‘ಅಲ್ಪಸಂಖ್ಯಾತ ಸಮುದಾಯದ ಸರಳ ಸಾಮೂಹಿಕ ಮದುವೆ’| ಪ್ರತಿ ಜೋಡಿಗೆ 50 ಸಾವಿರ ರೂ.ಪ್ರೋತ್ಸಾಹ ಧನ: ಸರಕಾರದ ಮಂಜೂರಾತಿ

ಸಾಂದರ್ಭಿಕ ಚಿತ್ರ (PTI)
ಬೆಂಗಳೂರು: ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತ ಸಮುದಾಯದವರ ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡಲು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಯುವ ಸಾಮೂಹಿಕ ವಿವಾಹ ವೆಚ್ಚಗಳಿಗಾಗಿ ಪ್ರತಿ ಜೋಡಿಗೆ 50 ಸಾವಿರ ರೂ. ಮತ್ತು ಕಾರ್ಯಕ್ರಮ ಆಯೋಜಿಸುವ ಸಂಸ್ಥೆಗೆ ಪ್ರತಿ ಜೋಡಿಗೆ 5 ಸಾವಿರ ರೂ.ಗಳನ್ನು ನೀಡುವ ಕಾರ್ಯಕ್ರಮಕ್ಕೆ ಸರಕಾರದ ಮಂಜೂರಾತಿ ದೊರೆತಿದೆ.
ರಾಜ್ಯ ಬಜೆಟ್ ನಲ್ಲಿ ಈ ಕುರಿತು ಘೋಷಿಸಲಾಗಿತ್ತು. ಇದೀಗ ಸರಕಾರಿ ಆದೇಶ ಹೊರಬಿದ್ದಿದೆ. ಈ ಯೋಜನೆಯಡಿಯಲ್ಲಿ 5 ಸಾವಿರ ಜೋಡಿ ಮಿತಿವರೆಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾಡಬಹುದಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರಸಕ್ತ ಕಾರ್ಯನಿರ್ವಹಿಸುತ್ತಿರುವ 250 ಮೌಲಾನಾ ಆಝಾದ್ ಆಂಗ್ಲ ಮಾಧ್ಯಮ ಮಾದರಿ ಶಾಲೆಗಳಲ್ಲಿ ಹಂತ ಹಂತವಾಗಿ ಕರ್ನಾಟಕ ಪಬ್ಲಿಕ್ ಶಾಲೆಗಳ ಮಾದರಿಯಲ್ಲಿ ಪೂರ್ವ ಪ್ರಾಥಮಿಕ ಹಂತದಿಂದ ಪಿಯು ವರೆಗೆ ತರಗತಿ ಪ್ರಾರಂಭಿಸಲು ಘೋಷಿಸಲಾಗಿತ್ತು. ಪ್ರಸಕ್ತ ವರ್ಷ 100 ಆಝಾದ್ ಶಾಲೆ ಗಳನ್ನು ಕರ್ನಾಟಕ ಪಬ್ಲಿಕ್ ಶಾಲೆ ಗಳನ್ನಾಗಿ ಮೇಲ್ದರ್ಜೆ ಗೇರಿಸಲು ಆದೇಶ ಹೊರಡಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





