ಭಾರತ್ ಜೋಡೋ ಹೆಸರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಸರ್ಕಾರಿ ಹಣ ಹಂಚಿಕೆ : ಆರ್.ಅಶೋಕ್ ಆರೋಪ

ಆರ್.ಅಶೋಕ್
ಬೆಂಗಳೂರು : ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದ ಬಳಿಕ ಜನರಿಗೆ ಸೌಲಭ್ಯಗಳು ಸಿಗುತ್ತಿಲ್ಲ. ಬದಲಾಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ಸರಕಾರಿ ಹಣ ಹಂಚುವ ವ್ಯವಸ್ಥೆ ಮಾಡುವುದು ಹೀನ ಕಾರ್ಯ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಶನಿವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲೂ ಪ್ರತಿ ವಾರ್ಡಿಗೆ ಭಾರತ್ ಜೋಡೋ ಹೆಸರಿನಲ್ಲಿ 10 ಲಕ್ಷ ರೂ.ಗಳಂತೆ ನೀಡುತ್ತಿದ್ದಾರೆ. ರಾಜ್ಯದಲ್ಲೂ ಹಣ ಕೊಡಲಾಗುತ್ತಿದೆ. ಭಾರತ್ ಜೋಡೋ, ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ. ಅವರೇನೋ ಪಾಕಿಸ್ತಾನ ಜೋಡೋ ಮಾಡಿದ್ದರೆ ಅವರಿಗೆ ಉಪಯೋಗ ಆಗುತ್ತಿತ್ತು ಎಂದು ನುಡಿದರು.
ಭಾರತ್ ಜೋಡೋದಲ್ಲಿ ಒಬ್ಬರೇ ಒಬ್ಬರು ಬಿಜೆಪಿ, ಜೆಡಿಎಸ್ನವರು ಇರಬಾರದೆಂದು ಸಚಿವರು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದವರೇ ಇರಬೇಕೆಂದು ಆದೇಶ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದವರಿಗೆ ಹಣ ಹಂಚುತ್ತಿದ್ದಾರೆ. ಭಾರತ್ ಜೋಡೋ ಹೆಸರಿನಲ್ಲಿ ವಾರ್ಡ್, ಜಿಲ್ಲಾ ಪಂಚಾಯಿತಿಗೆ ಹಣ ಹಂಚುತ್ತಾರೆ. ರೈತರಿಗೆ ನೀಡಲು ಇವರ ಬಳಿ ಹಣ ಇಲ್ಲ. ಬೆಂಗಳೂರಿನಲ್ಲಿ ಕಸದ ವಿಲೇವಾರಿಗೆ ಗುತ್ತಿಗೆದಾರರಿಗೆ ಹಣ ಪಾವತಿ ಮಾಡದೇ 5 ತಿಂಗಳಾಗಿದೆ ಎಂದು ಅವರು ದೂರಿದರು.
ಆಶಾ ಕಾರ್ಯಕರ್ತೆಯರಿಗೆ ಹಣ ಇಲ್ಲ:
ಆಶಾ ಕಾರ್ಯಕರ್ತೆಯರು ಚಳಿಯಲ್ಲೂ ಪ್ರತಿಭಟನೆ ನಡೆಸಿ ಕಾಯಿಲೆಗೆ ಸಿಲುಕಿದ್ದಾರೆ. ಆದರೆ ಹಣ ಕೊಡುತ್ತಿಲ್ಲ. ಕೆಲಸ ಮಾಡುವವರಿಗೆ, ಜನಸೇವೆ ಮಾಡುವವರಿಗೆ ಹಣ ಇಲ್ಲ. ಭಾರತ್ ಜೋಡೋ ಕಾರ್ಯಕರ್ತರಿಗೆ ತಕ್ಷಣ ಹಣ ನೀಡುತ್ತಾರೆ ಎಂದು ಅಶೋಕ್ ಆಕ್ಷೇಪಿಸಿದರು.
ರಾಜ್ಯ ಸರಕಾರವು ಜನರ ತೆರಿಗೆ ದುಡ್ಡನ್ನು ಈ ರೀತಿ ಪೋಲು ಮಾಡುವುದು ರಾಜ್ಯಕ್ಕೆ ಬಗೆದ ದ್ರೋಹ. ಇದೀಗ ಕಾಂಗ್ರೆಸ್ಸಿನ ನಿಜವಾದ ಮುಖವಾಡ ಕಳಚಿ ಬಿದ್ದಿದೆ. ಬೆಲೆ ಏರಿಕೆ ವಿರುದ್ಧ ಇದೇ 23, 24, 25ರಂದು ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಹೋರಾಟ ನಡೆಯಲಿದೆ ಎಂದು ಅವರು ಹೇಳಿದರು.






