ಕೃಷಿ ಅಧಿಕಾರಿಗಳ ನೇಮಕಾತಿ ಪರೀಕ್ಷೆ ಮುಂದೂಡಿಕೆ: ಕೃಷಿ ವಿದ್ಯಾರ್ಥಿಗಳ ಹೋರಾಟಕ್ಕೆ ಸರಕಾರ ಸ್ಪಂದನೆ

ಬೆಂಗಳೂರು: ಕೃಷಿ ಅಧಿಕಾರಿ(ಎಒ) ಹಾಗೂ ಸಹಾಯಕ ಕೃಷಿ ಅಧಿಕಾರಿ (ಎಎಒ) ಹುದ್ದೆಗಳ ನೇಮಕಾತಿ ಅರ್ಹತಾ ಮಾನದಂಡ ಅವೈಜ್ಞಾನಿಕವಾಗಿದ್ದು ಪುನರ್ ಪರಿಶೀಲಿಸಿ ಪರಿಷ್ಕೃತ ಪ್ರತ್ಯೇಕ ಅಧಿಸೂಚನೆ ಹೊರಡಿಸುವಂತೆ ಕೃಷಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಹೋರಾಟಕ್ಕೆ ಸರಕಾರ ಸ್ಪಂದಿಸಿ, ಆ.8 ಮತ್ತು 9 ರಂದು ನಿಗದಿಯಾಗಿದ್ದ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡುವುದಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಗುರುವಾರ ನಗರದ ಫ್ರೀಡಂ ಪಾರ್ಕ್ನಲ್ಲಿ ಕೃಷಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಹೋರಾಟ ಸ್ಥಳಕ್ಕೆ ಆಗಮಿಸಿದ ಸಚಿವ ಪ್ರಿಯಾಂಕ್ ಖರ್ಗೆ ವಿದ್ಯಾರ್ಥಿಗಳ ಬೇಡಿಕೆಗಳನ್ನು ಆಲಿಸಿ ಮಾತನಾಡಿದರು. ಯುವಕರು ಪ್ರತಿಭಟನೆಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಬಾರದು. ಅವರು ಓದಬೇಕು, ಉದ್ಯೋಗ ಪಡೆದು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ಸರಕಾರ ಈಗಾಗಲೇ 74 ಸಾವಿರ ಸರಕಾರಿ ಹುದ್ದೆಗಳ ಭರ್ತಿಗೆ ಅಗತ್ಯ ಸಿದ್ಧತೆ ಮಾಡುತ್ತಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಕಾನೂನು ತರಲು ಸರಕಾರ ಬದ್ಧವಾಗಿದೆ ಎಂದರು.
ಕೃಷಿ ವಿದ್ಯಾರ್ಥಿಗಳ ಬೇಡಿಕೆಗಳನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ತರಲಾಗಿದೆ. 2021-22ರಲ್ಲಿ ನಿಯಮಗಳಲ್ಲಿ ತಿದ್ದುಪಡಿ ಮಾಡಲಾಗಿದೆ. ಈ ಬಗ್ಗೆ ಆಗಲೇ ಎಚ್ಚರಿಕೆ ವಹಿಸಬೇಕಿತ್ತು ಎಂದು ಸಿಎಂ ಸೂಚಿಸಿದ್ದಾರೆ. ಇದು ನಿಮ್ಮ ಸರಕಾರ. ನಮ್ಮಿಂದ ಯಾವುದೇ ತಪ್ಪು ಆಗಿದ್ದರೆ ಅದನ್ನು ಸರಿಪಡಿಸುವ ಅಧಿಕಾರವೂ ನಮ್ಮದೇ. ಖಂಡಿತವಾಗಿ ಅದನ್ನು ಸರಿಪಡಿಸುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಭರವಸೆ ನೀಡಿದರು.
ಬಹಳ ವರ್ಷಗಳ ನಂತರ ಕೃಷಿ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆ ವಿದ್ಯಾರ್ಥಿಗಳ ಆತಂಕವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ವಿದ್ಯಾರ್ಥಿಗಳು ಮಂಡಿಸಿರುವ ಪ್ರಮುಖ ಬೇಡಿಕೆಗಳನ್ನು ಸರಕಾರ ಸಕಾರಾತ್ಮಕವಾಗಿ ಪರಿಶೀಲಿಸಲಿದೆ. ಇದರ ಜೊತೆಗೆ ವಿಷಯದ ಸಮಗ್ರ ಪರಿಶೀಲನೆಗಾಗಿ ವಿಶೇಷ ತಜ್ಞರ ಸಮಿತಿ ರಚಿಸಿ, 15 ದಿನಗಳೊಳಗೆ ವರದಿ ಪಡೆದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಈ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ‘ಎಕ್ಸ್’ ಖಾತೆಯಲ್ಲಿ, ‘ನಮ್ಮದು ಯುವಜನರ ಧ್ವನಿಗೆ ಮಿಡಿಯುವ ಸರಕಾರ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯವೇ ನಮ್ಮ ಗುರಿ. ಆ.4 ರಂದು ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನನ್ನನ್ನು ಭೇಟಿಯಾಗಿ ತಮ್ಮ ನೋವನ್ನು ತೋಡಿಕೊಂಡಾಗ, ಅವರ ಆತಂಕಕ್ಕೆ ನಮ್ಮ ಸರಕಾರ ತಕ್ಷಣವೇ ಸ್ಪಂದಿಸಿದೆ. ವಿದ್ಯಾರ್ಥಿಗಳ ಅಳಲಿಗೆ ಸದಾ ಕಿವಿಗೊಡುವ ನಮ್ಮ ಸರಕಾರ, ಕೃಷಿ ಅಧಿಕಾರಿ ನೇಮಕಾತಿಯ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲು ತೀರ್ಮಾನಿಸಿದೆ. ನಮ್ಮ ಕೃಷಿ ಪದವೀಧರರಿಗೆ ಕಿಂಚಿತ್ತೂ ಅನ್ಯಾಯವಾಗದಂತೆ, ಪರೀಕ್ಷೆ ನಡೆಸಲು ದೃಢಸಂಕಲ್ಪ ಮಾಡಿದೆ. ವಿದ್ಯಾರ್ಥಿಗಳೇ, ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗಲಿದೆ. ನಿಮ್ಮ ಕನಸುಗಳನ್ನು ನನಸಾಗಿಸುವುದು ಹಾಗೂ ನಿಮ್ಮ ಭವಿಷ್ಯವನ್ನು ಕಾಪಾಡುವುದು ನಮ್ಮ ಜವಾಬ್ದಾರಿ’ ಎಂದು ತಿಳಿಸಿದ್ದಾರೆ.
ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿಗಳ 945 ಹುದ್ದೆಗಳ ನೇಮಕಾತಿ ಸಂಬAಧ ಹೊರಡಿಸಿರುವ ಅಧಿಸೂಚನೆಯಲ್ಲಿ ಅರ್ಹ ಮಾನದಂಡವಿಲ್ಲದೇ ಬಿಇ (ಬಯೋಟೆಕ್ನಾಲಜಿ) ಹಾಗೂ ಹಾಗೂ ಬಿಟೆಕ್ (ಬಯೋಟೆಕ್ನಾಲಜಿ) ಪದವೀಧರರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಇದರಿಂದ ಅರ್ಹ ಕೃಷಿ ಪದವೀಧರ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಹಾಗಾಗಿ ನೇಮಕಾತಿ ಅರ್ಹತಾ ನಿಯಮ ತಿದ್ದುಪಡಿ ಮಾಡಿ ಪರಿಷ್ಕೃತ ಅಧಿಸೂಚನೆ ಹೊರಡಿಸುವಂತೆ ಹಾಗೂ ಐಸಿಎಆರ್ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡಿದ ಕೃಷಿ ಪದವೀಧರರಿಗೆ ಮಾತ್ರ ಅವಕಾಶ ನೀಡಬೇಕು ಎಂದು ಕೃಷಿ ವಿದ್ಯಾರ್ಥಿಗಳು ಆಗ್ರಹಿಸಿದ್ದರು.
ಹೋರಾಟದಲ್ಲಿ ಕೃಷಿ ವಿಜ್ಞಾನಿ ಪ್ರಕಾಶ್ ಕಮ್ಮರಡಿ, ನಿವೃತ್ತ ಪ್ರಾಧ್ಯಾಪಕ ನಾರಾಯಣಸ್ವಾಮಿ, ರೈತ ಮುಖಂಡ ಗೋಪಾಲ್, ವಿದ್ಯಾರ್ಥಿ ಮುಖಂಡರಾದ ನವೀನ್, ನಂದೀಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕೃಷಿ ಇಲಾಖೆಯಲ್ಲಿನ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮುಷ್ಕರ ನಡೆಸುತ್ತಿದ್ದ ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಅವರ ಅಹವಾಲುಗಳನ್ನು ಆಲಿಸಲಾಯಿತು.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) August 6, 2026
ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಅಹವಾಲುಗಳನ್ನು ಆಲಿಸಿದ ನಂತರ, @CMofKarnataka ನಿರ್ದೇಶನದಂತೆ ಇದೇ ಶನಿವಾರ ಹಾಗೂ… pic.twitter.com/gaI4d01MRO






