‘ವಿದ್ಯಾರ್ಥಿ ಸ್ನೇಹಿ ಸಾರಿಗೆ’ ವ್ಯವಸ್ಥೆ ಜಾರಿಗೊಳಿಸಲು ಸರಕಾರ ತೀರ್ಮಾನ

ಸಾಂದರ್ಭಿಕ ಚಿತ್ರ
ಬೆಂಗಳೂರು: ಎಸೆಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಶಾಲಾ ಪ್ರಯಾಣವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಹೊಸದಾಗಿ ‘ವಿದ್ಯಾರ್ಥಿ ಸ್ನೇಹಿ ಸಾರಿಗೆ’ ವ್ಯವಸ್ಥೆ ಜಾರಿಗೊಳಿಸಲು ತೀರ್ಮಾನಿಸಿದೆ.
‘ಶಾಲಾ ವಿದ್ಯಾರ್ಥಿಗಳ ಸುರಕ್ಷತೆಗೆ ಸೂಕ್ತ ಸಾರಿಗೆ ಸೌಲಭ್ಯ ಒದಗಿಸಲು ‘ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಶಿಫಾರಸ್ಸು ಮಾಡಿತ್ತು. ಆದನ್ನು ಆಧರಿಸಿ ಮೇಲ್ಕಂಡ ಯೋಜನೆ ಜಾರಿಗೆ ಸರಕಾರ ನಿರ್ಧರಿಸಿದೆ’ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ರವಿವಾರ ‘ವಾರ್ತಾಭಾರತಿ’ ಪತ್ರಿಕೆಯೊಂದಿಗೆ ದೂರವಾಣಿಯಲ್ಲಿ ಈ ವಿಷಯ ತಿಳಿಸಿದರು.
‘ರಾಜ್ಯದಲ್ಲಿ ಗ್ರಾಮೀಣ ಮತ್ತು ಹಿಂದುಳಿದ ವರ್ಗಗಳ ಮಕ್ಕಳು ಹೆಚ್ಚಾಗಿ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರ್ವಜನಿಕ ಸಾರಿಗೆ ಸಂಸ್ಥೆ ಬಸ್ಗಳನ್ನು ಅವಲಂಬಿಸಿದ್ದಾರೆ. ಇತ್ತೀಚೆಗೆ ಮಕ್ಕಳಿಬ್ಬರು ಬಸ್ನಿಂದ ಬಿದ್ದು ಗಾಯಗೊಂಡ ಪ್ರಕರಣ ವರದಿಯಾಗಿತ್ತು. ಇಂತಹ ಅವಘಡಗಳನ್ನು ತಪ್ಪಿಸಲು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ವಿದ್ಯಾರ್ಥಿ ಸ್ನೇಹಿ ಸಾರಿಗೆ ವ್ಯವಸ್ಥೆ ಜಾರಿಗೆ ಶಿಫಾರಸು ಮಾಡಿತ್ತು.
ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ: ರಾಜ್ಯದಲ್ಲಿ ಈಗಾಗಲೇ ಶಕ್ತಿ ಯೋಜನೆಯಡಿ ಹೆಣ್ಣು ಮಕ್ಕಳ ಉಚಿತ ಪ್ರಯಾಣಕ್ಕೆ ಅವಕಾಶವಿದೆ. ಅದೇ ರೀತಿಯಲ್ಲಿ ಉಚಿತ ಪ್ರಯಾಣ ಅವಕಾಶವನ್ನು ದ್ವಿತೀಯ ಪಿಯುಸಿ ವರೆಗೆ ಗಂಡು ಮಕ್ಕಳಿಗೂ ವಿಸ್ತರಿಸಬೇಕು. ಪ್ರತಿ, ಶಾಲೆ-ಕಾಲೇಜು ಮಾರ್ಗದಲ್ಲಿ ಓದುತ್ತಿರುವ ಮಕ್ಕಳ ನಿಖರ ದತ್ತಾಂಶ ಸಂಗ್ರಹಿಸಿ ರೂಟ್ ಪ್ಲಾನಿಂಗ್ ಮಾಡಬೇಕು. ಶಿಕ್ಷಣಕ್ಕೆ ಯಾವುದೇ ರೀತಿಯಲ್ಲಿಯೂ ಅಡ್ಡಿಯಾಗದ ರೀತಿಯಲ್ಲಿ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಆಯೋಗ ಶಿಫಾರಸ್ಸಿನಲ್ಲಿ ತಿಳಿಸಿತ್ತು. ಆ ಹಿನ್ನೆಲೆಯಲ್ಲಿ ಹೆಚ್ಚು ವಿದ್ಯಾರ್ಥಿಗಳಿರುವ ಗ್ರಾಮೀಣ ಪ್ರದೇಶದ ವಿವಿಧ ಮಾರ್ಗಗಳಲ್ಲಿ ವಿಶೇಷ ಶಾಲಾ-ಕಾಲೇಜು ಬಸ್ಗಳನ್ನು ಆರಂಭಿಸುವುದು, ತರಗತಿ ಸಮಯಕ್ಕೆ ತಕ್ಕಂತೆ ಬೆಳಗ್ಗೆ-ಸಂಜೆ ಹೆಚ್ಚುವರಿ ಟ್ರಿಪ್ಗಳನ್ನು ಮಾಡಲು ಉದ್ದೇಶಿಸಲಾಗಿದೆ.
ರೂಪು-ರೇಷೆಗಳು: ಶಾಲಾ-ಕಾಲೇಜು ಸಮಯಕ್ಕೆ ಅಗತ್ಯ ಹೆಚ್ಚುವರಿ ಬಸ್ ವ್ಯವಸ್ಥೆ. ಮಕ್ಕಳ ಸುರಕ್ಷತೆಗಾಗಿ ಎಲ್ಲ ಬಸ್ಗಳಲ್ಲಿ ಸಿಸಿಟಿವಿ, ಜಿಪಿಎಸ್ ನಿಗಾ ವ್ಯವಸ್ಥೆ ಹಾಘೂ ತುರ್ತು ಪ್ಯಾನಿಕ್ ಬಟನ್ ಅಳವಡಿಕೆ ಮಾಡಬೇಕು. ಮಕ್ಕಳ ಸಹಾಯವಾಣಿ ಸಂಖ್ಯೆಯನ್ನು 1098 ಪ್ರದರ್ಶಿಸುವುದು ಕಡ್ಡಾಯಗೊಳಿಸಬೇಕು.
ಬಸ್ ಸೇವೆಯಲ್ಲಿ ಮಾರ್ಗ ಮತ್ತು ಸಮಯ ಪಾಲನೆ ಕಟ್ಟುನಿಟ್ಟಾಗಿ ಜಾರಿಗೊಳಿಸುವುದು. ಬಸ್ ಚಾಲಕರು, ನಿರ್ವಾಹಕರು ಸೇರಿದಂತೆ ಸಿಬ್ಬಂದಿಗೆ ಮಕ್ಕಳ ಸುರಕ್ಷತೆಗೆ ಅಗತ್ಯ ತರಬೇತಿ, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಇರುವ ಮಾರ್ಗಗಳಲ್ಲಿ ಮಹಿಳಾ ನಿರ್ವಾಹಕರನ್ನು ನಿಯೋಜಿಸಬೇಕು ಎಂದು ಆಯೋಗವು ಶಿಫಾರಸ್ಸು ಮಾಡಿತ್ತು.
‘ರಾಜ್ಯದಲ್ಲಿ ವಿದ್ಯಾರ್ಥಿಗಳ ಸ್ನೇಹಿ ಸಾರಿಗೆ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದ್ದು, ಮೊದಲ ಹಂತದಲ್ಲಿ ಬೆಂಗಳೂರು ನಗರದ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುವುದು. ಆ ಬಳಿಕ ಹಂತ-ಹಂತವಾಗಿ ವಿಸ್ತರಿಸಲು ಉದ್ದೇಶಿಸಲಾಗಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.







