ಕಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯ; ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದೇನು?

ಬೆಂಗಳೂರು : ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿರುವ ಕೆಲ ಕೈದಿಗಳಿಗೆ ರಾಜಾತಿಥ್ಯ ನೀಡುತ್ತಿರುವುದು ಬೆಳಕಿಗೆ ಬಂದಿದ್ದು, ಇಂತಹ ಚಟುವಟಿಕೆಗಳು ನಾನ್‍ಸೆನ್ಸ್(ಅಸಂಬದ್ಧ) ಆಗಿವೆ. ಈ ಸಂಬಂಧ ತನಿಖೆ ನಡೆಸಲು ಒಂದು ಸಮಿತಿ ರಚಿಸಲು ಮುಂದಾಗಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಂಭೀರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದಡಿ ಜೈಲಿನಲ್ಲಿರುವ ಕೈದಿಗಳಿಗೆ ಹಲವು ರೀತಿಯಲ್ಲಿ ರಾಜಾತಿಥ್ಯ ನೀಡಲಾಗುತ್ತಿರುವುದು ಬೆಳಕಿಗೆ ಬಂದಿದೆ. ಈ ಕುರಿತು ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಈಗಾಗಲೇ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ವರದಿ ಸಲ್ಲಿಕೆಯಾದ ಬಳಿಕ ಉನ್ನತ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿಯೇ ಸಮಿತಿವೊಂದನ್ನು ರಚನೆ ಮಾಡಿ, ಇಂತಹ ಚಟುವಟಿಕೆಗಳಿಗೆ ಮತ್ತೆ ಆಗದಂತೆ ಎಚ್ಚರವಹಿಸಲಾಗುವುದು. ಹಾಗೇ ತಪ್ಪಿತಸ್ಥರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದರು.
ಮಂಗಳೂರು, ಬೆಳಗಾವಿ ಸೇರಿದಂತೆ ಬಹಳ ಕಡೆಯ ಜೈಲುಗಳಲ್ಲಿ ರಾಜಾತಿಥ್ಯ ನೀಡಿದ ಪ್ರಕರಣಗಳು ಬೆಳಕಿಗೆ ಬಂದ ಬೆನ್ನಲ್ಲೇ ಅಧಿಕಾರಿಗಳನ್ನು ಅಮಾನತು ಮಾಡಿ ಅವರ ವಿರುದ್ಧ ಕ್ರಮ ತೆಗೆದುಕೊಂಡಿದ್ದೇವೆ. ಆದರೆ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಪದೇ ಪದೇ ಪ್ರಕರಣಗಳು ಕೇಳಿಬಂದಿದೆ. ಇದಕ್ಕೆ ಕಠಿವಾಣ ಹಾಕಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜೈಲಿನಲ್ಲಿ ಮೊಬೈಲ್ ಮತ್ತಿತರ ಸೌಲಭ್ಯ ಯಾರಿಗೂ ಕೊಡುವ ಹಾಗಿಲ್ಲ. ಕಾರಾಗೃಹದಲ್ಲಿ ಸಿಬ್ಬಂದಿ ಕಡಿಮೆ ಇದ್ದಾರೆ ಎಂದು ನೆಪ ಹೇಳಿ ಯಾರನ್ನೂ ರಾಜಾತಿಥ್ಯ ನೀಡುವ ಕ್ರಮ ಸರಿಯಲ್ಲ. ಇಂತಹ ಪ್ರಕರಣಗಳನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದು ಪರಮೇಶ್ವರ್ ನುಡಿದರು.
ತಪ್ಪು ಮಾಡಿದವರ ಮೇಲೆ ಕ್ರಮ: ‘ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿನ ಕೈದಿಗಳಿಗೆ ಐಷಾರಾಮಿ ಸವಲತ್ತುಗಳನ್ನು ಕಲ್ಪಿಸಿರುವ ಸಂಬಂಧ ನಾಳೆ(ನ.10) ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಂಬಂಧಪಟ್ಟ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಕರೆದಿದ್ದಾರೆ. ತಪ್ಪು ಮಾಡಿದವರ ಮೇಲೆ ಗಂಭೀರ ಸ್ವರೂಪದ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಮುಂದೆ ಇಂತಹ ಕೃತ್ಯಗಳು ನಡೆಯದಂತೆ ಕ್ರಮ ವಹಿಸಲಾಗುವುದು’
-ಸಿದ್ಧರಾಮಯ್ಯ ಮುಖ್ಯಮಂತ್ರಿ
‘ಗೃಹ ಸಚಿವ ಡಾ.ಪರಮೇಶ್ವರ್ ಅವರೇ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೈದಿಗಳಿಗೆ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಟಿವಿ, ಮೊಬೈಲು, ಇಂಟರ್ನೆಟ್, ಐಟಂ ಸಾಂಗ್ ಸೇರಿ ಎಗ್ಗಿಲ್ಲದೆ ಮೋಜು-ಮಸ್ತಿ ಸರಬರಾಜಾಗುತ್ತಿದೆಯಲ್ಲ ಸ್ವಾಮಿ, ಇದರ ಬಗ್ಗೆ ತಮಗೇನಾದರೂ ಗೊತ್ತಿದೆಯೋ ಅಥವಾ ಎಂದಿನಂತೆ ‘ಗೊತ್ತಿಲ್ಲ’ ಎಂದು ಜಾರಿಕೊಳ್ಳುತ್ತೀರೋ?. ಈ ಅಭದ್ರ ಸರಕಾರದಲ್ಲಿ ಮುಖ್ಯಮಂತ್ರಿಗೆ ಮಂತ್ರಿಗಳ ಮೇಲೆ ಹಿಡಿತವಿಲ್ಲ. ಮಂತ್ರಿಗಳಿಗೆ ಅಧಿಕಾರಿಗಳ ಮೇಲೆ ಹಿಡಿತವಿಲ್ಲ. ಒಟ್ಟಿನಲ್ಲಿ ಯಾವ ಇಲಾಖೆಯೂ ನೆಟ್ಟಗಿಲ್ಲ’
-ಆರ್.ಅಶೋಕ್ ಪ್ರತಿಪಕ್ಷ ನಾಯಕ







