ಎಚ್. ಕಾಂತರಾಜು ವರದಿ ಸ್ವೀಕರಿಸದಿದ್ದರೆ, ಬೆಳಗಾವಿ ಸುವರ್ಣಸೌಧ ಮುತ್ತಿಗೆ: ಎಚ್ಚರಿಕೆ

ಬೆಂಗಳೂರು: ರಾಜ್ಯ ಸರಕಾರ ಎಚ್. ಕಾಂತರಾಜು ವರದಿಯನ್ನು ಬೆಳಗಾವಿ ಅಧಿವೇಶನ ಪ್ರಾರಂಭವಾಗುವ ಮೊದಲು ಸ್ವೀಕರಿಸದಿದ್ದರೆ, ಬೆಳಗಾವಿ ಸುವರ್ಣಸೌಧ ಮುತ್ತಿಗೆ ಹಾಕುವ ಹೊರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ತೀರ್ಮಾನಿಸಿದೆ.
ಶನಿವಾರ ಶಾಸಕರ ಭವನದಲ್ಲಿ ಆಯೋಜಿಸಿದ್ದ ಸಂಘಟನೆಯ ರಾಜ್ಯ ಮುಖಂಡರ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಹೆಚ್. ಕಾಂತರಾಜು ರವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾಜಿಕ, ಶೈಕ್ಷಣಿಕ, ವೈಜ್ಞಾನಿಕವಾಗಿ ಕೂಡಿರುವಂತಹ 55 ಅಂಶಗಳುಳ್ಳ ಜಾತಿವಾರು ಸಮೀಕ್ಷೆಯ ವರದಿಯನ್ನು ತಕ್ಷಣ ಸ್ವೀಕರಿಸಿ ಸಾರ್ವಜನಿಕ ಚರ್ಚೆಗೆ ಬಿಡಬೇಕು ಮತ್ತು ಯಾವುದೇ ಒತ್ತಡಕ್ಕೆ ಮಣಿಯದೆ ಉಭಯ ಸದನಗಳಲ್ಲಿ ಮಂಡಿಸಬೇಕು ಎಂದು ಒತ್ತಾಯಿಸಿದೆ.
ನಾಡಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತ, ಸಮುದಾಯ ಗಳನ್ನೊಳಗೊಂಡಂತೆ ಚಿತ್ರದುರ್ಗ ಅಥವಾ ದಾವಣಗೆರೆ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಸಮಾವೇಶವನ್ನು ಮಾಡಲು ನಿರ್ಣಯಿಸಲಾಯಿತು.





