ಅತಿಥಿ ಉಪನ್ಯಾಸಕರ ನೇಮಕಕ್ಕೆ ಮಾರ್ಗಸೂಚಿ ಪ್ರಕಟ

ಸಾಂದರ್ಭಿಕ ಚಿತ್ರ
ಬೆಂಗಳೂರು, ಅ.2: ಕಾಲೇಜು ಶಿಕ್ಷಣ ಇಲಾಖೆಯು ಸರಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವ ಕುರಿತಾಗಿ ಮಾರ್ಗಸೂಚಿ ಪ್ರಕಟಿಸಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ 2024-25ನೆ ಸಾಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅತಿಥಿ ಉಪನ್ಯಾಸಕರನ್ನೇ 2025-26ನೇ ಸಾಲಿನಲ್ಲೂ ಕಾರ್ಯಭಾರ ಲಭ್ಯತೆಗೆ ಅನುಗುಣವಾಗಿ ಮುಂದುವರಿಸಿದೆ.
2024-25ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿ, ಬಿಡುಗಡೆ ಹೊಂದಿದ ಅತಿಥಿ ಉಪನ್ಯಾಸಕರು 2025-26ನೇ ಸಾಲಿಗೆ ಸಲ್ಲಿಸುವ ಅರ್ಜಿಯಲ್ಲಿನ ಸೇವಾ ಅವಧಿ ಮತ್ತಿತರೆ ವಿವರಗಳ ಆಧಾರದ ಮೇಲೆ ಸಿದ್ಧಪಡಿಸಿರುವ ಪಟ್ಟಿಯನ್ನು ವೆಬ್ಸೈಟ್ನಲ್ಲಿ ಇಲಾಖೆ ಪ್ರಕಟಿಸಿದೆ.
ಈ ಪಟ್ಟಿಯನ್ವಯ ಕಾಲೇಜುಗಳಲ್ಲಿ ಲಭ್ಯವಿರುವ ಕಾರ್ಯಭಾರಕ್ಕೆ ಅನುಸಾರವಾಗಿ ಅದೇ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸಿದ್ದ ಅತಿಥಿ ಉಪನ್ಯಾಸಕರನ್ನು ಸೆಮಿಸ್ಟರ್ ಪೂರ್ಣಗೊಳ್ಳುವವರೆಗೆ ಮಾತ್ರ ಮುಂದುವರಿಸಬೇಕು. ಉಪನ್ಯಾಸಕರನ್ನು ಮುಂದುವರಿಸಲು ಸಾಧ್ಯವಿಲ್ಲದಿದ್ದಲ್ಲಿ ಈಗಾಗಲೇ ತಿಳಿಸಿರುವ ಪಟ್ಟಿಯಲ್ಲಿ ಕೊನೆಯ ಅಭ್ಯರ್ಥಿಯನ್ನು ಕೈ ಬಿಡಬೇಕು. ಪ್ರಾಂಶುಪಾಲರು ಆಯಾ ಕಾಲೇಜುಗಳಲ್ಲಿ ಲಭ್ಯವಿರುವ ಕಾರ್ಯಭಾರಕ್ಕೆ ಅನುಗುಣವಾಗಿ ಅದೇ ಕಾಲೇಜಿನಲ್ಲಿ ಅ.4ರೊಳಗಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬೇಕು. ಕರ್ತವ್ಯಕ್ಕೆ ವರದಿ ಮಾಡಿಕೊಂಡ ಅತಿಥಿ ಉಪನ್ಯಾಸಕರ ಮಾಹಿತಿಯನ್ನು ಅ.4ರೊಳಗೆ ಇಲಾಖೆಯ ತಂತ್ರಾಂಶದಲ್ಲಿ ಅಪ್ಲೋಡ್ ಮಾಡಬೇಕು ಎಂದು ಹೇಳಿದೆ.
ಅ.4ರೊಳಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದಿರುವ ಅತಿಥಿ ಉಪನ್ಯಾಸಕರನ್ನು ಕೈ ಬಿಡಬೇಕು. ಅತಿಥಿ ಉಪನ್ಯಾಸಕರು ನೀಡಿರುವ ಮಾಹಿತಿ, ವಿವರಗಳನ್ವಯ ದಾಖಲಾತಿಗಳನ್ನು ಪ್ರಾಂಶುಪಾಲರು ಪರಿಶೀಲನೆ ಮಾಡಿ ಆನಂತರ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕು. ಇನ್ನು, ಕಾರ್ಯಭಾರ ಉಳಿಕೆಯಾದಲ್ಲಿ ಅಂತಹ ಕಾರ್ಯಭಾರಕ್ಕೆ ಕೋರ್ಟ್ ನೀಡಿರುವ ಆದೇಶದ ಅನುಸಾರ ಮೆರಿಟ್ ಆಧರಿಸಿ ಆನ್ಲೈನ್ ಮೂಲಕ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದೆ.







