RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಪ್ರಕರಣ | ಸನ್ಮಾನ ಸಮಾರಂಭ ಆಯೋಜನೆ ಮಾಡಿದ್ದು ಸರಕಾರವಲ್ಲ: ಗೃಹಸಚಿವ ಪರಮೇಶ್ವರ್

ಗೃಹ ಸಚಿವ ಡಾ.ಜಿ.ಪರಮೇಶ್ವರ್
ಬೆಂಗಳೂರು: ಆರ್ಸಿಬಿ ತಂಡವು ಐಪಿಎಲ್ನಲ್ಲಿ ಚೊಚ್ಚಲ ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ವತಿಯಿಂದ ಸನ್ಮಾನ ಸಮಾರಂಭ ಆಯೋಜನೆ ಮಾಡಿರಲಿಲ್ಲ. ಇದು, ಜೂ.4ರಂದು ಫೈನಲ್ ಪಂದ್ಯ ನಡೆಯುವುದಕ್ಕೆ ಮುನ್ನವೇ ಮೇ 29ರಂದು ಆರ್ಸಿಬಿ ಹಾಗೂ ಡಿಎನ್ಎ ಸಂಸ್ಥೆಯವರು ಸನ್ಮಾನ ಸಮಾರಂಭ ಆಯೋಜಿಸುವ ಕುರಿತು ಕೆಎಸ್ಸಿಎ ಜೊತೆ ಚರ್ಚೆ ಮಾಡಿ ಕಾರ್ಯಕ್ರಮ ರೂಪಿಸಿದ್ದರು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಗುರುವಾರ ವಿಧಾನಸಭೆಯಲ್ಲಿ ಆರ್ಸಿಬಿ ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಮೃತಪಟ್ಟ ವಿಚಾರದ ಕುರಿತು ನಡೆದ ಚರ್ಚೆಗೆ ಸರಕಾರದ ವತಿಯಿಂದ ಉತ್ತರ ನೀಡಿದ ಅವರು, ಈ ಘಟನೆ ಕುರಿತು ನಾವು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮ್ಯಾಜಿಸ್ಟ್ರೇಟಿಯಲ್ ತನಿಖೆ ನಡೆಸಿದೆವು. ನ್ಯಾ.ಕುನ್ಹಾ ನೇತೃತ್ವದ ಏಕ ಸದಸ್ಯ ಆಯೋಗದಿಂದಲೂ ತನಿಖೆ ನಡೆಸಿದೆವು. ಅವರ ವರದಿಗಳಲ್ಲಿ ಅನೇಕ ವಿಚಾರಗಳನ್ನು ಪ್ರಸ್ತಾವ ಮಾಡಿದ್ದಾರೆ ಎಂದು ಹೇಳಿದರು.
ಜೂ.4ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಆಗುವುದನ್ನು ಯಾರೂ ಊಹಿಸಿರಲಿಲ್ಲ. ದೇಶದ ಅನೇಕ ಕಡೆ ಕಾಲ್ತುಳಿತ ಘಟನೆಗಳು ನಡೆದಿವೆ. ರಾಜ್ಯದ ಕ್ರೀಡಾ ಇತಿಹಾಸದಲ್ಲಿ ಯಾವತ್ತೂ ಕೂಡ ಇಂತಹ ಒಂದು ಘಟನೆ ನಡೆದಿರಲಿಲ್ಲ. 11 ಜನ ಎಳೆ ವಯಸ್ಸಿನವರು ಕಾಲ್ತುಳಿತದಿಂದ ತೀರಿಕೊಂಡರು. ಬಹಳ ನೋವಿನ ಸಂಗತಿ ಎಂದು ಪರಮೇಶ್ವರ್ ತಿಳಿಸಿದರು.
ವಿಷಯ ನ್ಯಾಯಾಲಯದಲ್ಲಿದೆ. ನ್ಯಾಯಾಂಗ ನಿಂದನೆ ಆಗೋದು ಬೇಡ. ಘಟನೆ ನಡೆದ ದಿನ ನಾನು, ಮುಖ್ಯಮಂತ್ರಿ ಆಸ್ಪತ್ರೆಗೆ ಹೋಗಿ ಮೃತಪಟ್ಟವರ ಪೋಷಕರನ್ನು ಮಾತನಾಡಿಸಿದಾಗ, ನಮ್ಮ ಸ್ವಂತ ಮನೆಯಲ್ಲಿ ಸಾವಾದರೆ ಎಷ್ಟು ನೊವಾಗುತ್ತದೆಯೋ ಅದಕ್ಕಿಂತ ಹೆಚ್ಚಿನ ನೋವು ಅಂದು ಆಗಿತ್ತು. ಸರಕಾರ ಈ ದುರಂತ ಆದ ನಂತರ ಇದಕ್ಕೆ ಕಾರಣಕರ್ತರಾದವರ ವಿರುದ್ಧ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದರು.
ಆರ್.ಸಿ.ಬಿ, ಕೆಎಸ್ಸಿಎ, ಡಿಎನ್ಎ ಸಂಸ್ಥೆಯ ವಿರುದ್ಧ ಎಫ್ಐಆರ್ ಗಳನ್ನು ಹಾಕಿ, ಅದರ ಮುಖ್ಯಸ್ಥರನ್ನು ದಸ್ತಗಿರಿ ಮಾಡಿದ್ದೇವೆ. ಕಾನೂನು ಕ್ರಮ ನಡೆಯುತ್ತಿದೆ. ಸರಕಾರ ಆರ್ ಸಿಬಿ ತಂಡದವರನ್ನು ಕರೆದು ಸನ್ಮಾನ ಮಾಡಿಲ್ಲ. ಈ ಹಿಂದೆ ಗುಜರಾತ್ ತಂಡ ಗೆದ್ದಾಗ ಅಲ್ಲಿನ ಮುಖ್ಯಮಂತ್ರಿ ಸನ್ಮಾನ ಮಾಡಿದ್ದಾರೆ. ಅದೇ ರೀತಿ ಕೊಲ್ಕತ್ತ, ಚೆನ್ನೈ ತಂಡಗಳು ಗೆದ್ದಾಗ ಅಲ್ಲಿನ ಮುಖ್ಯಮಂತ್ರಿಗಳು ಸನ್ಮಾನಿಸಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.
ಈ ಘಟನೆ ನಡೆದ ಬಳಿಕ ನಾವು ಏನೂ ಕ್ರಮ ಕೈಗೊಳ್ಳದಿದ್ದರೆ ತಪ್ಪಾಗುತ್ತದೆ. ಆದುದರಿಂದ, ಆರ್ ಸಿಬಿ, ಡಿಎನ್ಎ, ಕೆಎಸ್ಸಿಎಯ ಪಾತ್ರಧಾರಿಗಳ ವಿರುದ್ಧ ಕ್ರಮ ಕೈಗೊಂಡಂತೆ, ಲೋಪ ಎಸಗಿರುವ ಐದು ಜನ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಿದೆವು. ಗುಪ್ತಚರ ದಳದ ಮುಖ್ಯಸ್ಥರನ್ನು ವರ್ಗಾವಣೆ ಮಾಡಿದೆವು. ಇದೀಗ, ಅವರ ವಿರುದ್ಧ ಇಲಾಖಾ ವಿಚಾರಣೆ ಹಾಗೂ ಸಿಒಡಿ ತನಿಖೆ ಮುಂದುವರೆದಿದೆ ಎಂದು ಅವರು ಹೇಳೀದರು.
ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರನ್ನು ಅವರ ಸ್ಥಾನದಿಂಧ ತೆಗೆದು ಹಾಕಲಾಯಿತು. ತೀರಿಕೊಂಡ 11 ಜನರಿಗೆ ತಲಾ 25 ಲಕ್ಷ ರೂ.ಗಳ ಪರಿಹಾರವನ್ನು ಸರಕಾರ ನೀಡಿದೆ. ಗಾಯಾಳುಗಳ ಚಿಕಿತ್ಸಾ ವೆಚ್ಚ ಸರಕಾರ ಭರಿಸಿದೆ. ಈ ಪ್ರಕರಣ ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ, ಅದರ ಫಲಿತಾಂಶ ಏನು ಬರುತ್ತದೆ ಕಾದು ನೋಡಬೇಕು ಎಂದು ಪರಮೇಶ್ವರ್ ತಿಳಿಸಿದರು.
ಹೈಕೋರ್ಟ್ ತೀರ್ಪು ಬರುವವರೆಗೂ ನ್ಯಾ.ಕುನ್ಹಾ ವರದಿಯನ್ನು ಬಹಿರಂಗಪಡಿಸುವುದಿಲ್ಲ ಎಂದು ಅಡ್ವೊಕೇಟ್ ಜನರಲ್ ಹೈಕೋರ್ಟ್ಗೆ ತಿಳಿಸಿದ್ದಾರೆ. ಆದರೆ, ವಿಪಕ್ಷ ನಾಯಕರಿಗೆ ಆ ವರದಿ ಪ್ರತಿ ಹೇಗೆ ಸಿಕ್ಕಿತ್ತು ಗೊತ್ತಿಲ್ಲ. ಇಂತಹ ಅವಘಡಗಳು ಭವಿಷ್ಯದಲ್ಲಿ ಸಂಭವಿಸಬಾರದು ಎಂದು ಜನಸಂದಣಿ ನಿಯಂತ್ರಣ ವಿಧೇಯಕ ಮಂಡಿಸಿದ್ದೇವೆ. ತುಮಕೂರು ಬಳಿ 1 ಲಕ್ಷ ಆಸನಗಳ ಸಾಮರ್ಥ್ಯವುಳ್ಳ ಅಂತರ್ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಕೆಎಸ್ಸಿಎ ನವರಿಗೆ 41 ಎಕರೆ ಭೂಮಿ ನೀಡಿದ್ದೇವೆ ಎಂದು ಅವರು ತಿಳಿಸಿದರು.
ಸರಕಾರ ಅಪರಾಧಿ ಸ್ಥಾನದಲ್ಲಿದೆ. ಒಂದು ಬಾರಿಯಾದರೂ ಈ ತಪ್ಪಾಗಿರುವುದಕ್ಕೆ ಕ್ಷಮೆಯಾಚಿಸಿ. ಇಲ್ಲದಿದ್ದರೆ, ಈ ಕಳಂಕ ಹಾಗೆ ಉಳಿಯಲಿದೆ. ಇದು ಸರಕಾರಿ ಪ್ರಾಯೋಜಿತ ಕೊಲೆ. ಜನರನ್ನು ಸಂಭ್ರಮಾಚರಣೆಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಆಹ್ವಾನಿಸಿ, ಈಗ ಅದಕ್ಕೂ ನಮಗೂ ಸಂಬಂಧ ಇಲ್ಲದ ರೀತಿಯಲ್ಲಿ ಉತ್ತರ ನೀಡಿದರೆ ಒಪ್ಪಲು ಸಾಧ್ಯವೇ?
ಆರ್.ಅಶೋಕ್, ವಿಪಕ್ಷ ನಾಯಕ
ಆರ್ ಸಿಬಿ ಸಂಭ್ರಮಾಚರಣೆ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್.ಅಶೋಕ್ ಸರಕಾರದ ಮಾಡಿರುವ ಆರೋಪಗಳಿಗೆ ಶುಕ್ರವಾರ ಸದನದಲ್ಲಿ ಉತ್ತರ ನೀಡುತ್ತೇನೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ







