ಗೃಹಲಕ್ಷ್ಮೀ ಅನುಷ್ಠಾನದಲ್ಲಿ ಯಾವುದೇ ಲೋಪವಿಲ್ಲ: ಸರಕಾರ ಸ್ಪಷ್ಟನೆ

ಬೆಂಗಳೂರು : ‘ಗೃಹಲಕ್ಷ್ಮೀ’ ಯೋಜನೆ ಅನುಷ್ಠಾನ ವಿಷಯದಲ್ಲಿ ಕೇಳಿಬಂದ ಕೆಲವು ಆಕ್ಷೇಪಣೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಸ್ಪಷ್ಟನೆ ನೀಡಿದ್ದು, ಈ ಯೋಜನೆ ಅನುಷ್ಠಾನದಲ್ಲಿ ಯಾವುದೇ ಲೋಪವಿಲ್ಲ. ಸಾರ್ವಜನಿಕರು ಹಾಗೂ ಮಾಧ್ಯಮಗಳು ಯಾವುದೇ ತಪ್ಪು ಕಲ್ಪನೆಗಳಿಗೆ ಒಳಗಾಗಬಾರದು ಎಂದು ತಿಳಿಸಿದೆ.
ಗೃಹಲಕ್ಷ್ಮೀ ಯೋಜನೆಯಡಿ ಅನರ್ಹ ಹಾಗೂ ಮರಣ ಹೊಂದಿದ ಫಲಾನುಭವಿಗಳ ಖಾತೆಗೆ ಧನಸಹಾಯ ಪಾವತಿಯಾಗುತ್ತಿದೆ ಎಂಬ ಮಾಧ್ಯಮ ವರದಿಗಳು ಹಾಗೂ ಮಹಾಲೇಖಪಾಲರ ಲೆಕ್ಕ ತಪಾಸಣೆ ವರದಿಯ ಆಕ್ಷೇಪಣೆಗಳಿಗೆ ಸಂಬಂಧಿಸಿದಂತೆ ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಧಿಕೃತ ಸ್ಪಷ್ಟೀಕರಣದ ಪ್ರಕಟನೆ ಹೊರಡಿಸಿದೆ.
ರಾಜ್ಯದಲ್ಲಿ ಎಪ್ರಿಲ್-2026ರ ಅಂತ್ಯಕ್ಕೆ ಒಟ್ಟು 1,30,35,318 ಫಲಾನುಭವಿಗಳು (ಇತರೆ: 95,66,679, ಪರಿಶಿಷ್ಟ ಜಾತಿ: 24,95,604 ಮತ್ತು ಪರಿಶಿಷ್ಟ ಪಂಗಡ: 9,73,035) ಯಶಸ್ವಿಯಾಗಿ ನೋಂದಣಿ ಮಾಡಿಕೊಂಡಿದ್ದು, ಯಾವುದೇ ಮಧ್ಯವರ್ತಿಗಳಿಲ್ಲದೆ ನೇರ ನಗದು ವರ್ಗಾವಣೆ ಮೂಲಕ ಕುಟುಂಬದ ಯಜಮಾನಿಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2,000 ರೂ. ತಲುಪುತ್ತಿದೆ ಎಂದು ಇಲಾಖೆ ತಿಳಿಸಿದೆ.
ಸರಕಾರದ ಈ ಮಹತ್ವಾಕಾಂಕ್ಷಿ ಯೋಜನೆಯು ಸಂಪೂರ್ಣವಾಗಿ ನಿಯಮಾನುಸಾರ ಹಾಗೂ ಪಾರದರ್ಶಕವಾಗಿ ಅನುಷ್ಠಾನಗೊಳ್ಳುತ್ತಿದ್ದು, ಅರ್ಹ ಫಲಾನುಭವಿಗಳಿಗೆ ತೊಂದರೆಯಿಲ್ಲದೆ ಧನಸಹಾಯ ತಲುಪುತ್ತಿದೆ. ಆದಾಯ ತೆರಿಗೆ ಪಾವತಿದಾರರು ಮತ್ತು ಜಿಎಸ್‍ಟಿ ರಿಟನ್ರ್ಸ್ ಸಲ್ಲಿಸುವ ಒಟ್ಟು 1,94,560 ಮಹಿಳೆಯರನ್ನು ‘ಕುಟುಂಬ' ತಂತ್ರಾಂಶದಲ್ಲಿ ಲಭ್ಯವಾಗುವ ಮಾಹಿತಿಯ ಆಧಾರದ ಮೇಲೆ ಗುರುತಿಸಿ, ಪ್ರತಿ ತಿಂಗಳ ಧನಸಹಾಯ ಪಾವತಿಯಿಂದ ಹೊರತುಪಡಿಸಲಾಗುತ್ತಿದೆ ಎಂದು ಇಲಾಖೆ ಹೇಳಿದೆ
ಈ ಯೋಜನೆಯಡಿ ನೋಂದಾಯಿತರಾಗಿದ್ದ ಒಟ್ಟು 2,88,376 ಮಹಿಳೆಯರು ಮರಣ ಹೊಂದಿದ್ದಾರೆ. ಇ-ಜನ್ಮ/ ಕುಟುಂಬ ತಂತ್ರಾಂಶದ ಮಾಹಿತಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ಮೃತ ಫಲಾನುಭವಿಗಳ ಮಾಹಿತಿಯನ್ನು ಸಕಾಲದಲ್ಲಿ ಪಡೆದು ಅವರನ್ನು ಯೋಜನೆಯಿಂದ ಕೈಬಿಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಇಲಾಖೆ ತಿಳಿಸಿದೆ.
ಗೃಹಲಕ್ಷ್ಮೀ ಯೋಜನೆಯು ಆಧಾರ್ ಆಧಾರಿತ ಪಾವತಿ ವ್ಯವಸ್ಥೆ ಮೂಲಕ ಅನುಷ್ಠಾನಗೊಳ್ಳುತ್ತಿದೆ. ಇಲಾಖೆಯು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಭೌತಿಕವಾಗಿ ಕ್ಷೇತ್ರ ಭೇಟಿ ನಡೆಸಿ ಪರಿಶೀಲಿಸಿದಾಗ, ಜಂಟಿ ಖಾತೆಗಳನ್ನು ಹೊಂದಿರುವ ಫಲಾನುಭವಿಗಳ (ಉದಾ: ಅತ್ತೆ-ಸೊಸೆ, ತಾಯಿ-ಮಗಳು) ಪ್ರಕರಣಗಳಲ್ಲಿ ಮಾತ್ರ ಒಂದೇ ಖಾತೆಗೆ ಹಣ ಜಮೆಯಾಗಿರುವುದು ಕಂಡುಬಂದಿದೆ. ಇವರು ಬೇರೆ ಬೇರೆ ಪಡಿತರ ಚೀಟಿ ಹೊಂದಿರುವ ಅರ್ಹ ಫಲಾನುಭವಿಗಳಾಗಿದ್ದಾರೆ. ಇದಲ್ಲದೆ ಬ್ಯಾಂಕುಗಳ ತಾಂತ್ರಿಕ ದೋಷದಿಂದಲೂ ತಪ್ಪಾದ ಖಾತೆ ವಿವರಗಳು ಹಂಚಿಕೆಯಾಗಿರಬಹುದು ಎಂದು ಇಲಾಖೆ ಹೇಳಿದೆ.
ಫಲಾನುಭವಿಗಳು ತಮ್ಮ ಇಚ್ಛೆಯಂತೆ ಆಧಾರ್ ಜೋಡಣೆಯನ್ನು ಮತ್ತೊಂದು ಬ್ಯಾಂಕ್ ಖಾತೆಗೆ ಬದಲಾಯಿಸಿಕೊಳ್ಳಲು ಸಂಪೂರ್ಣ ಅವಕಾಶವಿರುವುದರಿಂದ, ಬೇರೆ ಬೇರೆ ತಿಂಗಳುಗಳಲ್ಲಿ ಬೇರೆ ಬೇರೆ ಖಾತೆಗಳಿಗೆ ಹಣ ಜಮೆಯಾಗಿರುವ ಸಾಧ್ಯತೆಯಿರುತ್ತದೆ. ಆದರೆ, ಯಾವುದೇ ಒಬ್ಬ ಫಲಾನುಭವಿಗೆ ಒಂದೇ ತಿಂಗಳಲ್ಲಿ ಒಂದಕ್ಕಿಂತ ಹೆಚ್ಚು ಖಾತೆಗಳಿಗೆ ಹಣ ಜಮೆಯಾಗಲು ಸಾಧ್ಯವಿಲ್ಲ ಎಂದು ಇಲಾಖೆ ತಿಳಿಸಿದೆ.
ಕೆಲವೊಮ್ಮೆ ಬ್ಯಾಂಕುಗಳ ತಾಂತ್ರಿಕ ಸಮಸ್ಯೆಯಿಂದ ಖಾತೆ ವಿವರಗಳಿಲ್ಲದ ಪ್ರತಿಕ್ರಿಯೆ ಕಡತ ಸೃಷ್ಟಿಯಾಗುತ್ತದೆ. ಇಲಾಖೆಯು ಇದನ್ನು ಪರಿಶೀಲಿಸಿದಾಗ, ಅಂತಹ ಖಾತೆಗಳಿಗೂ ಧನಸಹಾಯ ಜಮೆಯಾಗಿದ್ದು, ಮುಂದಿನ ತಿಂಗಳುಗಳಲ್ಲಿ ಬ್ಯಾಂಕುಗಳು ಸಂಪೂರ್ಣ ವಿವರಗಳನ್ನು ಒದಗಿಸಿರುವುದು ದೃಢಪಟ್ಟಿದೆ ಎಂದು ಇಲಾಖೆ ಹೇಳಿದೆ.
ಮರಣ ಹೊಂದಿದ ಫಲಾನುಭವಿಗಳ ಪೈಕಿ 1,03,922 ಕುಟುಂಬಗಳು ನಿಯಮಾನುಸಾರ ಪಡಿತರ ಚೀಟಿಯಲ್ಲಿ ಯಜಮಾನಿಯ ಹೆಸರನ್ನು ಬದಲಾಯಿಸಿಕೊಂಡು, ಮರು ನೋಂದಣಿ ಮಾಡಿಕೊಂಡು ಧನಸಹಾಯ ಪಡೆಯುತ್ತಿದ್ದಾರೆ. ಮರಣದ ಮಾಹಿತಿ ಸಕಾಲದಲ್ಲಿ ಲಭ್ಯವಾಗದ ಕಾರಣ 1,08,755 ಮೃತ ಫಲಾನುಭವಿಗಳ ಖಾತೆಗೆ ಪಾವತಿಯಾಗಿದ್ದ 115 ಕೋಟಿ ರೂ. ಧನಸಹಾಯ ಮೊತ್ತದಲ್ಲಿ, ಈಗಾಗಲೇ ವಿವಿಧ ಬ್ಯಾಂಕುಗಳೊಂದಿಗೆ ಸಭೆ ನಡೆಸಿ 15.24 ಕೋಟಿ ರೂ.ಗಳನ್ನು ಸರಕಾರದ ಖಾತೆಗೆ ಮರು ಭರಣ ಮಾಡಿಕೊಳ್ಳಲಾಗಿದ್ದು, ಬಾಕಿ ಮೊತ್ತದ ವಸೂಲಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಇಲಾಖೆ ವಿವರಿಸಿದೆ.






