ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಎನ್ಐಎಗೆ | ಕೇಂದ್ರ ಗೃಹ ಇಲಾಖೆಯಿಂದ ಪತ್ರ ಬಂದಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ : ಜಿ.ಪರಮೇಶ್ವರ್

ಡಾ.ಜಿ.ಪರಮೇಶ್ವರ್
ಬೆಂಗಳೂರು : ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ವಹಿಸುವಂತೆ ಕೇಂದ್ರ ಗೃಹ ಇಲಾಖೆಯಿಂದ ಪತ್ರ ಬಂದಿದೆ ಎಂಬುದನ್ನು ಅಧಿಕಾರಿಗಳು ನನಗೆ ತಿಳಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸದಾಶಿವನಗರದ ಗೃಹಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣವನ್ನು ಆ ಭಾಗದ ಜನರು ಎನ್ಐಎ ತನಿಖೆಗೆ ವಹಿಸುವಂತೆ ಮಾತನಾಡುತ್ತಿದ್ದರು. ಯಾರಾದರೂ ಮನವಿ ಮಾಡಿರಬಹುದು. ಸಂಸದರು, ಶಾಸಕರು ಹೇಳಿಕೊಂಡಿರಬಹುದು. ಕೇಂದ್ರ ಗೃಹ ಇಲಾಖೆಯಿಂದ ನಮಗೆ ಪತ್ರ ಬಂದಿದೆ ಎಂದು ಸ್ಪಷ್ಟಪಡಿಸಿದರು.
ತುಮಕೂರಿಗೆ ಅರ್ಬನ್ ರೈಲು, ಮೆಟ್ರೋ ರೈಲು ಎರಡೂ ಬರಲಿ:
ತುಮಕೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಾಗತ ಕಮಾನು ನಿರ್ಮಿಸುವ ಕುರಿತಂತೆ ಕೇಂದ್ರದ ರೈಲ್ವೆ ಮತ್ತು ಜಲಶಕ್ತಿ ರಾಜ್ಯಖಾತೆ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಮಾಡಿದ್ದೇನೆ. ತುಮಕೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಾಗತ ಕಮಾನು ನಿರ್ಮಿಸಲು ಸ್ಮಾರ್ಟ್ ಸಿಟಿಯಿಂದ 5 ಕೋಟಿ ರೂ. ಒದಗಿಸಿಕೊಂಡಿದ್ದೇವೆ. ರಾಷ್ಟ್ರೀಯ ಹೆದ್ದಾರಿಯ ಸ್ಥಳೀಯ ನಿರ್ದೇಶಕರು ಆಗುವುದಿಲ್ಲ ಎಂದು ನಮಗೆ ತಿಳಿಸಿದ್ದರು. ಇದಕ್ಕೆ ಕೇಂದ್ರ ಸರಕಾರದ ಅನುಮತಿಯಾಗಬೇಕಿದೆ. ಕೇಂದ್ರದ ಸಚಿವ ವಿ.ಸೋಮಣ್ಣ ಅವರು ನಮ್ಮ ಜಿಲ್ಲೆಯ ಸಂಸದರು. ಕೇಂದ್ರದ ಭೂ ಹೆದ್ದಾರಿ ಸಚಿವರಾದ ನಿತೀನ್ ಗಡ್ಕರಿ ಅವರಿಗೆ ವಿ.ಸೋಮಣ್ಣ ಅವರ ಮೂಲಕ ಮನವಿ ನೀಡಿ, ಅನುಮತಿಯನ್ನು ಕೊಡಿಸುವಂತೆ ಕೇಳಿದ್ದೇನೆ. ಅನುಮತಿ ಕೊಟ್ಟರೆ ತುಮಕೂರಿನ ಆರಂಭದಲ್ಲಿ ಸ್ವಾಗತ ಕಮಾನು ನಿರ್ಮಿಸುತ್ತೇವೆ ಎಂದು ತಿಳಿಸಿದರು.
ನಮ್ಮ ಜಿಲ್ಲೆಗೆ ಕೇಂದ್ರದ ಅನೇಕ ಯೋಜನೆಗಳು ಬರಬೇಕಿದೆ. ಕುಡಿಯುವ ನೀರಿಗೆ ಸಂಬಂಧಪಟ್ಟಂತೆ ಅನೇಕ ಯೋಜನೆಗಳು ಕೇಂದ್ರ ಸರಕಾರದ ವ್ಯಾಪ್ತಿಗೆ ಬರುತ್ತವೆ. ಇದರಲ್ಲಿ ನಮ್ಮ ತಾಲ್ಲೂಕು ಸೇರಿದ್ದು, ಅವರೊಂದಿಗೆ ಚರ್ಚಿಸಿದ್ದೇನೆ ಎಂದರು.
ತುಮಕೂರು ನಗರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರುವುದರಿಂದ ಪ್ರಯಾಣದ ವೇಳೆ ಯಾರಿಗೂ ಗೊತ್ತಾಗುವುದಿಲ್ಲ. ಸ್ವಾಗತ ಕಮಾನು ನಿರ್ಮಿಸಿದರೆ ಗೊತ್ತಾಗುತ್ತದೆ. ಈ ನಿಟ್ಟಿನಲ್ಲಿ 5 ಕೋಟಿ ರೂ. ಹಣ ಒದಗಿಸಿಕೊಂಡಿದ್ದೇವೆ ಎಂದು ಹೇಳಿದರು.
ತುಮಕೂರಿಗೆ ಮೆಟ್ರೋ ಯೋಜನೆ ಬಗ್ಗೆ ರಾಜ್ಯ ಸರಕಾರದ ತೀರ್ಮಾನಗಳು ಏನಾಗುತ್ತದೆ ಎಂಬುದನ್ನು ನೋಡಿ ಸಚಿವ ವಿ.ಸೋಮಣ್ಣ ಅವರ ಜೊತೆ ಮಾತನಾಡುತ್ತೇನೆ. ತುಮಕೂರಿಗೆ ಮೆಟ್ರೋ ಅಗತ್ಯ ಇದೆ ಎಂದು ಸೋಮಣ್ಣ ಅವರು ಹೇಳಿದ್ದಾರೆ. ಸಬ್ ಅರ್ಬನ್ ಯೋಜನೆಯೂ ಆಗಲಿ ಎಂದರು.
ಹೇಮಾವತಿ ಕೆನಾಲ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ಬೇಡ ಎಂದು ತಿಳಿಸಿದ್ದೇನೆ. ಸಭೆ ಕರೆಯಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ನೀರಾವರಿ ಸಚಿವರೊಂದಿಗೆ ಮಾತನಾಡುತ್ತೇನೆ. ಆನಂತರ ಸಭೆ ಕರೆಯುವುದರ ಕುರಿತು ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.
ಖಾತೆ ಬದಲಾಯಿಸುವಂತೆ ಮುಖ್ಯಮಂತ್ರಿಯವರನ್ನು ಕೇಳಿಲ್ಲ :
ನಾನು ಯಾವತ್ತು ಕೂಡ ಇಂತಹ ಖಾತೆ ಬೇಕು ಎಂದು ಮುಖ್ಯಮಂತ್ರಿಯವರನ್ನು ಕೇಳಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ಸ್ಪಷ್ಟಪಡಿಸಿದರು.
ಖಾತೆ ಬದಲಾವಣೆ ಕುರಿತಂತೆ ನಿಮಗೆ ಯಾರು ಹೇಳಿದರು. ಒಂದು ವೇಳೆ ನಿಮ್ಮ ಕಿವಿಗೆ ಬಿತ್ತು ಅಥವಾ ಯಾರೋ ಹೇಳಿದರು ಎಂಬ ಮಾತು ಬಂದಾಗ ನನ್ನನ್ನು ನೇರವಾಗಿ ಕೇಳಿ ಸ್ಪಷ್ಟಪಡಿಸಿಕೊಳ್ಳಬಹುದಲ್ಲವೇ?. ಸುದ್ದಿ ಮಾಡುವ ಮೊದಲು ನನ್ನನ್ನು ನೇರವಾಗಿ ಕೇಳಬಹುದಲ್ಲವೇ? ಎಂದರು.
ನಾನು 30 ವರ್ಷದಿಂದ ನಿಮ್ಮೊಂದಿಗೆ ಸಂಯಮದಿಂದ ನಡೆದುಕೊಂಡಿದ್ದೇನೆ. ನೀವು ಅಷ್ಟೇ ಗೌರವಿಸಿದ್ದೀರಿ. ಇದಕ್ಕೆ ನಾನು ಅಭಾರಿಯಾಗಿದ್ದೇನೆ. ವ್ಯಕ್ತಿಯ ವ್ಯಕ್ತಿತ್ವವನ್ನು ನಾಶ ಮಾಡುವುದು ಒಳ್ಳೆಯದಾಗಿ ಕಾಣಿಸುವುದಿಲ್ಲ, ಶೋಭೆ ತರುವುದಿಲ್ಲ ಎಂದರು.
ನಾನು ನನ್ನ ಶ್ರೀಮತಿಯವರು ಸೇರಿದಂತೆ ಯಾರ ಬಳಿಯೂ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ. ಖಾತೆ ಬದಲಾಯಿಸುವಂತೆ ಆಪ್ತರ ಬಳಿ ಹೇಳಿದರು, ಮುಖ್ಯಮಂತ್ರಿಯವರ ಬಳಿ ಕೇಳಿದರು. ಅವರು ಸುಮ್ಮನೆ ಇರಿ ಎಂದು ಎಂದೆಲ್ಲ ಸುದ್ದಿ ಮಾಡಲಾಗಿದೆ. ಇದನ್ನು ಯಾರು ಹೇಳಿದರು. ಸುದ್ದಿ ಮಾಡುವ ಮೊದಲೇ ಸ್ಪಷ್ಟನೆ ಪಡೆದುಕೊಳ್ಳಬೇಕಿತ್ತು ಎಂದು ಹೇಳಿದರು.
ನಮ್ಮನ್ನು ಅಭಿಮಾನಿಗಳು, ಜನ ಅನುಕರಿಸುವವರು ಇದ್ದಾರೆ. ಕ್ಷೇತ್ರದ ಮತದಾರರು ಏನೆಂದುಕೊಳ್ಳುತ್ತಾರೆ. ಮುಂದೆ ಈ ರೀತಿ ಊಹಾಪೋಹಾ ಸುದ್ದಿ ನಿಮ್ಮ ಕಿವಿಗೆ ಬಿದ್ದಾಗ ನನ್ನನ್ನು ಕೇಳಿ ಸ್ಪಷ್ಟಪಡಿಸಿಕೊಳ್ಳಬಹುದು ಎಂದರು.
ನಾನು ಯಾವತ್ತೂ ಇಂತಹ ಖಾತೆ ಬೇಕು ಎಂದು ಮುಖ್ಯಮಂತ್ರಿಯವರನ್ನು ಕೇಳಿಲ್ಲ. ಬೆಂಗಳೂರಿನಲ್ಲಿ ದುರದೃಷ್ಟಕರ ಘಟನೆ ನಡೆದಿದೆ. ಇಂತಹ ಘಟನೆಗಳಾಗಬಾರದು. ಈ ಘಟನೆಯಿಂದ ನಾವು ನೋವನ್ನು ಅನುಭವಿಸುತ್ತಿದ್ದೇವೆ. ಇಂತಹ ಸವಾಲುಗಳನ್ನು ಎದುರಿಸಬೇಕು. ಖಾತೆ ಬದಲಾಯಿಸುವಂತೆ ಮುಖ್ಯಮಂತ್ರಿಯವರು ಸೇರಿದಂತೆ ಯಾರ ಬಳಿಯೂ ಮಾತನಾಡೇ ಇಲ್ಲ. ಇದೆಲ್ಲ, ಸತ್ಯಕ್ಕೆ ದೂರವಾಗಿದ್ದು. ಈ ವಿಚಾರವನ್ನು ಯಾರು ಕೂಡ ಗಣನೆಗೆ ತೆಗೆದುಕೊಳ್ಳಬಾರದು ಎಂದು ಮನವಿ ಮಾಡಿದರು.
ಕಾಲ್ತುಳಿತ ಘಟನೆಯ ಬಗ್ಗೆ ನಾನು ಏನನ್ನು ಮಾತನಾಡುವುದಿಲ್ಲ. ಈ ಪ್ರಕರಣವನ್ನು ನಿವೃತ್ತ ನ್ಯಾಯಾದೀಶರಾದ ಮೈಕೆಲ್ ಡಿ.ಕುನ್ಹಾ ಅವರ ಏಕವ್ಯಕ್ತಿ ಆಯೋಗಕ್ಕೆ ವಹಿಸಿದ್ದೇವೆ. ಅವರು ತನಿಖೆ ಮಾಡಿ ವರದಿ ಕೊಡುತ್ತಾರೆ. ನಾವು ಹೇಳಿಕೆ ಕೊಟ್ಟರೆ ಬೇರೆ ರೀತಿಯ ಪರಿಣಾಮ ಬೀರುತ್ತದೆ. ತನಿಖೆ ವೇಳೆ ನಮ್ಮನ್ನು ಕೇಳಿದರೆ ಹೇಳುತ್ತೇವೆ. ಈಗ ಹೇಳಿಕೆ ನೀಡಿದರೆ ತನಿಖೆಯ ದಿಕ್ಕು ಬೇರೆ ಕಡೆ ಹೋಗುತ್ತದೆ ಎಂದರು.







