ಪರಿಶಿಷ್ಟ ಜಾತಿ ಸಮೀಕ್ಷೆ ಅವಧಿ ವಿಸ್ತರಣೆ ಬೇಡ : ಮಾಜಿ ಸಚಿವ ಎಚ್.ಆಂಜನೇಯ

ಎಚ್.ಆಂಜನೇಯ
ಬೆಂಗಳೂರು : ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಕಾರ್ಯವು ಆಮೆ ನಡಿಗೆಯಲ್ಲಿ ಆರಂಭಗೊಂಡು, ಈಗ ಅತ್ಯಂತ ಚುರುಕು ಪಡೆದುಕೊಂಡಿದೆ. ಜೊತೆಗೆ ಬಹಳಷ್ಟು ಅವಕಾಶವನ್ನು ನ್ಯಾ.ಎಚ್.ಎನ್. ನಾಗಮೋಹನ್ ದಾಸ್ ಆಯೋಗವು ನೀಡಿದೆ. ಆದುದರಿಂದ, ಈ ಸಮೀಕ್ಷೆಯು ಜೂ.22ಕ್ಕೆ ಪೂರ್ಣಗೊಳ್ಳಬೇಕು. ಮತ್ತೊಮ್ಮೆ ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡಬಾರದು ಎಂದು ಮಾಜಿ ಸಚಿವ ಎಚ್.ಆಂಜನೇಯ ಒತ್ತಾಯಿಸಿದರು.
ಜಾತಿ ಗಣತಿ ಸಮೀಕ್ಷೆ ಕಾರ್ಯದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಜಾಗೃತಿ ಮೂಡಿಸಲು ಭಾರತೀಯ ಸೇವಾ ಸಮಿತಿಯು ಮಹದೇವಪುರ ವಿಧಾನಸಭಾ ಕ್ಷೇತ್ರದ ಹೂಡಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಯವರು ವಾಸಿಸುವ ಪ್ರದೇಶಗಳಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿಯವರು ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ತಮ್ಮ ಮೂಲ ಜಾತಿಗಳನ್ನು ಹೇಳಿಕೊಳ್ಳಲು ಯಾವುದೇ ಹಿಂಜರಿಕೆ ಬೇಡ. ಈ ಸಮೀಕ್ಷೆಯ ದತ್ತಾಂಶಗಳೇ ನಮಗೆ ಮೀಸಲಾತಿ ಪಡೆಯಲು ಇರುವ ಏಕೈಕ ಮಾರ್ಗ. ಕೀಳರಿಮೆ ತೊರೆಯದಿದ್ದರೆ ನಿಮಗೆ ಮೀಸಲಾತಿ ಸೌಲಭ್ಯ ದೊರೆಯುವುದಿಲ್ಲ. ಆದುದರಿಂದ, ಎಲ್ಲರೂ ಕಡ್ಡಾಯವಾಗಿ ಮೂಲ ಜಾತಿ ಮಾದಿಗ ಎಂದು ಕಾಲಂ ‘061’ರಲ್ಲಿ ಬರೆಸುವ ಮೂಲಕ ಒಳಮೀಸಲಾತಿಯಲ್ಲಿ ಹೆಚ್ಚು ಪಾಲು ಪಡೆಯಲು ಮುಂದಾಗಬೇಕು ಎಂದು ಆಂಜನೇಯ ಕರೆ ನೀಡಿದರು.
ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಮಾದಿಗರು ಸ್ವಾಭಿಮಾನದಿಂದ ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಆದರೆ, ನಗರ ಪ್ರದೇಶ ಅದರಲ್ಲೂ ಬೆಂಗಳೂರಿನಲ್ಲಿ ಸಾಮಾಜಿಕ ಕಾರಣಕ್ಕೆ ಜಾತಿ ಹೇಳಿಕೊಳ್ಳಲು ಹಿಂಜರಿದಿದ್ದು, ಸಮೀಕ್ಷೆ ಕಾರ್ಯಕ್ಕೆ ತೀವ್ರ ಹಿನ್ನಡೆ ಆಗಿದೆ. ಈ ಸತ್ಯ ಅರಿತು ಸರಕಾರ ಮತ್ತು ಆಯೋಗ ಮೂರು ಬಾರಿ ಸರ್ವೇ ಕಾರ್ಯ ದಿನಾಂಕವನ್ನು ವಿಸ್ತರಿಸಿದೆ. ಇದೇ ಅಂತಿಮ ಅವಕಾಶ, ಮತ್ತೊಮ್ಮೆ ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡುವುದಿಲ್ಲ ಎಂದು ಅವರು ತಿಳಿಸಿದರು.
ಆದುದರಿಂದ, ಸಮುದಾಯದ ಚಿಂತಕರು, ವಿವಿಧ ಸಂಘಟನೆಗಳ ಕಾರ್ಯಕರ್ತರು, ನೌಕರರು ಸಮಾಜದ ಋಣ ತೀರಿಸಲು ಜೊತೆಗೆ ನಮ್ಮ ಉಜ್ವಲ ಭವಿಷ್ಯಕ್ಕಾಗಿ ಸಮೀಕ್ಷೆ ಕಾರ್ಯ ಕುರಿತು ಸಮುದಾಯದವರಲ್ಲಿ ಜಾಗೃತಿ ಮೂಡಿಸಬೇಕು. ಜೊತೆಗೆ ಸಮೀಕ್ಷೆದಾರರ ಜೊತೆಗೆ ಮನೆ ಮನೆಗೆ ಹೋಗಿ ಮಾದಿಗ ‘061’ ಎಂದು ಬರೆಯಿಸಲು ಬದ್ಧತೆ ಪ್ರದರ್ಶಿಸಬೇಕು. ಈ ಮೂಲಕ ಯಾರೊಬ್ಬರೂ ಸಮೀಕ್ಷೆಯಿಂದ ಹೊರಗುಳಿಯದಂತೆ ಎಚ್ಚರವಹಿಸಬೇಕು ಎಂದು ಆಂಜನೇಯ ಹೇಳಿದರು.
ಈಗಾಗಲೇ ರಾಜ್ಯಾದ್ಯಂತ ಸುತ್ತಾಟ ನಡೆಸಿದ್ದೇನೆ, ಎಲ್ಲೆಡೆಯೂ ಜಾಗೃತಿ ಮೂಡಿಸಿದ್ದೇನೆ. ಜನರು ಹೆಚ್ಚು ಜಾಗೃತಗೊಂಡಿದ್ದಾರೆ. ಅದೇ ರೀತಿ ಬೆಂಗಳೂರು ಪ್ರದೇಶದಲ್ಲೂ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಸಂಘಟನೆಗಳ ಮುಖಂಡರು, ಚಿಂತಕರು, ನೌಕರರ ಜವಾಬ್ದಾರಿ ಹೆಚ್ಚು ಇದೆ. ಜೂ.22ರ ಬಳಿಕ ಯಾವುದೇ ಕಾರಣಕ್ಕೂ ಗಡುವು ವಿಸ್ತರಣೆ ಮಾಡಬಾರದು ಎಂದು ಆಯೋಗಕ್ಕೆ ಮನವಿ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಈಗಾಗಲೇ ಬಹಳಷ್ಟು ಅವಕಾಶ ನೀಡಲಾಗಿದೆ. ಈಗ ಏನಿದ್ದರೂ ಸಮೀಕ್ಷೆ ಅವಧಿ ಮುಗಿಯುತ್ತಿದ್ದಂತೆ ಆಯೋಗವು ಏಳೆಂಟು ದಿನಗಳಲ್ಲಿ ಪರಿಶಿಷ್ಟರಲ್ಲಿ ಯಾವ ಯಾವ ಸಮುದಾಯ ಭೂಮಿ, ಮನೆ, ಸರಕಾರಿ ನೌಕರಿ, ಶಿಕ್ಷಣ, ಆರ್ಥಿಕ ಪರಿಸ್ಥಿತಿಯ ದತ್ತಾಂಶ ಒಳಗೊಂಡ ವರದಿಯನ್ನು ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಬೇಕು. ಜೊತೆಗೆ ಅತ್ಯಂತ ಹಿಂದುಳಿದ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಅವರು ಮನವಿ ಮಾಡಿದರು.
ಸದಾಶಿವ ಆಯೋಗ, ಮಾಧುಸ್ವಾಮಿ ನೇತೃತ್ವದ ಸಮಿತಿಯ ವರದಿಯಲ್ಲಿ ಮಾದಿಗ ಸಮುದಾಯಕ್ಕೆ ಶೇ.6ರಷ್ಟು ಮೀಸಲಾತಿ ನೀಡಲಾಗಿತ್ತು. ನ್ಯಾ.ನಾಗಮೋಹನ್ ದಾಸ್ ಆಯೋಗವೂ ದತ್ತಾಂಶದ ಆಧಾರದಡಿಯಲ್ಲಿ ಇನ್ನಷ್ಟು ಹೆಚ್ಚು ಮೀಸಲಾತಿ ನೀಡುವ ವಿಶ್ವಾಸ ಇದೆ ಎಂದು ಆಂಜನೇಯ ಹೇಳಿದರು.
ಮುಖಂಡ ರಾಮಚಂದ್ರ ಚಿನ್ನಿ ನೇತೃತ್ವದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ವಿ.ವಿಕ್ರಮ್, ಕೃಷ್ಣಮೂರ್ತಿ, ನಾಗರಾಜ್, ಮಂಜುನಾಥ್, ಬಸವರಾಜ್, ಸತೀಶ್, ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಮುಖಂಡ ಕೇಶವಮೂರ್ತಿ, ಮಾದಿಗ ದಂಡೋರ ಸಮಿತಿಯ ಮುಖಂಡ ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.







