ಔಷಧಿ ಅಂಗಡಿ ಬಂದ್ ಕರೆಗೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ

ಬೆಂಗಳೂರು: ದೇಶದಲ್ಲಿ ಇ-ಫಾರ್ಮಸಿ ಹಾಗೂ ಆನ್‍ಲೈನ್ ಮೂಲಕ ಔಷಧ ಮಾರಾಟ ನಿಲ್ಲಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಕೇಂದ್ರ ಸರಕಾರ ಈಡೇರಿಸುವಂತೆ ಆಗ್ರಹಿಸಿ ರಾಷ್ಟ್ರವ್ಯಾಪಿ ಕರೆ ನೀಡಿದ್ದ ಔಷಧಿ ಅಂಗಡಿ ಬಂದ್ ಹೋರಾಟಕ್ಕೆ ಕರ್ನಾಟಕ ರಾಜ್ಯದಲ್ಲಿಯೂ ಉತ್ತಮ ಸ್ಪಂದನೆ ಸಿಕ್ಕಿದ್ದು, ಬುಧವಾರ ದಿನಪೂರ್ತಿ ವ್ಯಾಪಾರಿಗಳು ಮಳಿಗೆಗಳನ್ನು ಬಂದ್ ಮಾಡುವ ಮೂಲಕ ಹೋರಾಟವನ್ನು ಬೆಂಬಲಿಸಿದರು.
ದೇಶ ವ್ಯಾಪಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ ನೀಡಿದ್ದ ಕರೆ ಹಿನ್ನೆಲೆ ಬುಧವಾರ ಬೆಳಗ್ಗೆಯಿಂದಲೇ ರಾಜ್ಯದ ಬೆಂಗಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ, ಮಂಗಳೂರು, ಬೀದರ್, ಕಲಬುರ್ಗಿ, ಧಾರವಾಡ, ಬಾಗಲಕೋಟೆ ಸೇರಿದಂತೆ ಹಲವು ಪಟ್ಟಣ, ತಾಲೂಕು ವ್ಯಾಪ್ತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಔಷಧಿ ಅಂಗಡಿಗಳು ಒಂದು ದಿನದ ಮಟ್ಟಿಗೆ ವ್ಯಾಪಾರ ವಾಹಿವಾಟು ಸ್ಥಗಿತಗೊಳಿಸಿದ್ದ ದೃಶ್ಯ ಕಂಡುಬಂದಿತು.
ಪ್ರತಿಭಟನೆ, ಮನವಿ: ಆನ್‍ಲೈನ್‍ನಲ್ಲಿ ದೊಡ್ಡ ಕಂಪೆನಿಗಳು ಹೆಚ್ಚು ರಿಯಾಯಿತಿ ನೀಡಿ ಔಷಧ ಮಾರಾಟ ಮಾಡುತ್ತಿವೆ. ಈ ಮೂಲಕ ನಕಲಿ ಔಷಧಗಳೂ ಮಾರುಕಟ್ಟೆ ಪ್ರವೇಶಿಸುತ್ತಿವೆ. ಹೀಗಾಗಿ, ಆನ್‍ಲೈನ್‍ನಲ್ಲಿ ಔಷಧ ಮಾರಾಟ ಮಾಡುವುದನ್ನು ಕೇಂದ್ರ ಸರಕಾರ ತಕ್ಷಣ ನಿಲ್ಲಿಸಬೇಕೆಂದು ಆಗ್ರಹಿಸಿ ಶಿವಮೊಗ್ಗ, ಬಳ್ಳಾರಿ, ಮೈಸೂರು ಸೇರಿದಂತೆ ನಾನಾ ಜಿಲ್ಲಾದ್ಯಂತ ಔಷಧ ವ್ಯಾಪಾರಿಗಳು ಅಂಗಡಿ ಬಂದ್ ಮಾಡಿ ಪ್ರತಿಭಟನೆ ನಡೆಸುವ ಜತೆಗೆ ಎಲ್ಲ ಔಷಧ ವ್ಯಾಪಾರಿಗಳು ಜಿಲ್ಲಧಿಕಾರಿಗಳ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದರು.
ಕೋವಿಡ್ ಸಂದರ್ಭದಲ್ಲಿ ಕೇಂದ್ರ ಸರಕಾರ ಆನ್‍ಲೈನ್ ಔಷಧಿ ವ್ಯಾಪಾರಕ್ಕೆ ಅವಕಾಶ ನೀಡಿತ್ತು. ಆದರೆ ಅದು ಈಗಲೂ ಮುಂದುವರೆದಿದೆ. ನಿಷೇಧಿತ ಔಷಧಿಗಳನ್ನು ಆನ್‍ಲೈನ್ ಮೂಲಕ ಮಾರಾಟ ಮಾಡಲಾಗುತ್ತಿದೆ. ನಮಗೆ ಔಷಧಿ ಮಾರಾಟಕ್ಕೆ ನೂರೆಂಟು ನಿಯಮಗಳಿವೆ. ಆನ್‍ಲೈನ್ ಮಾರಾಟಕ್ಕೆ ಮಾತ್ರ ಯಾವುದೇ ಕಡಿವಾಣ, ನೀತಿ ನಿಯಮ ಇಲ್ಲ. ನಕಲಿ ಔಷಧಿ ಮಾರಾಟ ರೋಗಿಗೆ ಔಷಧಿ ಸೇವನೆ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ ಮತ್ತು ಪ್ರತಿಶತ 40ರಷ್ಟು ಕಮಿಷನ್ ನೀಡಲಾಗುತ್ತಿದೆ ಎಂದು ವರ್ತಕರು ಕೇಂದ್ರ ಸರಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬಂದ್ ಪ್ರತಿಕ್ರಿಯೆ ಕುರಿತು ‘ವಾರ್ತಾಭಾರತಿ ಪತ್ರಿಕೆ’ಯೊಂದಿಗೆ ಮಾತನಾಡಿದ ಬೆಂಗಳೂರು ಫಾರ್ಮ ರಿಟೇಲರ್ಸ್ ಅಂಡ್ ಡಿಸ್ಟ್ರೀಬ್ಯೂಟರ್ಸ್ ಪೋರಂ ಅಧ್ಯಕ್ಷ ಆರ್.ರಘುನಾಥ್ ರೆಡ್ಡಿ, ರಾಜ್ಯದಲ್ಲಿ ಸುಮಾರು 26 ಸಾವಿರಕ್ಕೂ ಅಧಿಕ ಔಷಧಿ ಮಳಿಗೆಗಳು ಹಾಗೂ ಬೆಂಗಳೂರಿನಲ್ಲಿ ಸುಮಾರು 6,500ಕ್ಕೂ ಹೆಚ್ಚು ಮಳಿಗೆಗಳು ಇದ್ದು, ಬುಧವಾರ ಬಂದ್ ಕರೆ ಹಿನ್ನೆಲೆ ಶೇ.90ರಷ್ಟು ಭಾಗದ ಮಳಿಗೆಗಳು ಬಂದ್ ಮಾಡಲಾಗಿತ್ತು ಎಂದರು.
ಜಿಲ್ಲಾ ವ್ಯಾಪ್ತಿಯ ಚಿಲ್ಲರೆ ಔಷಧ ಪೂರೈಕೆಗಳು ಬಹುತೇಕ ಬಂದ್ ಆಗಿತ್ತು. ಆದರೆ, ಸಾರ್ವಜನಿಕರ ಅನುಕೂಲಕ್ಕೆ ಹಲವು ಪ್ರದೇಶಗಳಲ್ಲಿ ತುರ್ತು ಔಷಧ ಮತ್ತು ಅಗತ್ಯ ವೈದ್ಯಕೀಯ ಸೇವೆಗಳು ಲಭ್ಯವಿದ್ದವು. ಒಟ್ಟಿನಲ್ಲಿ ನಮ್ಮ ಬೇಡಿಕೆಗಳಿಗೆ ಕೇಂದ್ರ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಹೂಡಲು ಹಿಂಜರಿಯುವುದಿಲ್ಲ ಎಂದೂ ಅವರು ಉಲ್ಲೇಖಿಸಿದರು.
ಔಷಧಿ ಮಳಿಗೆದಾರರ ಬೇಡಿಕೆಗಳೇನು?
► ಇ-ಫಾರ್ಮಸಿ ಕಾರ್ಯಾಚರಣೆಗೆ ಅನುಮತಿ ನೀಡುವ 2018ರ ಜಿಎಸ್‍ಆರ್ 817 (ಇ) ಅಧಿಸೂಚನೆಯನ್ನು ತಕ್ಷಣವೇ ಹಿಂಪಡೆಯಬೇಕು.
► ಕಾರ್ಪೋರೇಟ್ ಸಂಸ್ಥೆಗಳ ಭಾರಿ ರಿಯಾಯಿತಿ ದರ ಸಮರಕ್ಕೆ ಬ್ರೇಕ್ ಹಾಕಿ, ಎಲ್ಲ ವ್ಯಾಪಾರಿಗಳಿಗೂ ಸಮಾನ ಮುಕ್ತ ಮಾರುಕಟ್ಟೆ ಕಲ್ಪಿಸಬೇಕು.
►ಕೋವಿಡ್-19 ಅವಧಿಯಲ್ಲಿ ಮನೆಬಾಗಿಲಿಗೆ ಔಷಧಿ ತಲುಪಿಸಲು ಅನುಮತಿ ನೀಡಿದ್ದ ಜಿಎಸ್‍ಆರ್ 220 (ಇ) ಆದೇಶವನ್ನು ರದ್ದುಗೊಳಿಸಬೇಕು.






