ದೂರು ಕೊಟ್ಟರೆ ಸಕ್ಕರೆ ಕಾರ್ಖಾನೆಗಳಲ್ಲಿ ಸರಕಾರದಿಂದಲೇ ತೂಕದ ಯಂತ್ರ ಅಳವಡಿಕೆ: ಸಚಿವ ಶಿವಾನಂದ ಪಾಟೀಲ
ಬೆಂಗಳೂರು, ಜು. 21: ಸಕ್ಕರೆ ಕಾರ್ಖಾನೆಗಳಿಂದ ರೈತರ ಕಬ್ಬಿನ ತೂಕದಲ್ಲಿ ವಂಚನೆ ಕುರಿತು ದೂರು ಬಂದಲ್ಲಿ ಆಕ್ಷಣದಲ್ಲಿಯೇ ಸರಕಾರವೇ ತೂಕದ ಯಂತ್ರ ಅಳವಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ನಿಯಮ 69ರ ಅಡಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಪ್ರಸ್ತಾಪಿಸಿದ ಚರ್ಚೆಗೆ ಉತ್ತರಿಸಿದ ಅವರು, ದಿನೇ ದಿನೇ ರೈತರ ಕಬ್ಬನ್ನು ತೂಕ ಮಾಡುವಾಗ ವ್ಯತ್ಯಾಸ ಮಾಡಲಾಗುತ್ತಿದೆ ಎಂಬ ಸಾಕಷ್ಟು ದೂರುಗಳು ಇವೆ. ಹಾಗಾಗಿ, ನಮ್ಮ ಇಲಾಖೆಯಿಂದ ತೂಕದ ಯಂತ್ರ ಅಳವಡಿಸಿ ರೈತರಿಗೆ ವಂಚನೆಯಾಗದಂತೆ ಕ್ರಮ ಕೈಗೊಳ್ಳುವ ಉದ್ದೇಶ ನಮ್ಮದು. ಈ ಸಂಬಂಧ ವಂಚನೆಗೊಳಗಾದವರುದೂರು ನೀಡಿದರೆ, ಕ್ರಮ ಜರುಗಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಲ್ಲದೆ, ತೂಕ ಮತ್ತು ಅಳತೆ ಇಲಾಖೆಯ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಕೆಲಸ ಮಾಡಿದ್ದರೆ, ನಮಗೆ ಈ ಸಮಸ್ಯೆ ಉಲ್ಬಣಗೊಳ್ಳುತ್ತಿರಲಿಲ್ಲ. ಈ ಬಗ್ಗೆ ಅವರ ಯಾವ ರೀತಿ ಕ್ರಮ ಕೈಗೊಳ್ಳುತ್ತಿದ್ದಾರೆ ಎನ್ನುವುದು ಗೊತ್ತಾಗಿಲ್ಲ. ಅವರನ್ನು ಏನಾದರೂ ಪ್ರಶ್ನೆ ಮಾಡಿದರೆ ವರದಿ ನೀಡುತ್ತೇವೆ ಎಂದು ಹೇಳಿ ಸುಮ್ಮನಾಗುತ್ತಾರೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ಆ್ಯಪ್ ಬಳಕೆ: ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ, ಮೋಸ ಮಾಡುವ ಯಂತ್ರಗಳನ್ನು ಪ್ರತಿ ಖಾಸಗಿ ಕಾರ್ಖಾನೆಗಳಿಗೆ ಮಹಾರಾಷ್ಟ್ರದಿಂದ ಓರ್ವ ವ್ಯಕ್ತಿಯೂ ಸರಬರಾಜು ಮಾಡುತ್ತಿದ್ದಾನೆ. ಇದೊಂದು ವ್ಯವಸ್ಥಿತ ರೀತಿಯಲ್ಲಿ ನಡೆದುಕೊಂಡು ಬರುತ್ತಿದ್ದು, ಇದಕ್ಕಾಗಿ ಆ್ಯಪ್ ಅನ್ನು ಮಾಡಿಕೊಳ್ಳಲಾಗಿದೆ.ಅದರಲ್ಲೂ ಇದನ್ನು ನಿಯಂತ್ರಣ ಮಾಡಲು ರಿಮೋಟ್ ಅನ್ನು ಕಾರ್ಖಾನೆ ಮಾಲಕರಿಗೆ ನೀಡಲಾಗಿದೆ ಎಂದು ಸವದಿ ಸದನದ ಗಮನ ಸೆಳೆದರು.
ಕಬ್ಬು ತೂಕದ ವಂಚನೆ ದಿನೇ ದಿನೇ ಹೆಚ್ಚಾಗುತ್ತಿದೆ. ಕಳೆದ ಬಾರಿ ಬಿಜೆಪಿ ಸರಕಾರದ ಅವಧಿಯಲ್ಲಿಯೂ ಇಂತಹ ಗಂಭೀರ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದರೂ, ಅಗತ್ಯ ಕ್ರಮ ಕೈಗೊಳ್ಳಲಿಲ್ಲ. ಆದರೆ, ಈಗ ಸರಕಾರದ ಮೇಲೆ ನಂಬಿಕೆ ಇದ್ದು, ವಂಚನೆ ತಡೆಯುವಲ್ಲಿ ಯಶಸ್ವಿಯಾಗುತ್ತಾರೆ ಎನ್ನುವ ವಿಶ್ವಾಸವೂ ಇದೆ ಎಂದರು.
ಇನ್ನೂ, ಕಳೆದ ಸರಕಾರದ ವೇಳೆ 21 ಕಡೆ ಕಬ್ಬು ಕಾರ್ಖಾನೆ ಗಳ ಮೇಲೆ ದಾಳಿ ಮಾಡಲಾಗಿತ್ತು. ಆದರೆ ಎಲ್ಲಿಯೂ ತೂಕದಲ್ಲಿ ಮೋಸ ಮಾಡಿರುವ ದಾಖಲೆ ನಿಮಗೆ ಸಿಕ್ಕಿಲ್ಲ ಎಂದ ಅವರು, ವಾಟ್ಸ್‍ಆಪ್‍ನಲ್ಲಿ ಒಂದು ನೈಜ ವಿಡಿಯೊ ನೋಡಿದ್ದೇನೆ. ಅದರಲ್ಲಿ 9 ತಿಂಗಳ ಗರ್ಭಿಣಿ ಕಬ್ಬು ಕಟಾವಿಗೆ ಬಂದಿದ್ದಳು, ಕಬ್ಬಿನ ಗದ್ದೆಯಲ್ಲೇ ಹೆರಿಗೆಯಾಗಿತ್ತು.
ಮೂರು ದಿನದ ವಿರಾಮ ಪಡೆದು ಮಗುವನ್ನು ಅಲ್ಲೇ ಇರಿಸಿಕೊಂಡು ಕಬ್ಬು ಕಟಾವು ಮಾಡುತ್ತಿದ್ದಳು, ಅಂತಹ ಬಡವರು ರಕ್ತ ಸುರಿಸಿ, ಬೆವರು ಹರಿಸಿ ಕೆಲಸ ಮಾಡಿದ ಕೂಲಿಯ ಹಣದಲ್ಲಿ ಎರಡು ಟನ್ ಹೊಡೆದರೆ ನಿಮಗೆ ಒಳ್ಳೆಯದಾಗುತ್ತದೆಯಾ?. ಯಾರು ಇಂತಹ ವಂಚನೆ ಮಾಡುತ್ತಿದ್ದೀರೋ ಅದನ್ನು ನಿಲ್ಲಿಸಿ ಎಂದು ಮನವಿ ಮಾಡಿದರು.