ಹಗರಣ ರಹಿತ ಹುದ್ದೆ ಭರ್ತಿಗೆ ಸರಕಾರ ಕ್ರಮ: ಡಿಸಿಎಂ ಡಿ.ಕೆ. ಶಿವಕುಮಾರ್

ಡಿಸಿಎಂ ಡಿ.ಕೆ.ಶಿವಕುಮಾರ್ (Photo: X)
ಬೆಂಗಳೂರು: ಕಾಂಗ್ರೆಸ್ ಸರಕಾರ ಹಗರಣ ರಹಿತವಾಗಿ ಖಾಲಿ ಹುದ್ದೆಗಳನ್ನು ತುಂಬಬೇಕು ಎಂದು ಕೆಲಸ ಮಾಡುತ್ತಿದೆ. ಯುವಕರು ಧೈರ್ಯವಾಗಿರಿ. ನಾವು ನಿಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಸದ್ಯದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸಿ ಶೀಘ್ರದಲ್ಲೇ ನಿಮಗೆ ಸಂದೇಶವನ್ನು ನೀಡುತ್ತೇವೆ. ಹುದ್ದೆಗಳನ್ನು ಭರ್ತಿ ಮಾಡಿದ್ದೇವೆ, ಮಾಡುತ್ತೇವೆ, ಇದಕ್ಕೆ ಬದ್ಧವಾಗಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅಭಯ ನೀಡಿದರು.
ಬುಧವಾರ ನಗರದ ನೆಹರು ತಾರಾಲಯದ ಬಳಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಬಿಜೆಪಿ ಸರಕಾರ ಅಧಿಕಾರದಲ್ಲಿ ಇದ್ದಾಗ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಆಗಲಿಲ್ಲ. ಅವರ ಸಮಯದಲ್ಲಿ ಬಹಳಷ್ಟು ಹಗರಣಗಳಾದವು. ನಮಗೆ ಯುವಕರ ನೋವು ಅರ್ಥವಾಗುತ್ತದೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ನಮ್ಮ ಸರಕಾರ ಕೆಲಸ ಮಾಡುತ್ತಿದೆ. ಇದು ನಮ್ಮ ಆದ್ಯತೆ ಎಂದು ಹೇಳಿದರು.
ಹುದ್ದೆಗಳ ಭರ್ತಿ ಕುರಿತು ಯೋಜನೆ ತಯಾರಿಸಿದ್ದೇವೆ. ಕೆಪಿಎಸ್ಸಿ ಸೇರಿದಂತೆ ಬೇರೆ ಸಂಸ್ಥೆಗಳಿಗೆ ಹುದ್ದೆ ಭರ್ತಿಗೆ ಜವಾಬ್ದಾರಿ ನೀಡಿದ್ದೇವೆ. ಶಿಕ್ಷಕರ ಹುದ್ದೆ, ಆರೋಗ್ಯ ಇಲಾಖೆಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಒಳಮೀಸಲಾತಿ ವಿಚಾರಕ್ಕೆ ಒಂದಷ್ಟು ಅಡಚಣೆಗಳು ಬರುತ್ತಿದೆ. ನಿರುದ್ಯೋಗಿ ಯುವಕರಿಗೆ ಶಕ್ತಿ ಬರಲಿ ಎಂದೇ ಯುವನಿಧಿ ಯೋಜನೆ ಜಾರಿಗೆ ತಂದಿದ್ದೇವೆ ಎಂದು ಶಿವಕುಮಾರ್ ತಿಳಿಸಿದರು.
ಮೆಟ್ರೋ ವಿಸ್ತರಣೆ ಸರಕಾರದ ಉದ್ದೇಶಗಳಲ್ಲಿ ಒಂದು:
ಮೆಟ್ರೋ ಜಾಲವನ್ನು 2027ರ ಹೊತ್ತಿಗೆ 175 ಕಿಲೋ ಮೀಟರ್ ಗೆ ವಿಸ್ತರಿಸಲು ಬಿಎಂಆರ್ಸಿಎಲ್ ಗೆ ಡೆಡ್ ಲೈನ್ ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಸರ್ವೇ ಮಾಡಿಸುತ್ತಿದ್ದೇವೆ. ಮೆಟ್ರೋ ವಿಚಾರವಾಗಿ ನೀಡಿದ ಭರವಸೆಗಳನ್ನು ಈಡೇರಿಸುತ್ತೇವೆ. ಡಬಲ್ ಡೆಕ್ಕರ್ ವಿಚಾರದಲ್ಲಿ ಸಣ್ಣ ಸ್ಪಷ್ಟನೆ ಕೇಳುತ್ತಿರುವ ಕಾರಣಕ್ಕೆ ಸಧ್ಯದಲ್ಲೇ ಕೇಂದ್ರ ಸಚಿವರನ್ನು ಭೇಟಿ ಮಾಡುತ್ತೇನೆ. ಮೆಟ್ರೋ ವಿಸ್ತರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವುದಕ್ಕೆ ನಾವು ಬದ್ಧವಾಗಿದ್ದೇವೆ ಎಂದು ಹೇಳಿದರು.
ಎಲ್ಲ ಇಲಾಖೆಗಳಲ್ಲೂ ಬಿಲ್ ಬಾಕಿ ಇರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಯಡಿಯೂರಪ್ಪ ಹಾಗೂ ಬೊಮ್ಮಾಯಿ ಸರಕಾರದ ವೇಳೆ ಯಾವುದೆ ಆರ್ಥಿಕ ಸ್ಥಿತಿಗತಿಯನ್ನು ನೋಡದೆ ಹೆಚ್ಚಿನ ಕಾಮಗಾರಿಗಳಿಗೆ ಅನುಮತಿ ನೀಡಲಾಯಿತು. ಈ ಕಾರಣಕ್ಕೆ ಈಗ ಸಮಸ್ಯೆ ಉಂಟಾಗಿದೆ. ನಾವು ಅನೇಕ ಗುತ್ತಿಗೆದಾರರಿಗೆ ಹಣ ಲಭ್ಯತೆ ಇಲ್ಲದೇ ಇರುವ ಕಾರಣಕ್ಕೆ ಕಾಮಗಾರಿಗಳನ್ನು ತೆಗೆದುಕೊಳ್ಳಬೇಡಿ ಎಂದು ಸಲಹೆ ನೀಡಿದ್ದರೂ, ಒಂದಷ್ಟು ಜನ ಕಾಮಗಾರಿಗಳನ್ನು ತೆಗೆದುಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದರು.
ಸರಕಾರದ ವಿರುದ್ಧ ಗುತ್ತಿಗೆದಾರರು ಪ್ರತಿಭಟನೆ ಮಾಡಲು ಮುಂದಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಈ ಬಗ್ಗೆ ಅವರ ಜೊತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.







