ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ: ಎಚ್.ಡಿ. ದೇವೇಗೌಡ

ಎಚ್.ಡಿ.ದೇವೇಗೌಡ (File Photo: PTI)
ಬೆಂಗಳೂರು: ಕಲ್ಯಾಣ ಕರ್ನಾಟಕದ ನೆರೆಪೀಡಿತ ಜಿಲ್ಲೆಗಳಿಗೆ ಈವರೆಗೆ ಏನೆಲ್ಲಾ ಪರಿಹಾರ ಒದಗಿಸಲಾಗಿದೆ ಎಂಬ ಬಗ್ಗೆ 48 ಗಂಟೆಗಳಲ್ಲಿ ಜನತೆಗೆ ಸಮಗ್ರ ಮಾಹಿತಿ ನೀಡಿಬೇಕು ಎಂದು ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಎಚ್.ಡಿ. ದೇವೇಗೌಡ, ರಾಜ್ಯ ಸರಕಾರಕ್ಕೆ ಗಡುವು ನೀಡಿದ್ದಾರೆ.
ಶುಕ್ರವಾರ ಬೆಂಗಳೂರಿನ ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆರೆ ಪರಿಹಾರ ಕಾರ್ಯಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕು. ಪ್ರವಾಹದಿಂದ ಜನರು ಅತೀವ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂದಿನ 3-4 ದಿನಗಳಲ್ಲಿ ನಾನೂ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಈ ಸರಕಾರ ಏನೆಲ್ಲಾ ಪರಿಹಾರವನ್ನು ಒದಗಿಸಿದೆ ಎಂಬುದನ್ನು ಖುದ್ದು ನೋಡುತ್ತೇನೆ ಎಂದರು.
ಸಾಧ್ಯವಿರುವ ಕಡೆಗಳಿಗೆ ನಾನು ರಸ್ತೆಯ ಮೂಲಕವೇ ತೆರಳಿ ನೆರೆ ಸಂತ್ರಸ್ತರನ್ನು ಭೇಟಿ ಮಾಡುತ್ತೇನೆ. ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಕಣ್ಣಾರೆ ಕಂಡು ಅವರಿಂದ ಮಾಹಿತಿ ಪಡೆಯುತ್ತೇನೆ. ಆಗಿರುವ ನಷ್ಟದ ಬಗ್ಗೆ ವಿವರ ಪಡೆದು ಅದಕ್ಕೆ ತಕ್ಕಂತೆ ರಾಜ್ಯ ಸರಕಾರ ನೆರವಿಗೆ ಬಂದಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುತ್ತೇನೆ. ಬಳಿಕ ಸಮಗ್ರ ವರದಿ ಸಿದ್ಧಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸುತ್ತೇನೆ ಎಂದು ದೇವೇಗೌಡರು ಹೇಳಿದರು.
ನೆರೆ ವಿಷಯದಲ್ಲಿ ಯಾರೂ ರಾಜಕೀಯ ಮಾಡಬಾರದು. ಸರಕಾರ ಇದನ್ನು ತುರ್ತು ಆದ್ಯತೆ ಎಂದು ಪರಿಗಣಿಸಬೇಕು. ಆದರೆ, ಖಜಾನೆಯಲ್ಲಿ ಹಣವಿಲ್ಲ ಎಂದು ಶಾಸಕರೇ ಹೇಳುತ್ತಿರುವುದನ್ನು ಗಮನಿಸಿದ್ದೇನೆ. ಗ್ಯಾರಂಟಿ ಯೋಜನೆಗಳಿಗೆ ಹಣ ನೀಡುತ್ತಿರುವುದರಿಂದ ನೆರೆ ಪೀಡಿತ ಜಿಲ್ಲೆಗಳಿಗೆ ಮತ್ತು ಇನ್ನಿತರ ಬಾಬ್ತುಗಳಿಗೆ ಹಣವಿಲ್ಲ ಎಂದು ಅವರೇ ಹೇಳುತ್ತಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಉಂಟಾಗಿರುವ ತೀವ್ರ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಈ ಸರಕಾರದ ಬಳಿ ಹಣವಿಲ್ಲ ಎಂದು ದೇವೇಗೌಡರು ಟೀಕಿಸಿದರು.
ನೆರೆಯಿಂದಾಗಿ 50ಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದಾರೆ. ಅಪಾರ ಸಂಖ್ಯೆಯಷ್ಟು ಜಾನುವಾರುಗಳು ಸಾವನ್ನಪ್ಪಿವೆ. ದೊಡ್ಡ ಪ್ರಮಾಣದಲ್ಲಿ ಆಸ್ತಿ, ಬೆಳೆ ನಷ್ಟವಾಗಿದೆ. ಮೂಲಸೌಕರ್ಯಗಳಲ್ಲಿ ರಸ್ತೆಗಳು, ಸೇತುವೆಗಳು ಕುಸಿದಿವೆ. ಮನೆಗಳಿಗೆ ನೆರೆ ನೀರು ನುಗ್ಗಿ ಜನರು ನಿರ್ಗತಿಕರಾಗಿದ್ದಾರೆ ಎಂದು ದೇವೇಗೌಡರು ಕಳವಳ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಟಿ.ಎನ್.ಜವರಾಯಿಗೌಡ, ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್, ಮಾಜಿ ಶಾಸಕ ಎಚ್.ನಿಂಗಪ್ಪ, ಬೆಂಗಳೂರು ನಗರ ಜೆಡಿಎಸ್ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಕೆ.ಎನ್.ತಿಪ್ಪೇಸ್ವಾಮಿ, ಕೆ.ಟಿ.ಶ್ರೀಕಂಠೇಗೌಡ, ಚೌಡರೆಡ್ಡಿ ತೂಪಲ್ಲಿ ಮತ್ತಿತರರಿದ್ದರು.







