ಹನೂರು ಶೂಟೌಟ್ ಪ್ರಕರಣ: ವಿಧಾನಸಭೆಯಲ್ಲಿ ಪ್ರತಿಧ್ವನಿ, ಗದ್ದಲ

ಬೆಂಗಳೂರು : ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕಾವೇರಿ ವನ್ಯಧಾಮದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಪ್ರಕರಣ ವಿಚಾರವೂ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದು, ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ತೀವ್ರ ಗದ್ದಲ, ಕೋಲಾಹಲಕ್ಕೆ ಕಾರಣವಾಯಿತು.
ಸೋಮವಾರ ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷ ನಾಯಕ ಆರ್.ಅಶೋಕ್ ವಿಷಯ ಪ್ರಸ್ತಾಪಿಸಿ, ಅರಣ್ಯ ಇಲಾಖೆಯ ಶೂಟೌಟ್‍ನಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಈ ಕುರಿತು ರಾಜ್ಯ ಸರಕಾರ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದರು. ಇದಕ್ಕೆ ಪ್ರಶ್ನೋತ್ತರ ಕಲಾಪದ ನಂತರ ಮಾತನಾಡಿ, ಚರ್ಚೆಗೆ ನಿಲುವಳಿ ಕೊಡಿ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಲಹೆ ನೀಡಿದರು.
ಈ ವೇಳೆ ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಮಧ್ಯಪ್ರದೇಶಿಸಿ, ಸರಕಾರ ಘಟನೆ ಬಗ್ಗೆ ಸ್ವಯಂ ಪ್ರೇರಿತ ಹೇಳಿಕೆ ನೀಡಲಿದೆ ಎಂದುಕೊಂಡಿದ್ದೆವು. ಆದರೆ, ಸರಕಾರ ಹೇಳಿಕೆ ಕೊಡದ ಹಿನ್ನೆಲೆಯಲ್ಲಿ ನಾವು ಪ್ರಸ್ತಾಪ ಮಾಡಿದ್ದೇವೆ ಎಂದು ತಿರುಗೇಟು ನೀಡಿದರು. ಬಳಿಕ ಅಶೋಕ್, ‘ತಮಿಳುನಾಡು ಸಿಎಂ ಈ ಕುರಿತು ಮಾತಾಡಿದ್ದಾರೆ. ರಾಜ್ಯದಲ್ಲಿ ತಮಿಳು ಭಾಷಿಕರಿಗೆ ರಕ್ಷಣೆ ಇಲ್ಲ ಎಂದಿದ್ದಾರೆ. ಇದರ ಬಗ್ಗೆ ಚರ್ಚೆ ಆಗಬೇಕು’ ಎಂದು ಆಗ್ರಹಿಸಿದರು.
ಈ ಹಂತದಲ್ಲಿ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಸದನಕ್ಕೆ ಉತ್ತರ ನೀಡಿದರು. ಇದಕ್ಕೆ ಆರ್.ಅಶೋಕ್ ಆಕ್ಷೇಪಿಸುತ್ತಾ, ‘ನೀವು ಉತ್ತರ ಓದಿದ್ದು ಅರ್ಥ ಆಗಲಿಲ್ಲ. ಪ್ರಕರಣದ ಬಗ್ಗೆ ಜನರು ಸಾಕಷ್ಟು ಪ್ರಶ್ನೆ ಎತ್ತಿದ್ದಾರೆ. ಚಾಮರಾಜನಗರದಲ್ಲೇ ಜಿಲ್ಲಾಸ್ಪತ್ರೆ ಇದ್ದರೂ ಮೃತದೇಹಗಳನ್ನು ಮೈಸೂರಿಗೆ ಏಕೆ ರವಾನಿಸಲಾಯಿತು’ ಎಂದು ಪ್ರಶ್ನಿಸಿದರು.
ಇದಕ್ಕೆ ಸಿಟ್ಟಾದ ಸಚಿವ ಕೃಷ್ಣಬೈರೇಗೌಡ ಮಧ್ಯಪ್ರದೇಶಿಸಿ, ‘ಸಚಿವರು ಉತ್ತರ ಕೊಟ್ಟಿದ್ದಾರೆ. ಪ್ರಶ್ನೋತ್ತರ ಕಲಾಪಕ್ಕೆ ಅವಕಾಶ ಮಾಡಿಕೊಡಿ’ ಎಂದು ಮನವಿ ಮಾಡಿದರು. ಸುನಿಲ್ ಕುಮಾರ್ ಸೇರಿದಂತೆ ಬಿಜೆಪಿ ಸದಸ್ಯರು ಅದಕ್ಕೆ ಪ್ರತಿಕ್ರಿಯಿಸುತ್ತಾ, ‘ಮೂವರು ಸತ್ತು ಹೋಗಿದ್ದಾರೆ, ಆ ಮೇಲೆ ಪ್ರಶ್ನೋತ್ತರ ನಡೆಸಿ. ಸರಕಾರ ಮೂರು ಜನರನ್ನು ಸಾಯಿಸಿದೆ’ ಎಂದು ವಾಗ್ದಾಳಿ ನಡೆಸಿದರು. ಮತ್ತೆ ಕೃಷ್ಣ ಬೈರೇಗೌಡ, ‘ಬಿಜೆಪಿಯವರು ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ, ನಾಚಿಕೆ ಆಗಬೇಕು. ಅಲ್ಲಿ ಕುಟುಂಬದವರು ನೋವಿನಲ್ಲಿ ಇದ್ದರೆ, ಇಲ್ಲಿ ಇವರು ರಾಜಕೀಯ ಮಾಡುತ್ತಿದ್ದಾರೆ. ಬಿತ್ತನೆಬೀಜ ಹಾಗೂ ಗೊಬ್ಬರ ಕೇಳಿದ ರೈತರ ಮೇಲೆ ಗುಂಡು ಹಾರಿಸಿದವರು ನೀವು. ನಿಮ್ಮಿಂದ ಪಾಠ ಕಲಿಯಬೇಕಿಲ್ಲ’ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.
ಈ ವೇಳೆ, ‘ಎನ್‍ಕೌಂಟರ್ ಸರಕಾರಕ್ಕೆ ಧಿಕ್ಕಾರ' ಎಂದು ಸದನದಲ್ಲಿ ವಿಪಕ್ಷದವರು ಘೋಷಣೆ ಕೂಗಿದರು. ನೀವು ಎನ್‍ಕೌಂಟರ್ ಸ್ಪೆಷಲಿಸ್ಟ್. ಉತ್ತರ ಪ್ರದೇಶದಲ್ಲಿ, ಗುಜರಾತ್‍ನಲ್ಲಿ ಎನ್‍ಕೌಂಟರ್‍ಗಳು ನಡೆಸಿದ್ದೀರಾ? ಎಂದು ಆಡಳಿತ ಪಕ್ಷದವರು ತಿರುಗೇಟು ನೀಡಿದರು. ಈ ವೇಳೆ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ವಾಕ್ಸಮರ ನಡೆಯಿತು.
ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಮಧ್ಯಪ್ರವೇಶಿಸಿ, ಸ್ಪಷ್ಟೀಕರಣ ಕೇಳುವುದನ್ನು ಬಿಟ್ಟು ರಾಜಕೀಯ ಮಾಡಲು ಬಂದಿದ್ದೀರಾ? ಎಂದು ಪ್ರತಿಪಕ್ಷದ ಸದಸ್ಯರನ್ನು ಪ್ರಶ್ನಿಸಿದರು. ತಪ್ಪು ಮಾಡಿದರೆ ಶಿಕ್ಷೆಯಾಗಲಿದೆ. ಪ್ರಶ್ನೋತ್ತರ ಕಲಾಪವೂ ನಡೆಯಬೇಕಲ್ಲವೇ? ಎಂದು ಹೇಳಿದರು.
ಸಚಿವ ಪುಟ್ಟರಂಗಶೆಟ್ಟಿ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯಂದು ಬೆಳಗ್ಗೆ 11.15ಕ್ಕೆ ಘಟನೆ ಕುರಿತು ಮಾಹಿತಿ ಬಂದಿದೆ. ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಒಂದು ರೀತಿಯ ಹೇಳಿಕೆ ನೀಡಿದ್ದಾರೆ. ನ್ಯಾಯಾಂಗ ತನಿಖೆ ನಡೆದ ಬಳಿಕ ಸತ್ಯಾಂಶ ಹೊರಬರಲಿದೆ ಎಂದರು.
ಜೆಡಿಎಸ್ ಪಕ್ಷದ ನಾಯಕ ಸಿ.ಬಿ.ಸುರೇಶ್‍ಬಾಬು ಮಾತನಾಡಿ, ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದರೆ ಮಂಡಿಯ ಕೆಳಭಾಗಕ್ಕೆ ಗುಂಡು ಹಾರಿಸಬಹುದಿತ್ತು. ಆದರೆ ಹತ್ತಿರದಿಂದ ಗುಂಡು ಹಾರಿಸಲಾಗಿದೆ ಎಂದು ಆರೋಪಿಸಿದರು. ಗಾಯಾಳು ಮಹಿಮಾ ದಾಸ್ ಆಸ್ಪತ್ರೆಯಿಂದ ಎಲ್ಲಿಗೆ ಹೋದರು ಎಂಬುದು ತಿಳಿದಿಲ್ಲ. ಅರಣ್ಯ ಇಲಾಖೆಯವರೇ ಅವರನ್ನು ಬೇರೆಡೆ ಕರೆದೊಯ್ದಿರುವ ಅನುಮಾನವಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಬಂಡೆಯ ಮೇಲೆ ಮಲಗಿದ್ದವರ ಮೇಲೆ ಶೂಟೌಟ್ ಮಾಡಲಾಗಿದೆ ಎಂಬ ಆರೋಪವಿದೆ ಎಂದು ಹೇಳಿದರು.
ಬಿಜೆಪಿಯ ಅರಗ ಜ್ಞಾನೇಂದ್ರ ಮಾತನಾಡಿ, ಕಾಡಿನಲ್ಲಿ ಸಿಸಿ ಕ್ಯಾಮೆರಾಗಳಿವೆ. ಬಂದೂಕು ಹಿಡಿದು ಕಾಡಿಗೆ ಹೋಗಿದ್ದರೆ ಅವರನ್ನು ಪತ್ತೆಹಚ್ಚಬಹುದಿತ್ತು. ಮೂವರು ಮೃತಪಟ್ಟಿದ್ದರೆ ನಾಲ್ಕನೇ ವ್ಯಕ್ತಿ ಎಲ್ಲಿಗೆ ಹೋದರು ಎಂಬುದನ್ನು ಪತ್ತೆಹಚ್ಚಬೇಕು. ಮಲಗಿದ್ದವರನ್ನು ಎತ್ತಿಕೊಂಡು ಹೋಗಿ ಶೂಟೌಟ್ ಮಾಡಲಾಗಿದೆ ಎಂಬ ಆರೋಪವಿದೆ. ಸರಕಾರ ಜನರ ಕ್ಷಮೆ ಕೇಳಬೇಕು, ಸೂಕ್ತ ಪರಿಹಾರ ನೀಡಬೇಕು ಹಾಗೂ ಎನ್‍ಕೌಂಟರ್ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಸದಸ್ಯ ಬಿ.ವೈ.ವಿಜಯೇಂದ್ರ ಮಾತನಾಡಿ, ‘ಕಾಡಂಚಿನ ಜನರು ಮತ್ತು ಅರಣ್ಯ ಅಧಿಕಾರಿಗಳ ನಡುವೆ ಸಂಘರ್ಷ ನಡೆಯುತ್ತಿರುತ್ತದೆ. ಹನೂರು ಎನ್‍ಕೌಂಟರ್ ಘಟನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹೀಗಾಗಿ ನ್ಯಾಯಾಂಗ ತನಿಖೆ ನಡೆಸಬೇಕು, ಎನ್‍ಕೌಂಟರ್ ನಡೆಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಮೃತರ ಕುಟುಂಬಗಳಿಗೆ ಪರಿಹಾರ ನೀಡಬೇಕು’ ಎಂದರು.
ಜೆಡಿಎಸ್‍ನ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಯಾವ ಆಧಾರದ ಮೇಲೆ ಅವರನ್ನು ಕಾಡುಗಳ್ಳರು ಎಂದು ಕರೆಯಲಾಗುತ್ತಿದೆ? 34 ಕೆಜಿ ಮಾಂಸ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಪ್ರಾಣಿಗಳ ಚರ್ಮ ಎಲ್ಲಿದೆ? ಇದು ಸತ್ಯವಲ್ಲ ಎಂದು ಆರೋಪಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಾಧ್ಯವಾಗಿದ್ದರೆ ಅವರನ್ನು ಜೀವಂತವಾಗಿ ಬಂಧಿಸಬೇಕಿತ್ತು. ಮೃತಪಟ್ಟವರು ರೈತರು. ರಾಜಕೀಯ ಮಾಡಲು ನಮ್ಮ ಕ್ಷೇತ್ರಗಳಿವೆ ಎಂದು ಹೇಳಿದರು.
ಇದಕ್ಕೆ ಉತ್ತರ ನೀಡಿದ ಸಚಿವ ರಾಮಲಿಂಗಾರೆಡ್ಡಿ, ವನ್ಯಜೀವಿ ಹಾಗೂ ಅರಣ್ಯ ಸಂರಕ್ಷಣೆಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಠಿಣ ಕಾನೂನುಗಳನ್ನು ಜಾರಿಗೆ ತಂದಿವೆ. ಕಳೆದ 16 ವರ್ಷಗಳಲ್ಲಿ 278 ಕಳ್ಳಬೇಟೆ ಪ್ರಕರಣಗಳು ಪತ್ತೆಯಾಗಿವೆ. ಬೆಳಗಿನ ಜಾವ 5.10ರ ಸುಮಾರಿಗೆ ಕಾಡಿನಲ್ಲಿ ಕತ್ತಲೆ ಇರುತ್ತದೆ. ಸ್ಲೈಡ್ ಆಕ್ಷನ್ ಗನ್‍ನಿಂದ ಮೂರು ಸುತ್ತು ಗುಂಡು ಹಾರಿಸಲಾಗಿದ್ದು, ಗುಂಡುಗಳು ದೇಹದ ವಿವಿಧ ಭಾಗಗಳಿಗೆ ತಗುಲಿವೆ ಎಂದು ವಿವರಿಸಿದರು.
ಮೃತರ ಸಂಬಂಧಿಕರು ನೀಡಿದ ದೂರಿನ ಆಧಾರದ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಅರಣ್ಯ ಕಾಯ್ದೆಯಡಿ ಮೃತರ ವಿರುದ್ಧವೂ ಪ್ರಕರಣ ದಾಖಲಾಗಿದೆ. 34 ಕೆಜಿ ಮಾಂಸ ಪತ್ತೆಯಾಗಿದ್ದು, ಪ್ರಾಣಿಗಳ ಚರ್ಮವನ್ನು ಬಿಸಾಡಿರಬಹುದು. ಆತ್ಮರಕ್ಷಣೆಗಾಗಿ ಗುಂಡು ಹಾರಿಸಲಾಗಿದೆ. ಗಾಯಗೊಂಡಿದ್ದ ಮಹೀಂ ದಾಸ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಸಚಿವರು ತಿಳಿಸಿದರು.
ಬಳಿಕ ಆರ್.ಅಶೋಕ್ ಪ್ರಸ್ತಾಪಿಸಿ, ನಾಲ್ಕು ಜನರ ಮೇಲೆ ಗುಂಡು ಹಾರಿಸಲಾಗಿದೆ. ನಾಲ್ಕನೇ ವ್ಯಕ್ತಿ ಮೈಸೂರು ಆಸ್ಪತ್ರೆಯಿಂದ ಕಾಣೆಯಾಗುತ್ತಾನೆ. ಯಾಕೆ? ಅವನು ಸತ್ಯ ಹೇಳುತ್ತಾನೆ ಎಂದೇ? ರೈತರೇಕೆ ಹೋರಾಟ ಮಾಡುತ್ತಿದ್ದಾರೆ?. ಕಾಡುಗಳ್ಳ ಆಗಿದ್ದರೆ 5 ಸಾವಿರ ರೈತರೇಕೆ ಹೋರಾಟ ಮಾಡುತ್ತಾರೆ? ಅದಕ್ಕೆ ಉತ್ತರ ಕೊಡಿ ಎಂದು ಪಟ್ಟು ಹಿಡಿದರು.
ಆತ್ಮರಕ್ಷಣೆ ಮಾಡಿಕೊಳ್ಳಲು ಸಿಬ್ಬಂದಿಗೆ ಅವಕಾಶ ಇದೆ. ಜನರ ಆತ್ಮರಕ್ಷಣೆ ಮಾಡುವುದು ಅಧಿಕಾರಿಗಳ ಕರ್ತವ್ಯ. ಗುಂಡನ್ನು ಕಾಲಿಗೆ ಹಾರಿಸಬೇಕಾಗಿತ್ತು. ಆದರೆ, ಎದೆಗೆ ಏಕೆ ಗುಂಡೇಟು ಹೊಡೆಯಲಾಗಿದೆ? ಎಂದು ಪ್ರಶ್ನಿಸಿ ಮೃತರ ಕುಟುಂಬಗಳಿಗೆ ತಲಾ ಒಂದು ಕೋಟಿ ರೂ. ಪರಿಹಾರ ನೀಡಬೇಕು. ಮ್ಯಾಜಿಸ್ಟ್ರೇಟ್ ತನಿಖೆಯ ಬದಲಿಗೆ ನ್ಯಾಯಾಂಗ ತನಿಖೆ ನಡೆಸಬೇಕು. ಘಟನೆಯ ನೈತಿಕ ಹೊಣೆ ಹೊತ್ತು ರಾಮಲಿಂಗಾರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.






