600 ಶುಶ್ರೂಷಾಧಿಕಾರಿ ಹುದ್ದೆಗಳ ಭರ್ತಿಗೆ ಸರಕಾರ ಆದೇಶ

ಬೆಂಗಳೂರು, ಸೆ.22 : ರಾಜ್ಯಾದ್ಯಂತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 600 ಶುಶ್ರೂಷಾಧಿಕಾರಿ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಪಡೆಯಲು ರಾಜ್ಯ ಸರಕಾರವು ಅನುಮತಿ ನೀಡಿ ಆದೇಶಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು, ಶುಶ್ರೂಷಾಧಿಕಾರಿ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುವ ಪೂರ್ವದಲ್ಲಿ, ಸಿಬ್ಬಂದಿಗಳ ಕೊರತೆ ಇರುವ ಕೇಂದ್ರಗಳ ಮತ್ತು ಜಿಲ್ಲಾವಾರು ಮಾಹಿತಿಯನ್ನು ಪಡೆಯಬೇಕು. ಯಾವ ಜಿಲ್ಲೆ ಮತ್ತು ಕೇಂದ್ರಗಳಿಗೆ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ತುಂಬುವ ಅವಶ್ಯಕತೆ ಇದೆ ಎಂಬುದರ ಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸಬೇಕು.
ಗುತ್ತಿಗೆ ಆಧಾರದ ಸಿಬ್ಬಂದಿಗಳ ಆಯ್ಕೆಯನ್ನು ಈ ಹಿಂದಿನ ಗುತ್ತಿಗೆ ಅವಧಿಯ ಸೇವೆಯನ್ನು ಪರಿಗಣಿಸದೆ, ಮತ್ತೆ ಹೊಸದಾಗಿ ಸೇವೆಗೆ ಸೇರಿಸಿಕೊಂಡಂತೆ ಪರಿಗಣಿಸಿ ಆಯ್ಕೆ ಮಾಡಬೇಕು. ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳುವಾಗ ಭವಿಷ್ಯದ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಕಾನೂನಿನ ತೊಡಕುಗಳು ಉದ್ಭವಿಸದಂತೆ ಕ್ರಮವಹಿಸಬೇಕು.
ಇಲಾಖೆಯಲ್ಲಿ ನೇರ ನೇಮಕಾತಿ ಮುಖಾಂತರ ಶುಶ್ರೂಷಾಧಿಕಾರಿ ಹುದ್ದೆಗಳು ಭರ್ತಿಯಾದ ನಂತರ 600 ಶುಶ್ರೂಷಾಧಿಕಾರಿ ಹುದ್ದೆಗಳ ಗುತ್ತಿಗೆ ಸೇವೆಯನ್ನು ರದ್ದುಗೊಳಿಸಲಾಗುವುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.







