ಭೂ ಸ್ವಾಧೀನ ವಿಚಾರದಲ್ಲಿ ರೈತರಿಗೆ ಅನ್ಯಾಯ ತಪ್ಪಿಸಲು ಮಾರ್ಗಸೂಚಿ ದರ ಪರಿಷ್ಕರಣೆ: ಸಚಿವ ಕೃಷ್ಣ ಬೈರೇಗೌಡ

ಕಂದಾಯ ಸಚಿವ ಕೃಷ್ಣ ಬೈರೇಗೌಡ (File Photo)
ಬೆಂಗಳೂರು: ಭೂ ಸ್ವಾಧೀನ ಪ್ರಕ್ರಿಯೆ ಪರಿಹಾರದ ವಿಚಾರದಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಲು ಕಾಲಕಾಲಕ್ಕೆ ಮಾರ್ಗಸೂಚಿ ದರ ಪರಿಷ್ಕರಣೆ ಮಾಡುವುದೊಂದೆ ಪರಿಹಾರವಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಕೆ.ಎಸ್.ನವೀನ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಭೂ ಸ್ವಾಧೀನಕ್ಕೆ ರೈತರಿಗೆ ಪರಿಹಾರ ನೀಡುವ ಸಂಬಂಧ 2013ರ ಕಾನೂನಿನಲ್ಲಿ ಸ್ಪಷ್ಟವಾಗಿದೆ. ಈ ಕಾನೂನಿನ ಪ್ರಕಾರ ಭೂ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ನಂತರ ಅಂತಹ ಭೂಮಿಗೆ ಹೊಸದಾಗಿ ಮಾರ್ಗಸೂಚಿ ದರವನ್ನು ಪರಿಷ್ಕರಿಸುವುದಿಲ್ಲ ಎಂದರು.
ಬದಲಾಗಿ ಹಿಂದಿನ ಮಾರ್ಗಸೂಚಿ ದರ ಅಥವಾ ಹಿಂದಿನ ಮೂರು ವರ್ಷದ ಮಾರುಕಟ್ಟೆಯ ನೋಂದಾಯಿತ ಸೇಲ್ ಡೀಡ್(ಮಾರಾಟ ಪತ್ರ) ದರವನ್ನು ಪರಿಗಣಿಸಲಾಗುತ್ತದೆ. ಆ ಪೈಕಿ ಭೂಮಿ ಹೆಚ್ಚಿನ ದರಕ್ಕೆ ವಹಿವಾಟು ಆಗಿರುವ ಆಧಾರದಲ್ಲಿ ಸರಾಸರಿ ಮೊತ್ತವನ್ನು ಪರಿಹಾರವಾಗಿ ನಿಗದಿಪಡಿಸಲಾಗುತ್ತದೆ ಎಂದು ಕೃಷ್ಣ ಬೈರೇಗೌಡ ವಿವರಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಕೆ.ಎಸ್.ನವೀನ್, ಹಳೆಯ ಮಾರ್ಗಸೂಚಿ ದರದ ಆಧಾರದಲ್ಲೇ ಪರಿಹಾರದ ಮೊತ್ತವನ್ನು ನಿಗದಿಪಡಿಸುವುದು ರೈತರಿಗೆ ಅನ್ಯಾಯ ಮಾಡಿದಂತೆ ಆಗುವುದಿಲ್ಲವೇ? ಎಂಬ ಮರುಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದ ಸಚಿವ ಕೃಷ್ಣ ಬೈರೇಗೌಡ, ಸರಕಾರ ಪ್ರತಿನಿತ್ಯ ಒಂದಲ್ಲಾ ಒಂದು ಕಾರಣಕ್ಕೆ ಭೂ ಸ್ವಾಧೀನ ಮಾಡುತ್ತಲೇ ಇರುತ್ತದೆ. ಕಾಲದಿಂದ ಕಾಲಕ್ಕೆ ದರ ಪರಿಷ್ಕರಣೆ ಮಾಡದಿದ್ದಲ್ಲಿ ರೈತರಿಗೆ ನಷ್ಟವಾಗುತ್ತದೆ ಎಂಬುದು ಸತ್ಯ. ಇದೇ ಕಾರಣಕ್ಕೆ ನಾವೂ ಸಹ ಮಾರ್ಗಸೂಚಿ ದರ ಪರಿಷ್ಕರಣೆ ಆಗಬೇಕು ಎನ್ನುತ್ತೇವೆ. ಆದರೆ, ಅದಕ್ಕೂ ವಿರೋಧ ವ್ಯಕ್ತಪಡಿಸುತ್ತಾರೆ ಎಂದು ವಿಷಾದಿಸಿದರು.
ಕೆಲವು ಕಡೆ ಮಾರ್ಗಸೂಚಿ ದರಕ್ಕೂ ಮಾರುಕಟ್ಟೆ ದರಕ್ಕೂ ಅಜಗಜಾಂತರ ವ್ಯತ್ಯಾಸಗಳಿವೆ. ಕೆಲವು ಕಡೆ ಭೂಮಿ ಮಾರ್ಗಸೂಚಿ ದರ 2 ಲಕ್ಷ ಇದ್ದರೆ, ಮಾರುಕಟ್ಟೆ ಮೌಲ್ಯ 70ರಿಂದ 80 ಲಕ್ಷ ಇದೆ. ಪರಿಣಾಮ ಕಪ್ಪು ಹಣದ ವಹಿವಾಟಿಗೂ ಇದು ಕಾರಣವಾಗಿದೆ. ಹೀಗಾಗಿ ಈ ಎಲ್ಲಾ ಅಕ್ರಮ ವಹಿವಾಟುಗಳನ್ನೂ ನಿಯಂತ್ರಿಸಿ ರೈತರಿಗೂ ನ್ಯಾಯಬದ್ಧ ಪರಿಹಾರ ನೀಡಲು ಕಾಲಕಾಲಕ್ಕೆ ಮಾರ್ಗಸೂಚಿ ದರ ಪರಿಷ್ಕರಣೆಯೊಂದೇ ಪರಿಹಾರ ಎಂದು ಕೃಷ್ಣ ಬೈರೇಗೌಡ ವಿವರಿಸಿದರು.






