ಶಾಸಕಾಂಗ ಪಕ್ಷದ ಸಭೆ ಕರೆಯಲು ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಬೇಳೂರು ಆಗ್ರಹ

ಬೆಂಗಳೂರು : ‘ಕಾಂಗ್ರೆಸ್ ಪಕ್ಷದಲ್ಲಿ ಗೊಂದಲಗಳು ಇರುವ ಹಿನ್ನಲೆಯಲ್ಲಿ ಕೂಡಲೇ ಶಾಸಕಾಂಗ ಪಕ್ಷದ ಸಭೆಯನ್ನು ಕರೆದರೆ ಉತ್ತಮ. ಬಹಿರಂಗವಾಗಿ ಹೇಳಿಕೆ ಕೊಟ್ಟಿರುವ ಎಲ್ಲರನ್ನು ಕರೆದು ಎಚ್ಚರಿಕೆ ಕೊಡಬೇಕು’ ಎಂದು ಶಿವಮೊಗ್ಗ ಜಿಲ್ಲೆಯ ಸಾಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಬೇಳೂರು ಆಗ್ರಹಿಸಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿದಿಗಳ ಜತೆ ಮಾತನಾಡಿದ ಅವರು, ವಸತಿ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಸ್ವಪಕ್ಷದ ಶಾಸಕರೇ ಆರೋಪ ಮಾಡಿದ ಹಿನ್ನೆಲೆಯಲ್ಲಿ ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಸ್ನೇಹಿತನಾಗಿ ನಾನು ಅವರ ರಾಜೀನಾಮೆಗೆ ಆಗ್ರಹಿಸಿದ್ದೇನೆ’ ಎಂದು ಸ್ಪಷ್ಟನೆ ನೀಡಿದರು.
ಈಗಾಗಲೆ ಖುದ್ದು ಸಚಿವ ಝಮೀರ್ ಅಹ್ಮದ್ ಅವರೂ ಬಡವರ ಮನೆ ಹಂಚಿಕೆಯಲ್ಲಿ ಹಣವನ್ನು ಪಡೆಯುವಂತಹ ದಾರಿದ್ರ್ಯ ನನಗೆ ಇನ್ನೂ ಬಂದಿಲ್ಲ ಎಂದು ತಿಳಿಸಿದ್ದಾರೆ. ಅವರ ವಿರುದ್ಧ ಆರೋಪ ಬಂದಿದೆ. ಆದರೆ, ಅವರು ಅಪರಾಧಿಯಲ್ಲ’ ಎಂದು ಗೋಪಾಲಕೃಷ್ಣ ಬೇಳೂರು ವಿವರಣೆ ನೀಡಿದರು.
ಝಮೀರ್ ಅಹ್ಮದ್ ಅವರು ಒಳ್ಳೆಯ ವ್ಯಕ್ತಿ, ತಮ್ಮ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಎಲ್ಲವನ್ನು ಬಗೆಹರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಹೀಗಾಗಿ ಮುಂದೆ ಏನಾಗುತ್ತೋ ಕಾದು ನೋಡೋಣ. ಆದರೆ, ನಾನು ಒಳ್ಳೆಯ ಉದ್ದೇಶದಿಂದ ಸಚಿವರ ರಾಜಿನಾಮೆ ಕೇಳಿದ್ದೇ ಅಷ್ಟೇ ಎಂದು ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಸ್ವಪಕ್ಷದ ಶಾಸಕರೇ ಆಪಾದನೆ ಮಾಡಿದ ಹಿನ್ನೆಲೆಯಲ್ಲಿ ರಾಜೀನಾಮೆ ಕೊಟ್ಟು ಬಿಡಿ ಎಂದಿದ್ದೆ. ಅವರ ತಪ್ಪು ಮಾಡಿಲ್ಲ ಎಂಬುದು ತನಿಖೆಯಿಂದ ಸಾಬೀತು ಆದರೆ, ಆ ಬಳಿಕ ಪುನಃ ಸಚಿವ ಸಂಪುಟ ಸೇರಲು ಯಾರೂ ಅಡ್ಡಿಪಡಿಸುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.
ಅನುದಾನ ಕೊರತೆ ಇಲ್ಲ: ನಮ್ಮ ಸರಕಾರದಲ್ಲಿ ಯಾವುದೇ ಸಂದರ್ಭದಲ್ಲಿಯೂ ಅನುದಾನ ಕೊರತೆ ಕಾಡಿಲ್ಲ. ಸಿಎಂ, ಡಿಸಿಎಂ ಎಲ್ಲರಿಗೂ ಒಳ್ಳೆಯ ರೀತಿಯಲ್ಲಿ ಅನುದಾನ ಕೊಟ್ಟಿದ್ದಾರೆ. ಅನುದಾನ ವಿಳಂಬವಾದರೂ ಬರುತ್ತದೆ. ಶಾಸಕ ರಾಜು ಕಾಗೆ ಯಾವ ಕಾರಣಕ್ಕೆ ಹೇಳಿಕೆ ನೀಡಿದ್ದಾರೆಂಬುದು ನನಗೆ ಗೊತ್ತಿಲ್ಲ ಎಂದು ಅವರು ತಿಳಿಸಿದರು.







