ಗೃಹಲಕ್ಷ್ಮೀ ಯೋಜನೆ ಜಾರಿಗೆ ಪ್ರಜಾಪ್ರತಿನಿಧಿ ನೇಮಕಕ್ಕೆ ಸರಕಾರ ನಿರ್ಧಾರ; ಮಾರ್ಗಸೂಚಿ ಪ್ರಕಟ

ಬೆಂಗಳೂರು, ಜು. 14:ಮನೆಯ ಯಜಮಾನಿಗೆ 2 ಸಾವಿರ ರೂ. ನಗದು ನೀಡುವ ಗೃಹಲಕ್ಷ್ಮೀ ಯೋಜನೆ ಜಾರಿಗೆ ಪ್ರಜಾ ಪ್ರತಿನಿಧಿನೇಮಕ ಮಾಡಲು ರಾಜ್ಯ ಸರಕಾರ ತೀರ್ಮಾನ ಮಾಡಿದೆ.
ಶುಕ್ರವಾರ ಈ ಸಂಬಂಧ ಸರಕಾರ ಮಾರ್ಗಸೂಚಿ ಪ್ರಕಟಿಸಿದ್ದು, ಪ್ರಜಾಪ್ರತಿನಿಧಿಗಳಿಗೆ ಗೌರವಧನ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಓರ್ವ ಮಹಿಳೆ ಸೇರಿದಂತೆ ಪ್ರತಿ 1 ಸಾವಿರ ಜನರಿಗೆ ಅಥವಾ ಒಂದು ಗ್ರಾಮಕ್ಕೆ ಇಬ್ಬರು ಪ್ರಜಾಪ್ರತಿನಿಧಿ ನೇಮಕ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.
ಒಂದು ತಿಂಗಳ ಅವಧಿಗೆ ಮಾತ್ರ ಪ್ರಜಾಪ್ರತಿನಿಧಿ ನೇಮಕಕ್ಕೆ ನಿರ್ಧರಿಸಿದ್ದು, ಗೃಹಲಕ್ಷ್ಮಿ ಯೋಜನೆಯ ಅರ್ಜಿದಾರರು ಗ್ರಾಮ್ ಒನ್, ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್‌ಗಳಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತಿದೆ.
ಜತೆಗೆ ಮೇಲ್ಕಂಡ ಕೇಂದ್ರಗಳ ಮೇಲಿನ ಒತ್ತಡ ತಪ್ಪಿಸಲು ಮೊಬೈಲ್ ಆ್ಯಪ್ ಮೂಲಕವು ಅರ್ಜಿ ಸಲ್ಲಿಸುವ ಅವಕಾಶ ಕಲ್ಪಿಸಲು ಪ್ರಜಾ ಪ್ರತಿನಿಧಿಗಳನ್ನು ನೇಮಕ ಮಾಡಲಾಗುವುದಯ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಉಸ್ತುವಾರಿ ಸಚಿವರು ಜಿಲ್ಲೆಗೆ ಪ್ರಜಾ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. 1 ಸಾವಿರ ಜನಸಂಖ್ಯೆಗಿಂತ ಕಡಿಮೆ ಅಥವಾ ಅದಕ್ಕೆ ಸಮನಾದ ಪ್ರತಿ ಗ್ರಾಮಕ್ಕೆ ಇಬ್ಬರು ಪ್ರಜಾ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ತಿಳಿಸಲಾಗಿದೆ.







