ರಾಜ್ಯ ಸರಕಾರಿ ನೌಕರರ ತುಟ್ಟಿ ಭತ್ತೆ: ಶೇ.15.75ರಿಂದ ಶೇ.18ಕ್ಕೆ ಹೆಚ್ಚಳ ಮಾಡಿ ಆದೇಶ

ಬೆಂಗಳೂರು : 2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನವನ್ನು ಪಡೆಯುತ್ತಿರುವ ರಾಜ್ಯ ಸರಕಾರಿ ನೌಕರರಿಗೆ ಜು.1ರಿಂದ ಜಾರಿಗೆ ಬರುವಂತೆ ತುಟ್ಟಿಭತ್ತೆಯ ದರಗಳನ್ನು ಪ್ರಸ್ತುತ ಮೂಲ ವೇತನದ ಶೇ.15.75ರಿಂದ ಶೇ.18ಕ್ಕೆ ಹೆಚ್ಚಿಸಿ ಗುರುವಾರ ಸರಕಾರ ಆದೇಶಿಸಿದೆ.
ಯುಜಿಸಿ, ಎಐಸಿಟಿಇ, ಐಸಿಎಆರ್ ವೇತನ ಶ್ರೇಣಿಗಳಲ್ಲಿ ನಿವೃತ್ತರಾದ ನೌಕರರು ರಾಜ್ಯ ಪಿಂಚಣಿದಾರರಾಗುವುದರಿಂದ ಅವರಿಗೂ ಸಹ ಈ ಆದೇಶ ಅನ್ವಯಿಸುತ್ತದೆ. ಸರಕಾರದ ಮತ್ತು ಜಿಲ್ಲಾ ಪಂಚಾಯತ್‍ಗಳ ಪೂರ್ಣಾವಧಿ ನೌಕರರಿಗೆ, ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ವರ್ಕ್‍ಚಾರ್ಜ್ ನೌಕರರಿಗೆ ಹಾಗೂ ಸರಕಾರದಿಂದ ಸಹಾಯಾನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ನೌಕರರಿಗೆ ಅನ್ವಯಿಸುತ್ತದೆ.
ರಾಜ್ಯ ಸರಕಾರದ ನಿವೃತ್ತಿ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರಿಗೆ ಮತ್ತು ರಾಜ್ಯದ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಪಡೆಯುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರಿಗೂ ಕೂಡ ಜು.1ರಿಂದ ಜಾರಿಗೆ ಬರುವಂತೆ ಹಾಲಿ ಲಭ್ಯವಿರುವ ತುಟ್ಟಿಭತ್ತೆಯ ದರಗಳನ್ನು ಮೂಲ ನಿವೃತ್ತಿ ವೇತನ,ಕುಟುಂಬ ನಿವೃತ್ತಿ ವೇತನದ ಪ್ರಸಕ್ತ ಶೇ.15.75ರಿಂದ ಶೇ.18ಕ್ಕೆ ಹೆಚ್ಚಿಸಿ ಮಂಜೂರು ಮಾಡಲಾಗಿದೆ.
ಯುಜಿಸಿ, ಎಐಸಿಟಿಇ, ಐಸಿಎಆರ್ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ನೌಕರರಿಗೆ ಮತ್ತು ಎನ್‍ಜೆಪಿಸಿ ವೇತನ ಶ್ರೇಣಿಗಳ ನ್ಯಾಯಾಂಗ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಆದೇಶಗಳನ್ನು ಹೊರಡಿಸಲಾಗುವುದು. ಈ ಆದೇಶದ ಮೇರೆಗೆ ಲಭ್ಯವಿರುವ ತುಟ್ಟಿ ಭತ್ತೆಯನ್ನು ಮುಂದಿನ ಆದೇಶದವರೆಗೆ ನಗದಾಗಿ ಪಾವತಿ ಮಾಡಲಾಗುವುದು.
ಈ ಆದೇಶದನ್ವಯ ಲಭ್ಯವಾಗುವ ತುಟ್ಟಿಭತ್ಯೆ ಬಾಕಿ ಮೊತ್ತವನ್ನು, 2026ರ ನವೆಂಬರ್ ತಿಂಗಳ ವೇತನ, ಪಿಂಚಣಿ ಬಟವಾಡೆಗೂ ಮೊದಲು ಪಾವತಿ ಮಾಡುವಂತಿಲ್ಲ. ತುಟ್ಟಿಭತ್ತೆಯನ್ನು ಸಂಭಾವನೆಯ ವಿಶಿಷ್ಟ ಅಂಶವಾಗಿ ತೋರಿಸುವುದು ಮತ್ತು ಯಾವುದೇ ಉದ್ದೇಶಕ್ಕಾಗಿ ಇದನ್ನು ವೇತನ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸರಕಾರ ಆದೇಶದಲ್ಲಿ ತಿಳಿಸಿದೆ.






