ನನ್ನ 65 ವರ್ಷ ರಾಜಕೀಯ ಅನುಭವದಲ್ಲಿ ಇಂತಹ ಕೆಟ್ಟ ರಾಜ್ಯ ಸರಕಾರ ನೋಡಿರಲಿಲ್ಲ : ಎಚ್.ಡಿ.ದೇವೇಗೌಡ

ಬೆಂಗಳೂರು : ನನ್ನ ರಾಜಕೀಯ ಅನುಭವದ 65 ವರ್ಷದಲ್ಲಿ ಇಂತಹ ಕೆಟ್ಟ ರಾಜ್ಯ ಸರಕಾರ, ಆಡಳಿತ ನೋಡಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.
ಗುರುವಾರ ನಗರದ ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈಗಿರುವ ಆಡಳಿತ ವ್ಯವಸ್ಥೆ ಬಗ್ಗೆ ಮಾತನಾಡಲ್ಲ. 65 ವರ್ಷಗಳ ಅನುಭವದಲ್ಲಿ ಇಂತಹ ಕೆಟ್ಟ ಆಡಳಿತ ಕರ್ನಾಟಕದಲ್ಲಿ ನೋಡಿರಲಿಲ್ಲ. ಇಂತಹ ಕೆಟ್ಟ ಸ್ಥಿತಿ ರಾಜ್ಯದಲ್ಲಿ ನೋಡಿದ್ದೇವೆ. ಇದು ಸುಧಾರಣೆ ಆಗಬೇಕು ಅಂದರೆ ಜೆಡಿಎಸ್ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು.
ಇಂದು ಸಂವಿಧಾನ ದಿನ. ನಮ್ಮ ಸ್ಥಾಪಕ ಪಿತಾಮಹರ ಕೊಡುಗೆಗಳನ್ನು, ವಿಶೇಷವಾಗಿ ನಮ್ಮ ಸಂವಿಧಾನವನ್ನು ರೂಪಿಸುವ ಪ್ರಕ್ರಿಯೆಯನ್ನು ಮುನ್ನಡೆಸಿದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಕೊಡುಗೆಗಳನ್ನು ನಾವು ಸ್ಮರಿಸುತ್ತೇವೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯ ಎಸ್ಸಿ ಎಸ್ಟಿ ವಿಭಾಗದ ಅಧ್ಯಕ್ಷ ಡಾ.ಕೆ.ಅನ್ನದಾನಿ, ಕೋರ್ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾ ರೆಡ್ಡಿ ಮಾತನಾಡಿದರು. ಮಾಜಿ ಸಚಿವೆ ಲೀಲಾದೇವಿ ಪ್ರಸಾದ್, ಸಂಸದ ಎಂ.ಮಲ್ಲೇಶ್ ಬಾಬು, ಶಾಸಕರರಾದ ಸಿ.ಎನ್.ಬಾಲಕೃಷ್ಣ, ಎ.ಮಂಜು ಸೇರಿದಂತೆ ಪ್ರಮುಖರಿದ್ದರು.






