ಸೌಜನ್ಯಾ ಪ್ರಕರಣದ ಮರು ತನಿಖೆಗೆ ಸರಕಾರ ಆದೇಶಿಸಲಿ: ಶಾಸಕ ಹರೀಶ್ ಪೂಂಜ

ಹರೀಶ್ ಪೂಂಜ (File Photo)
ಬೆಂಗಳೂರು: ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ ಬಂದಿದೆ. ಕೆಲವು ಯೂಟ್ಯೂಬರ್ ಗಳು ನಮ್ಮ ಬಳಿ ದಾಖಲೆಗಳು ಇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೂ, ಸರಕಾರ ಯಾಕೆ ಸೌಜನ್ಯಾ ಪ್ರಕರಣದ ಮರು ತನಿಖೆಗೆ ಆದೇಶಿಸುತ್ತಿಲ್ಲ ಎಂದು ಬಿಜೆಪಿ ಸದಸ್ಯ ಹರೀಶ್ ಪೂಂಜ ಪ್ರಶ್ನಿಸಿದರು.
ಸೋಮವಾರ ವಿಧಾನಸಭೆಯಲ್ಲಿ ನಿಯಮ 69ರಡಿ ನಡೆದಿದ್ದ ಧರ್ಮಸ್ಥಳ ಪ್ರಕರಣದ ಚರ್ಚೆಗೆ ಸರಕಾರದ ಪರವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೀಡಿದ ಉತ್ತರಕ್ಕೆ ಸಂಬಂಧಿಸಿದಂತೆ ಅವರು ಸ್ಪಷ್ಟೀಕರಣ ಕೇಳಿದರು.
ಸರಕಾರ ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿ ರಚನೆ ಮಾಡಿದ್ದನ್ನು ನಾನು ಸ್ವಾಗತಿಸಿದ್ದೇನೆ. ಅಲ್ಲದೇ, 15-20 ದಿನ ಯಾವುದೇ ಹೇಳಿಕೆ ನೀಡಿಲ್ಲ. ತನಿಖೆ ಸದುದ್ದೇಶದಿಂದ ನಡೆಯಬೇಕು ಎಂದು ಸುಮ್ಮನಿದ್ದೆ. ಮಾಧ್ಯಮಗಳು ಹಾಗೂ ಪತ್ರಿಕೆಗಳು ವಸ್ತುನಿಷ್ಠ ಸುದ್ದಿಗಳನ್ನು ಮಾಡುತ್ತಿವೆ ಎಂದು ಅವರು ಹೇಳಿದರು.
ಆದರೆ, ಕೆಲವು ಯೂಟ್ಯೂಬರ್ ಗಳು ಸಾಮಾಜಿಕ ಜಾಲತಾಣಗಳ ಮೂಲಕ ದೇವಸ್ಥಾನದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದರೂ ಸರಕಾರ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.
ಕಾನೂನಿನ ಚೌಕಟ್ಟಿನಲ್ಲಿ ಯೂಟ್ಯೂಬರ್ಗಳನ್ನು ತನ್ನಿ. ಸೌಜನ್ಯಾ ಪ್ರಕರಣದ ಮರು ತನಿಖೆ ನಡೆಸಿ, ಇವರನ್ನು ಸಮಾಜದ ಸ್ವಾಸ್ಥ್ಯ ಹಾಳು ಮಾಡಲು ಅವಕಾಶ ಕೊಡಬೇಡಿ ಎಂದು ಹರೀಶ್ ಪೂಂಜ ಮನವಿ ಮಾಡಿದರು.





