ವಿಧಾನಸೌಧದಲ್ಲಿ ವಿದ್ಯುತ್-ನೀರಿನ ಪೋಲು ತಡೆಗೆ ಕ್ರಮ: ಸ್ಪಷ್ಟೀಕರಣ

ಬೆಂಗಳೂರು: ವಿಧಾನಸೌಧ ಹಾಗೂ ಇತರೆ ಸರಕಾರಿ ಕಚೇರಿಗಳಲ್ಲಿ ವಿದ್ಯುತ್ ಮತ್ತು ನೀರಿನ ಸಂರಕ್ಷಣೆ ಕುರಿತು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಯನ್ನು ಸರಕಾರವು ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ ಸ್ಪಷ್ಟೀಕರಣ ನೀಡಿದೆ.
ರಾಜ್ಯ ಸರಕಾರವು ವಿದ್ಯುತ್ ಹಾಗೂ ನೀರಿನ ಸಂರಕ್ಷಣೆಗೆ ಅತ್ಯುನ್ನತ ಆದ್ಯತೆ ನೀಡಿದ್ದು, ಸರಕಾರಿ ಕಚೇರಿಗಳಲ್ಲಿ ಇಂಧನ ಮತ್ತು ಜಲ ಸಂಪನ್ಮೂಲಗಳ ಮಿತವ್ಯಯದ ಬಳಕೆಯನ್ನು ಖಚಿತಪಡಿಸಲು ಈಗಾಗಲೇ ವಿವಿಧ ಕ್ರಮಗಳನ್ನು ಜಾರಿಗೊಳಿಸಿದೆ. ಈ ಸಂಬಂಧ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಯು 2022ರ ಫೆ.21ರಂದೇ ಅಗತ್ಯ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲ ಇಲಾಖೆಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.
ವಿದ್ಯುತ್ ಸಂರಕ್ಷಣೆ ಹಾಗೂ ಮಿತವ್ಯಯದ ಕ್ರಮಗಳು: ಸ್ವಯಂಚಾಲಿತ ದೀಪಗಳ ವ್ಯವಸ್ಥೆ. ವಿದ್ಯುತ್ ಉಳಿಸಲು ವಿಧಾನಸೌಧದ ಆವರಣದಲ್ಲಿರುವ ಹೊರಾಂಗಣ ವಿದ್ಯುತ್ ದೀಪಗಳನ್ನು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯಕ್ಕೆ ಅನುಗುಣವಾಗಿ ಸ್ವಯಂಚಾಲಿತ ವ್ಯವಸ್ಥೆಯ ಮೂಲಕ ಆನ್ ಮತ್ತು ಆಫ್ ಮಾಡಲಾಗುತ್ತಿದೆ.
ಕಚೇರಿ ಸಮಯದ ನಂತರ ಬಂದ್: ಪ್ರತಿದಿನ ಕಚೇರಿ ಅವಧಿ ಮುಕ್ತಾಯವಾದ ನಂತರ ಗ್ರೂಪ್-ಡಿ ಸಿಬ್ಬಂದಿಯ ಮೂಲಕ ಎಲ್ಲ ವಿದ್ಯುತ್ ದೀಪಗಳು ಹಾಗೂ ಅಗತ್ಯವಿಲ್ಲದ ವಿದ್ಯುತ್ ಉಪಕರಣಗಳನ್ನು ಕಡ್ಡಾಯವಾಗಿ ಬಂದ್ ಮಾಡಲಾಗುತ್ತಿದೆ.
ಏಸಿ ತಾಪಮಾನ ನಿಯಂತ್ರಣ: ಎಲ್ಲ ಏರ್ ಕಂಡೀಷನರ್‍ಗಳನ್ನು 24 ರಿಂದ 26 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿಯೇ ಬಳಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಅಧಿಕಾರಿ ಅಥವಾ ಸಿಬ್ಬಂದಿ ಕಚೇರಿಯಲ್ಲಿ ಇಲ್ಲದ ಸಂದರ್ಭದಲ್ಲಿ ಲೈಟ್, ಫ್ಯಾನ್, ಏರ್ ಕಂಡೀಷನರ್ ಹಾಗೂ ಇತರೆ ವಿದ್ಯುತ್ ಉಪಕರಣಗಳನ್ನು ಕಡ್ಡಾಯವಾಗಿ ಬಂದ್ ಮಾಡುವಂತೆ ಮತ್ತೊಮ್ಮೆ ಸೂಚಿಸಲಾಗಿದೆ.
ನೀರಿನ ಮಿತವ್ಯಯ ಹಾಗೂ ಸೋರಿಕೆ ನಿಯಂತ್ರಣ ಕ್ರಮಗಳು: ನೀರಿನ ಸಂರಕ್ಷಣೆಯ ದೃಷ್ಟಿಯಿಂದ, ಮೇಲ್ಮಟ್ಟದ ನೀರಿನ ಟ್ಯಾಂಕ್‍ಗಳಿಂದ ನೀರು ವ್ಯರ್ಥವಾಗಿ ಹರಿಯದಂತೆ ತಡೆಯಲು ‘ಬಾಲ್ ವಾಲ್ವ್'ಗಳನ್ನು ಅಳವಡಿಸಲಾಗಿದೆ.
ವಿಶೇಷ ಅಧಿಕಾರಿ ನೇಮಕ: ವಿಧಾನಸೌಧದಲ್ಲಿನ ನೀರಿನ ಸೋರಿಕೆ ಹಾಗೂ ಅನಗತ್ಯ ಬಳಕೆಯನ್ನು ತಡೆಗಟ್ಟಲು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ವಿಶೇಷ ಜವಾಬ್ದಾರಿಯನ್ನು ವಹಿಸಲಾಗಿದೆ.
ತ್ಯಾಜ್ಯ ನೀರು ಮರುಬಳಕೆ ಮತ್ತು ಮಳೆನೀರು ಕೊಯ್ಲು: ವಿಧಾನಸೌಧದ ಉದ್ಯಾನಗಳ ನಿರ್ವಹಣೆಗೆ ಕೇವಲ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಬಳಸಲಾಗುತ್ತಿದೆ. ಪ್ರಸ್ತುತ ಎರಡು ಬೋರ್‍ವೆಲ್‍ಗಳು ಕಾರ್ಯನಿರ್ವಹಿಸುತ್ತಿದ್ದು, ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
ತಾಂತ್ರಿಕ ಸಹಕಾರ: ನೀರಿನ ಮಿತವ್ಯಯದ ಬಳಕೆ ಹಾಗೂ ಸೋರಿಕೆ ನಿಯಂತ್ರಣಕ್ಕಾಗಿ ಬೆಂಗಳೂರು ಜಲ ಸರಬರಾಜು ಮತ್ತು ಒಳಚರಂಡಿ ಮಂಡಳಿಯ ತಾಂತ್ರಿಕ ಸಹಕಾರವನ್ನು ಪಡೆಯಲಾಗುತ್ತಿದೆ. ವಿಧಾನಸೌಧದಲ್ಲಿ ಜಾರಿಯಲ್ಲಿರುವ ಈ ಎಲ್ಲ ಸಂರಕ್ಷಣಾ ಕ್ರಮಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ(ಕಾರ್ಯಕಾರಿ)ಯ ಸರಕಾರದ ಅಧೀನ ಕಾರ್ಯದರ್ಶಿ ಹಾಗೂ ಕಿರಿಯ ಅಭಿಯಂತರರು (ವಿದ್ಯುತ್) ನಿಯಮಿತವಾಗಿ ಪರಿಶೀಲಿಸಿ ಖಚಿತಪಡಿಸಿಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಲಾಗಿದೆ.






