ವಿಧಾನಸಭೆಯಲ್ಲಿ ‘ಟೆಲಿಫೋನ್ ಕದ್ದಾಲಿಕೆ’ ವಿಚಾರ ಸದ್ದು| ಸರಕಾರ ಫೋನ್ ಕದ್ದಾಲಿಕೆ ಮಾಡಿಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು, ಜ.28: ‘ಕೇಂದ್ರ ಗೃಹ ಸಚಿವರು ಮತ್ತು ಆರೆಸ್ಸೆಸ್ ಕಚೇರಿ ಕೇಶವ ಕೃಪಾದಿಂದ ರಾಜ್ಯಪಾಲರಿಗೆ ದೂರವಾಣಿ ಕರೆಗಳು ಬರುತ್ತಿವೆ’ ಎಂಬ ಕಾನೂನು ಸಚಿವ ಎಚ್.ಕೆ.ಪಾಟೀಲ್‍ರ ಮಾತು ವಿಧಾನಸಭೆಯ ಸದನದಲ್ಲಿ ಗದ್ದಲಕ್ಕೆ ಕಾರಣವಾಗಿ ಪ್ರತಿಪಕ್ಷ ಸದಸ್ಯರು, ‘ಸಚಿವರ ಮಾತು ನೋಡಿದರೆ ಈ ಸರಕಾರ ದೂರವಾಣಿ ಕದ್ದಾಲಿಸುತ್ತಿದೆ. ಈ ಬಗ್ಗೆ ತನಿಖೆ ಆಗಬೇಕು’ ಎಂದು ಆಗ್ರಹಿಸಿದರು.
ಬುಧವಾರ ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಮಾತನಾಡುತ್ತಿದ್ದಾಗ ಸಚಿವ ಎಚ್.ಕೆ.ಪಾಟೀಲ್ ಅವರು, ರಾಜ್ಯಪಾಲರಿಗೆ ಕೇಂದ್ರ ಸರಕಾರ ಹಾಗೂ ಆರೆಸ್ಸೆಸ್ ಕಚೇರಿ ಕೇಶವ ಕೃಪಾದಿಂದ ದೂರವಾಣಿ ಕರೆ ಹೋಗಿದೆ ಎಂದು ಹೇಳಿದಾಗ ಪ್ರತಿಪಕ್ಷ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ಈ ಸರಕಾರ ಫೋನ್ ಕದ್ದಾಲಿಸುತ್ತಿದೆ. ಈ ಬಗ್ಗೆ ತನಿಖೆ ಆಗಬೇಕೆಂದು ಪಟ್ಟು ಹಿಡಿದರು.
ಈ ವೇಳೆ ಮಾತನಾಡಿದ ಸಚಿವ ಎಚ್.ಕೆ.ಪಾಟೀಲ್, ನೀವು ಬೇಕಾದರೆ ತನಿಖೆಗೆ ಕೇಳಿ. ನಾವು ತನಿಖೆಗೆ ವಹಿಸುತ್ತೇವೆ ಎಂದರು. ಆಗ ಆರೋಪಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಾ, ಇದು ಫೋನ್ ಟ್ಯಾಪ್ ಸರಕಾರನಾ? ಆರೆಸ್ಸೆಸ್, ಬಿಜೆಪಿ ಕಚೇರಿಯಿಂದ ಫೋನ್ ಮಾಡುವುದು ಸರಕಾರಕ್ಕೆ ಹೇಗೆ ಗೊತ್ತಾಗುತ್ತೆ? ಎಂದು ಬಿಜೆಪಿ ಸದಸ್ಯರು ವಾಗ್ದಾಳಿ ಮುಂದುವರೆಸಿದರು.
ಈ ವೇಳೆ ಎಚ್.ಕೆ.ಪಾಟೀಲ್ ಮಧ್ಯಪ್ರವೇಶಿಸಿ, ಆ ಆಪಾದನೆ ಇಂದಿನ ಸನ್ನಿವೇಶದಲ್ಲಿ ಸಮಂಜಸವಾಗಿದೆ. ಇಲ್ಲವಾದರೆ ರಾಜ್ಯಪಾಲರಿಗೆ ಸಂವಿಧಾನವನ್ನು ಉಲ್ಲಂಘಿಸಲು ಆಗುತ್ತದೆಯೇ? ಯಾವ ಒತ್ತಡದಿಂದ ಹಾಗೆ ಮಾಡಿದರು. ವಿಪಕ್ಷಗಳು ಅವರ ಮೂಲಗಳಿಂದ ಮಾಹಿತಿ ತರಿಸಿಕೊಳ್ಳಲಿ. ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯದಿಂದ ಸ್ಪಷ್ಟನೆ ನೀಡಲಿ. ಜತೆಗೆ, ರಾಜಭವನದಿಂದ ಈ ಬಗ್ಗೆ ಸ್ಪಷ್ಟೀಕರಣವನ್ನು ನಿರೀಕ್ಷಿಸುತ್ತಿದ್ದೇನೆ ಎಂದರು.
ಇದೇ ವೇಳೆ ಮಧ್ಯಪ್ರವೇಶಿಸಿದ ಸುರೇಶ್ ಕುಮಾರ್, ಕೇಂದ್ರದ ಮಟ್ಟದಲ್ಲಿರುವ ಪ್ರತಿಪಕ್ಷಗಳು ರಾಜ್ಯಪಾಲರ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಆಂಧ್ರ ಸರಕಾರ ರಾಜ್ಯಪಾಲರ ಬಗ್ಗೆ ಆರೋಪ ಮಾಡಿಲ್ಲ. ಗೃಹ ಸಚಿವಾಲಯದಿಂದ ಸ್ಪಷ್ಟನೆಯನ್ನು ನಿರೀಕ್ಷಿಸುತ್ತಿದ್ದೇನೆ ಎನ್ನುವುದು ಕಾನೂನು ಸಚಿವ ಮಾತನಾಡುವ ಮಾತಲ್ಲ ಎಂದು ಆಕ್ಷೇಪಿಸಿದರು. ಬಳಿಕ ಇದಕ್ಕೆ ಅರವಿಂದ್ ಬೆಲ್ಲದ್ ಸೇರಿದಂತೆ ಹಲವು ಸದಸ್ಯರು ದನಿಗೂಡಿಸಿದರು.
ನಮ್ಮ ಸರಕಾರ ಫೋನ್ ಕದ್ದಾಲಿಕೆ ಮಾಡುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
ನಮ್ಮ ಸರಕಾರ ಯಾರ ಫೋನ್ ಕದ್ದಾಲಿಕೆಯನ್ನು ಮಾಡುವುದಿಲ್ಲ. ರಾಜ್ಯಪಾಲರಿಗೆ ಭಾಷಣ ಮಾಡದಂತೆ ಹೈಕಮಾಂಡ್ ನಿಂದ ಕರೆ ಬಂದಿರಬಹುದು ಎಂಬ ಶಂಕೆಯ ಹಿನ್ನೆಲೆಯಲ್ಲಿ ಕಾನೂನು ಸಚಿವರು ಹೇಳಿಕೆ ನೀಡಿದ್ದಾರೆ. ಅದನ್ನೆ ದೊಡ್ಡ ವಿಚಾರ ಮಾಡುವುದು ಅನಗತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬುಧವಾರ ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡುತ್ತಾ, ರಾಜ್ಯಪಾಲರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ಮಾಡಿದ್ದಾರೆ ಎಂದು ಕಾನೂನು ಸಚಿವರು ಹೇಳಿದ್ದಾರೆ. ಆರೆಸ್ಸೆಸ್ ಕಚೇರಿಯಿಂದ ಕರೆ ಬಂದಿದೆ ಎಂದು ಮತ್ತೊಬ್ಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಈ ಕರೆಗಳ ದಾಖಲೆಗಳನ್ನು ಸಚಿವರು ಸದನದ ಮುಂದಿಡಬೇಕು ಎಂದು ಆಗ್ರಹಿಸಿದರು.
ರಾಜಭವನಕ್ಕೆ ಕಳಂಕ ತರಲು ಸರಕಾರ ಹೊರಟಿದೆ. ಕಾನೂನು ಸಚಿವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು. ಇಲ್ಲವೇ, ಅವರ ಹೇಳಿಕೆಗಳನ್ನು ಕಡತದಿಂದ ತೆಗೆಯಬೇಕು. ಇಲ್ಲದಿದ್ದರೆ, ಸಚಿವರು ಹೇಳಿದ್ದೆ ಸತ್ಯ ಅಂತ ಆಗುತ್ತದೆ. ವಿಧಾನಪರಿಷತ್ತಿನಲ್ಲಿ ವಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಸಚಿವರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಅಶೋಕ್ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ನಮ್ಮ ಸರಕಾರ ಯಾರೊಬ್ಬರ ಫೋನ್ ಕದ್ದಾಲಿಕೆಯನ್ನು ಮಾಡುವುದಿಲ್ಲ. ಕಾನೂನು ಸಚಿವರು ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ. ಹೊರಗೆ ಬರಲು ಆಗುತ್ತಿಲ್ಲ ಎಂದು ಹೇಳುವುದು ಸರಿಯಲ್ಲ. ರಾಜ್ಯಪಾಲರ ಭಾಷಣದ ಬಗ್ಗೆ ಮಾತನಾಡಬೇಕಿದ್ದರೆ ಮಾತನಾಡಿ, ಕಾಲಹರಣ ಮಾಡಬೇಡಿ. ಅಗತ್ಯವಿದ್ದರೆ ಈ ಬಗ್ಗೆ ತನಿಖೆ ಮಾಡಿಸೋಣ ಎಂದು ಹೇಳಿದರು.
ರಾಜ್ಯಪಾಲರನ್ನು ಗೌರವಪೂರ್ವಕವಾಗಿ ನಾವು ಹೋಗಿ ಬೀಳ್ಕೊಟ್ಟಿದ್ದೇವೆ. ಅವರಿಗೆ ಅಗೌರವ ತೋರಲು ಸಚಿವರು ನಿಂತಿರಲಿಲ್ಲ. ರಾಜ್ಯಪಾಲರಿಗೆ ಧಿಕ್ಕಾರವನ್ನು ಕೂಗಿಲ್ಲ. ರಾಜ್ಯಪಾಲರು ರಾಷ್ಟ್ರಗೀತೆ ನುಡಿಸಲಿಲ್ಲ ಎಂದು ಪೀಠದಿಂದ ಇಳಿದು ಹೊರಟು ಹೋಗುವುದೇ? ಈ ಚರ್ಚೆಗೆ ಅಂತ್ಯ ಹಾಡಿ ಎಂದು ಮುಖ್ಯಮಂತ್ರಿ, ಸ್ಪೀಕರ್‌ಗೆ ಕೋರಿದರು.
2011ರ ಜ.6ರಂದು ರಾಜ್ಯಪಾಲರಾಗಿದ್ದ ಎಚ್.ಆರ್.ಭಾರದ್ವಾಜ್ ಭಾಷಣ ಮಾಡುವಾಗ, ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಭಾಷಣ ಓದದಂತೆ ತಡೆದರು ಎಂದು ಬಿಜೆಪಿ ಸದಸ್ಯ ಸುರೇಶ್ ಕುಮಾರ್ ಹೇಳೀದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ರಾಜ್ಯಪಾಲರನ್ನು ವಿರೋಧಿಸಿಲ್ಲ. ಅಕ್ರಮ ಗಣಿಗಾರಿಕೆ ಕಳಂಕ ಹೊತ್ತಿದ್ದ ಬಿಜೆಪಿ ಸರಕಾರ, ಭ್ರಷ್ಟ ಸರಕಾರ. ಅದನ್ನು ಸಮರ್ಥಿಸಿಕೊಂಡ ಓದಬೇಡಿ ಎಂದು ಹೇಳಿದ್ದೆ. ಅಕ್ರಮ ಗಣಿಗಾರಿಕೆ ವಿರುದ್ಧ ಲೋಕಾಯುಕ್ತ ವರದಿ ಇತ್ತು. ನಾನು ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದ್ದೆ ಎಂದು ಹೇಳಿದರು.
ಈ ವೇಳೆ ಮಧ್ಯಪ್ರವೇಶಿಸಿದ ಪಕ್ಷೇತರ ಸದಸ್ಯ ಗಾಲಿ ಜನಾರ್ದನ ರೆಡ್ಡಿ, ನೀವು ಪಾದಯಾತ್ರೆ ಮಾಡಿದ್ದ 2010ರ ಜುಲೈನಲ್ಲಿ. ಅದರ ಪರಿಣಾಮವಾಗಿಯೆ ಸುಪ್ರೀಂಕೋರ್ಟ್ ಸಂತೋಷ್ ಲಾಡ್ ಮೈನ್ಸ್ ಅನ್ನು ರದ್ದು ಮಾಡಿದೆ. ನಾಚಿಕೆ ಇಲ್ಲದೇ ಆತನನ್ನು ಮಂತ್ರಿ ಮಾಡಿ ಈ ಸದನದಲ್ಲಿ ಕೂರಿಸಿದ್ದೀರಾ ಎಂದು ಕಿಡಿಗಾರಿದರು. ಈ ವೇಳೆ ಆಡಳಿತ ಹಾಗೂ ವಿಪಕ್ಷಗಳ ನಡುವೆ ವಾಗ್ವಾದ ಏರ್ಪಟ್ಟ ಹಿನ್ನೆಲೆಯಲ್ಲಿ ಸ್ಪೀಕರ್ ಸದನವನ್ನು 10 ನಿಮಿಷ ಮುಂದೂಡಿದರು.







