ತರಗತಿಯಿಂದ ಕಂಪ್ಯೂಟರ್ ಕಲಿಕೆ. 6ನೆ ತರಗತಿಯಲ್ಲಿ ಕೌಶಲ್ಯ ತರಬೇತಿ ನೀಡಲಾಗುತ್ತದೆ. ರಾಷ್ಟ್ರೀಯ ಶಿಕ್ಷಣ ದಿನಾಚರಣೆಗೆ ಗೌರವ ಬರಬೇಕಾದರೆ ಆಝಾದ್ ಅವರಿಗೆ ಗೌರವ ಕೊಡಬೇಕು. ಮಕ್ಕಳಿಗೆ ದಾರಿ ತಪ್ಪಿಸಲು ಅವಕಾಶ ನೀಡದೆ, ಒಳ್ಳೆಯ ಶಿಕ್ಷಣ ಕೊಡಬೇಕು ಅನ್ನೋದು ನಮ್ಮ ಉದ್ದೇಶ ಎಂದು ಮಧು ಬಂಗಾರಪ್ಪ ಹೇಳಿದರು.
ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಪಠ್ಯಕ್ರಮ ಪರಿಷ್ಕರಣೆ ಮಾಡುವುದಾಗಿ ಭರವಸೆ ನೀಡಿದ್ದೆವು. ನಾನು ಶಿಕ್ಷಣ ಸಚಿವನಾದ ನಂತರ ಸಹಿ ಹಾಕಿದ ಮೊದಲ ಕಡತ ಪಠ್ಯಕ್ರಮ ಪರಿಷ್ಕರಣೆಗೆ ಸಂಬಂಧಿಸಿದ್ದು. ಪಠ್ಯ ಪುಸ್ತಕಗಳಲ್ಲಿ ಶಿಕ್ಷಣ ಇರಬೇಕೆ ಹೊರತು, ಯಾವುದೋ ಒಂದು ಪಕ್ಷದ ಪರವಾದ ಸಿದ್ಧಾಂತ ಇರಬಾರದು. ರಾಜ್ಯ ಸರಕಾರಿ, ಅನುದಾನಿತ, ಖಾಸಗಿ ಸೇರಿ ಒಟ್ಟು 57 ಸಾವಿರಕ್ಕಿಂತ ಹೆಚ್ಚು ಶಾಲೆಗಳು ಇವೆ. ಇದರಲ್ಲಿ ಸುಮಾರು 1.16 ಕೋಟಿ ಮಕ್ಕಳು ಓದುತ್ತಿದ್ದಾರೆ ಎಂದು ಮಧು ಬಂಗಾರಪ್ಪ ಹೇಳಿದರು.







