ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬಕ್ಕೆ ರಾಜ್ಯ ಸರಕಾರವೇ ಕಾರಣ : ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ ಆರೋಪ

ಜಿ.ಎಸ್.ಸಂಗ್ರೇಶಿ
ಬೆಂಗಳೂರು: ಪುರಸಭೆ, ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬಕ್ಕೆ ರಾಜ್ಯ ಸರಕಾರವೇ ಕಾರಣ. ಕೋರ್ಟ್ ಆದೇಶ ನೀಡಿದ್ದರೂ ಮೀಸಲಾತಿ ನಿಗದಿಪಡಿಸಲು ಸರಕಾರ ಹಿಂದೇಟು ಹಾಕುತ್ತಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ ಆರೋಪಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ ವೇಳೆಗೆ ರಾಜ್ಯದ 187 ಸ್ಥಳೀಯ ಸಂಸ್ಥೆಗಳ ಅವಧಿ ಮುಗಿಯಲಿದೆ. ಮೀಸಲಾತಿ ನಿಗದಿ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆ ಹೈಕೋರ್ಟ್ ಆದೇಶ ಉಲ್ಲಂಘಿಸಿದೆ ಎಂದರು.
ಇದೇ ಪ್ರವೃತ್ತಿ ಮುಂದುವರಿಸಿದರೆ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಸರಕಾರದ ಮುಖ್ಯ ಕಾರ್ಯದರ್ಶಿಯವರನ್ನು ಕಾರಾಗೃಹಕ್ಕೆ ಕಳುಹಿಸಲು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ಇದೇ ವೇಳೆ ಎಚ್ಚರಿಸಿದರು.
ಚುನಾವಣೆ ನಡೆಸಲು ನಾವು ಸಿದ್ಧರಿದ್ದು, ಸ್ಥಳೀಯ ಸಂಸ್ಥೆ ಮೀಸಲಾತಿ ನಿಗದಿ ಮಾಡುವ ಅಧಿಕಾರ ನಮಗೇ ಕೊಟ್ಟರೆ, ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಸುತ್ತೇವೆ. ಚುನಾವಣೆ ನಡೆಸಲು ಮೀಸಲಾತಿ ನಿಗದಿ ಮಾಡುವಂತೆ ಕೋರಿ, ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದೇವೆ ಎಂದು ಅವರು ನುಡಿದರು.
‘ಕೇಂದ್ರ ಚುನಾವಣಾ ಆಯೋಗಕ್ಕಿರುವಷ್ಟು ಅಧಿಕಾರ, ರಾಜ್ಯ ಚುನಾವಣಾ ಆಯೋಗಕ್ಕೂ ಇದೆ. ನಮ್ಮದೂ ಸ್ವತಂತ್ರ ಸಂಸ್ಥೆ. ಸರಕಾರ ಅನುಮತಿ ನೀಡಿದರೆ, ನಾವೇ ಸ್ವತಂತ್ರವಾಗಿ ಮತದಾರರ ಪಟ್ಟಿ ತಯಾರಿಸಲು ಸಿದ್ಧರಿದ್ದೇವೆ ಎಂದು ಅವರು ತಿಳಿಸಿದರು.
‘ಜನವರಿ ಅಥವಾ ಫೆಬ್ರವರಿ ವೇಳೆ ಜಿಪಂ ಮತ್ತು ತಾಪಂಗಳಿಗೆ ಚುನಾವಣೆ ನಡೆಸಬೇಕಿದೆ. ಚುನಾವಣೆಯನ್ನು ಮತಪತ್ರಗಳ ಮೂಲಕ ನಡೆಸಲು ಸಿದ್ಧರಿದ್ದೇವೆ. ಗ್ರಾಪಂ ಚುನಾವಣೆಗಳಲ್ಲಿ ಮತಪತ್ರ ಬಳಸಲಾಗುತ್ತಿದೆ ಎಂದು ಸಂಗ್ರೇಶಿ ವಿವರಿಸಿದರು.







