ಮಹೇಶ್ ಜೋಶಿ ಸಚಿವ ಸ್ಥಾನಮಾನ ಹಿಂಪಡೆದ ಸರಕಾರ: ಆರಂಭದ ಜಯ ಎಂದ ಸಾಹಿತಿಗಳು

ಮಹೇಶ್ ಜೋಶಿ
ಬೆಂಗಳೂರು: ಕಸಾಪ ಅಧ್ಯಕ್ಷ ಮಹೇಶ್ ಜೋಶಿಗೆ ಬಿಜೆಪಿ ಸರಕಾರ ನೀಡಿದ್ದ ಸಂಪುಟ ದರ್ಜೆ ಸ್ಥಾನಮಾನವನ್ನು ರಾಜ್ಯ ಸರಕಾರ ಹಿಂಪಡೆದಿದ್ದು, ಸಾಹಿತಿಗಳು ಇದು ಆರಂಭದ ಗೆಲುವು ಇದಾಗಿದ್ದು, ಕಸಾಪಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಸಾಹಿತಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರವಿವಾರ ಈ ಕುರಿತು ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಪ್ರೊ.ಎಲ್.ಎನ್.ಮುಕುಂದರಾಜ್, ‘ಮಹೇಶ್ ಜೋಶಿ, ಕಸಾಪಕ್ಕೆ ಜನರಿಂದ ಆಯ್ಕೆಯಾಗಿ ಬಂದ ಜಿಲ್ಲಾಧ್ಯಕ್ಷರಿಗೆ ದಂಡಿಸುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಅವರನ್ನು ಟೀಕಿಸುವ ಲೇಖಕರಿಗೆ ಕಾನೂನಿನ ಭಯವನ್ನು ತೋರಿಸಿ ಬಾಯಿ ಮುಚ್ಚಿಸಿದ್ದಾರೆ. ಇವು ಸರ್ವಾಧಿಕಾರಿ ಲಕ್ಷಣ. ಸಾಹಿತ್ಯ ವಲಯದಲ್ಲಿ ಟೀಕೆ, ಆರೋಪ, ಪ್ರತ್ಯಾರೋಪ ಇವು ಆರೋಗ್ಯಕರವಾಗಿರಬೇಕು ಎಂದು ತಿಳಿಸಿದ್ದಾರೆ.
ಮಹೇಶ್ ಜೋಶಿ ತಮಗೆ ಸಿಕ್ಕ ಸ್ಥಾನಮಾನವನ್ನು ಸಜ್ಜನಿಕೆಯಿಂದ ಬಳಸಿಕೊಳ್ಳಬೇಕಿತ್ತು. ಅವರ ಇತ್ತೀಚಿನ ವರ್ತನೆಗಳು ಸಾಹಿತ್ಯ ಪರಿಷತ್ ಅಧ್ಯಕ್ಷರ ಘನತೆಗೆ ತಕ್ಕದಾಗಿ ಇರಲಿಲ್ಲ. ಸಾಹಿತ್ಯ ಪರಿಷತ್ ಇರುವುದು ಎಲ್ಲರಿಗಾಗಿ ಆದರೆ ಜೋಶಿ ಅವರು ತಮಗಾಗಿ ಇದಿಯೇನೋ ಎನ್ನುವಂತೆ ಇದ್ದರು. ಮಂಡ್ಯ ಜಿಲ್ಲೆ ಸಮ್ಮೇಳನದ ಸಂದರ್ಭದಲ್ಲಿ ಅನೇಕ ರೀತಿಯ ಮಾತುಗಳನ್ನಾಡಿದ್ದಾರೆ. ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದರು. ಪರಿಷತ್ ಅಧ್ಯಕ್ಷರು ಸರಕಾರ ಸಚಿವ ಸ್ಥಾನಮಾನ ಬೇಕು ಎಂದು ಕೇಳಬಾರದು. ಹಿಂದಿನ ಅಧ್ಯಕ್ಷರಿಗೆ ಆಟೊದಲ್ಲಿ ಓಡಾಟಕ್ಕೆ ಆಗುತ್ತಿರಲಿಲ್ಲ. ಸಾಹಿತ್ಯದ ಕೆಲಸ ರಾಜಕಾರಣದ ಕೆಲಸವಲ್ಲ. ಸಚಿವ ಸ್ಥಾನಮಾನ ರದ್ದುಪಡಿಸಿರುವುದು ಸಹಜ ಕೆಲಸವಾಗಿದೆ ಎಂದು ಹೇಳಿದರು.
‘ಕನ್ನಡ ಸಾಹಿತ್ಯ ಪರಿಷತ್ಗೆ ತನ್ನದೇ ಆದ ಸ್ವಾಯತ್ತತೆ ಇದೆ. ಅದು ಯಾವುದೇ ಕಾರಣಕ್ಕೂ ಮೊಟಕಾಗಬಾರದು. ಯಾರೋ ಒಬ್ಬರು ತಪ್ಪು ಮಾಡಿದ ಕಾರಣಕ್ಕೆ ಅದನ್ನು ಮುಂದುವರಿಸದ ರೀತಿಯಲ್ಲಿ ಸರಕಾರ ಸಂಪು ದರ್ಜೆ ಸ್ಥಾನಮಾನವನ್ನು ವಾಪಸ್ ಪಡೆದಿದೆ. ಅದಕ್ಕಾಗಿ ಸರಕಾರಕ್ಕೆ ಅಭಿನಂದನೆಗಳು. ಇನ್ನು ಮುಂದೆಯೂ ಕೂಡ ಯಾವುದೇ ರೀತಿಯ ಸಚಿವ ಸ್ಥಾನಮಾನವನ್ನು ನೀಡಿ, ಅಧ್ಯಕ್ಷರ ಸ್ವಾಯತ್ತತೆಯನ್ನು ಸಂಘಿಗೆ ಒಳಗು ಮಾಡದೇ ಇರಲಿ’
-ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಹಿರಿಯ ಸಾಹಿತಿ
‘ಸರಕಾರ ನೀಡಿದ ಸೌಲತ್ತುಗಳನ್ನು ಯಾವ ರೀತಿಯಲ್ಲಿ ಬಳಸಬೇಕೋ, ಆ ಮಿತಿಯಲ್ಲಿ ಬಳಸಬೇಕು. ಮಹೇಶ್ ಜೋಶೀ ಅವರ ಸಮಸ್ಯೆ ಏನೆಂದರೆ, ಪರಿಷತ್ನ ಉದ್ಧಾರ, ಚಟುವಟಿಕೆಗೆ ಬಳಸಿಕೊಳ್ಳಿಲ್ಲ. ಅದಕ್ಕೆ ಬಳಸದೇ ಇದ್ದರೆ ಸೌಲಭ್ಯಗಳು ನಿಷ್ಪ್ರಯೋಜಕ. ಸೌಲಭ್ಯಗಳನ್ನು ಬಳಸಿಕೊಂಡು ಜನಸಾಮಾನ್ಯರನ್ನು ತಲುಪಿ ಕಾರ್ಯಕ್ರಮಗಳನ್ನು ರೂಪಸಿಬೇಕು. ವೈಯಕ್ತಿಕ ಧ್ವೇಷಗಳಿಗೆ ಬಳಸಿಕೊಂಡಿದ್ದರು. ಅರ್ಹತೆಯಿರುವವರಿಗೆ ಏನು ಸಿಗಬೇಕೋ ಅದು ಸಿಕ್ಕರೆ ಅವರು ಸರಿಯಾಗಿ ನಿಭಾಯಿಸುತ್ತಾರೆ. ಮಹೇಶ್ ಜೋಶಿ ಅವರಿಗೆ ಅದನ್ನು ನಿಭಾಯಿಸುವ ಅರ್ಹತೆಯಿರಲಿಲ್ಲವೇನೋ ಅದಕ್ಕಾಗಿ ಹಿಂಪಡೆಯಲಾಗಿದೆ’
-ಡಾ.ಎಚ್.ಎಲ್.ಪುಷ್ಪಾ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ







