ಗ್ರೇಟರ್ ಬೆಂಗಳೂರು (2ನೇ ತಿದ್ದುಪಡಿ) ವಿಧೇಯಕ ಮಂಡನೆ

ಡಾ.ಎಚ್.ಸಿ.ಮಹದೇವಪ್ಪ
ಬೆಳಗಾವಿ (ಸುವರ್ಣ ವಿಧಾನಸೌಧ), ಡಿ.11: ಬೆಂಗಳೂರು ಗ್ರೇಟರ್ ಆಡಳಿತ (2ನೆ ತಿದ್ದುಪಡಿ) ವಿಧೇಯಕವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರವಾಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಗುರುವಾರ ವಿಧಾನಸಭೆಯಲ್ಲಿ ಮಂಡನೆ ಮಾಡಿದರು.
ಲೋಕಸಭೆ, ರಾಜ್ಯಸಭೆ ಸದಸ್ಯರು, ವಿಧಾನಸಭೆ, ಪರಿಷತ್ ಸದಸ್ಯರನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸದಸ್ಯರಾಗಿ ಸೇರ್ಪಡೆಗೊಳಿಸುವ ಹಾಗೂ ಕೆಲ ನಿಯಮಗಳಿಗೆ ತಿದ್ದುಪಡಿ ತರುವ ಉದ್ದೇಶದಿಂದ ಈ ವಿಧೇಯಕ ತರಲಾಗಿದೆ.
ವಿಧೇಯಕದಲ್ಲಿ ಏನಿದೆ? :
ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸದಸ್ಯರಾಗಿ ಲೋಕಸಭೆ, ರಾಜ್ಯಸಭೆ, ರಾಜ್ಯ ವಿಧಾನಸಭೆ ಮತ್ತು ರಾಜ್ಯ ವಿಧಾನಪರಿಷತ್ತಿನ ಸದಸ್ಯರುಗಳನ್ನು ಸೇರಿಸಲು ಈ ಮಸೂದೆಯಲ್ಲಿ ಅವಕಾಶ ನೀಡಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಪದನಿಮಿತ್ತ ಸದಸ್ಯರುಗಳನ್ನಾಗಿ ಸರಕಾರದ ಅಪರ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಮತ್ತು ಆರ್ಥಿಕ ಇಲಾಖೆಯ ಸರಕಾರದ ಅಪರ ಕಾರ್ಯದರ್ಶಿ/ಸರಕಾರದ ಪ್ರಧಾನ ಕಾರ್ಯದರ್ಶಿಯನ್ನು ಸೇರಿಸಲು, ಕಾರ್ಯಕಾರಿ ಸಮಿತಿಗೆ ಸದಸ್ಯರಾಗಿ ನಗರಾಭಿವೃದ್ಧಿ ಇಲಾಖೆಯ ಸರಕಾರದ ಅಪರ ಕಾರ್ಯದರ್ಶಿಯನ್ನು ಸೇರಿಸಲು ಈ ತಿದ್ದುಪಡಿಯಲ್ಲಿ ಪ್ರಸ್ತಾಪಿಸಲಾಗಿದೆ.
ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ ಸೇರಿದ ಸ್ಥಳೀಯ ಪ್ರದೇಶದಲ್ಲಿ ಸಾಮಾನ್ಯ ನಿವಾಸಿಯನ್ನು ಆ ಸ್ಥಳೀಯ ಪ್ರದೇಶಕ್ಕೆ ಚುನಾವಣೆ ನಡೆಸುವವರೆಗೆ ಪ್ರತಿ 20 ಸಾವಿರ ಜನಸಂಖ್ಯೆಗೆ ಕನಿಷ್ಟ ಒಬ್ಬ ವ್ಯಕ್ತಿಯಂತೆ ಆ ನಿರ್ದಿಷ್ಟ ನಗರ ಪಾಲಿಕೆಗೆ ಹೆಚ್ಚುವರಿ ಸದಸ್ಯನಾಗಿ ನಾಮನಿರ್ದೇಶಿಸಲು ಪ್ರಸ್ತಾಪಿಸಲಾಗಿದೆ. ನಾಮನಿರ್ದೇಶಿತ ವ್ಯಕ್ತಿಯು ನಗರ ಪಾಲಿಕೆಯಲ್ಲಿ ಮತದಾನ ಮಾಡುವ ಅಧಿಕಾರ ಹೊಂದಿಲ್ಲ ಎಂದೂ ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ.





