‘ಬೀದಿ ನಾಯಿಗಳಿಗೆ ಆಹಾರ’ ಯೋಜನೆ ಕೋವಿಡ್ ಸಮಯದಿಂದಲೇ ಆರಂಭ : ಸ್ಪಷ್ಟನೆ ನೀಡಿದ ಗ್ರೇಟರ್ ಬೆಂಗಳೂರು ಪ್ರಾಧಿಕಾರ

ಸಾಂದರ್ಭಿಕ ಚಿತ್ರ
ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವತಿಯಿಂದ ಬೀದಿ ನಾಯಿಗಳಿಗೆ ಆಹಾರ ನೀಡುವ ಸಲುವಾಗಿ ಟೆಂಡರ್ ಆಹ್ವಾನಿಸಲಾಗಿದ್ದು, ಬೀದಿ ನಾಯಿಗಳಿಗೆ ಆಹಾರ ನೀಡುವುದನ್ನು ಕೋವಿಡ್ ಸಮಯದಲ್ಲಿಯೇ ಕೈಗೆತ್ತಿಕೊಂಡಿತ್ತು. ಈ ವರ್ಷವೂ ಮುಂದುವರೆಸಲಾಗುತ್ತಿದೆ ಎಂದು ಪ್ರಾಧಿಕಾರವು ಸ್ಪಷ್ಟಪಡಿಸಿದೆ.
ರವಿವಾರ ಪ್ರಾಧಿಕಾರದ ಪಶುಪಾಲನಾ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಪ್ರಕಟನೆ ಹೊರಡಿಸಿದ್ದು, 2.7 ಲಕ್ಷ ನಾಯಿಗಳ ಪೈಕಿ ಆಹಾರ ಇಲ್ಲದೆ ಸೊರಗುವಂತಹ ಆಯ್ದ 4ಸಾವಿರ ನಾಯಿಗಳಿಗೆ ಮಾತ್ರ ಆಹಾರ ನೀಡಲು ಚಿಂತನೆ ನಡೆಸಲಾಗಿದೆ. ವಾರ್ಡ್ ಮಟ್ಟದಲ್ಲಿ ನಿರ್ದಿಷ್ಟ ಸ್ಥಳಗಳನ್ನು ಗುರುತುಪಡಿಸಿ ಆಹಾರವನ್ನು ನೀಡಲಾಗುತ್ತದೆ ಎಂದಿದ್ದಾರೆ.
ನಗರದಲ್ಲಿ ಈಗಾಗಲೇ ಶೇ.70ರಷ್ಟು ಸಂತಾನಹರಣ ಶಸ್ತ್ರಚಿಕಿತ್ಸೆಯ ಗುರಿಯನ್ನು ತಲುಪಿವೆ. ಆದರೆ ಕೆಲವು ವಾರ್ಡ್ ಗಳಲ್ಲಿ ನಾಯಿಗಳನ್ನು ಹಿಡಿಯುವಲ್ಲಿ ಅಥವಾ ಕಡಿತವನ್ನು ಕಡಿಮೆ ಮಾಡುವಲ್ಲಿ ಹೆಚ್ಚಿನ ಸವಾಲನ್ನು ಎದುರಿಸುತ್ತಿದ್ದೇವೆ. ಇಂತಹ ಪ್ರದೇಶಗಳಲ್ಲಿ ಬದಲಾವಣೆಯನ್ನು ತರಲು ನಾಯಿಗಳಿಗೆ ಆಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಯೋಜನೆ ಒಟ್ಟು ವೆಚ್ಚ 2.88 ಕೋಟಿ ರೂ.ಗಳಿದ್ದು, ಪ್ರತಿ ವಲಯದಲ್ಲಿ 100 ಆಹಾರ ಸ್ಥಳ, ಪ್ರತಿ ವಲಯದಲ್ಲಿಯೂ 500 ನಾಯಿಗಳಿಗೆ ದಿನಕ್ಕೆ ಒಂದು ಬಾರಿಯಂತೆ 365 ದಿನಗಳು ಆಹಾರ ನೀಡಲಾಗುತ್ತದೆ. ಈ ಲೆಕ್ಕಕ್ಕೆ ಪ್ರತಿ ನಾಯಿಗೆ ಪ್ರತಿದಿನ 19 ರೂ. ವೆಚ್ಚ ತಗಲುತ್ತದೆ. ದೈನಂದಿನ ಸಾರಿಗೆ, ಆಹಾರ ಪೂರೈಕೆ ಮತ್ತು ಸ್ಥಳ ಸ್ವಚ್ಛತೆಗೆ 8 ರೂ., ಆಹಾರಕ್ಕೆ 11 ರೂ. ಎಂದು ಖರ್ಚು ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನಾಯಿಗಳು ಮಾಂಸಾಹಾರಿ ಪ್ರಾಣಿಗಳಾಗಿದ್ದು, ಸಮತೋಲನ ಆಹಾರ ನೀಡುವ ನಿಟ್ಟಿನಲ್ಲಿ ಪ್ರೊಟೀನ್ ಅಂಶಕ್ಕಾಗಿ ಕೋಳಿಯ ಮಾಂಸವನ್ನು ಅಕ್ಕಿ ಮತ್ತು ತರಕಾರಿಗಳ ಜೊತೆ ಸೇರಿಸಿ ಬೇಯಿಸಿದ ಆಹಾರವನ್ನು ನೀಡಲಾಗುವುದು ಎಂದು ಸುರಳ್ಕರ್ ವಿಕಾಸ್ ಕಿಶೋರ್ ಹೇಳಿದ್ದಾರೆ.
ಟೆಂಡರ್ನಲ್ಲಿ ಆಹಾರದ ಅಂಗಾಂಶಗಳನ್ನು ಮಾತ್ರ ಪಟ್ಟಿ ಮಾಡಲಾಗಿದೆ. ‘ಬಿರಿಯಾನಿ’ ಎನ್ನುವಂತಹ ಯಾವುದೇ ಪದವಿಲ್ಲ. ಇದು ನಾಯಿಗಳಿಗೆ ಜೀರ್ಣಿಸಲು ಸರಿಯಾದ, ಸಮತೋಲನ ಆಹಾರವಾಗಿರುತ್ತದೆ. ತಜ್ಞ ಪಶುವೈದ್ಯರ ಸಲಹೆ ಮತ್ತು ಹಿಂದಿನ ವರ್ಷ ಪ್ರಾರಂಭಿಸಿದ ಪ್ರಾಯೋಗಿಕ ಯೋಜನೆಯ ಅನುಭವದ ಆಧಾರದಲ್ಲಿ ಆಹಾರ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.







