ಹನೂರು ಶೂಟೌಟ್ ಪ್ರಕರಣ; ನ್ಯಾಯಾಂಗ ತನಿಖೆಗೆ ಆರ್ಚ್‍ಬಿಷಪ್ ಡಾ.ಪೀಟರ್ ಮಚಾದೊ ಆಗ್ರಹ

ಬೆಂಗಳೂರು : ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಚಿಕ್ಕಲ್ಲೂರು ಮೀಸಲು ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಕ್ರೈಸ್ತ ಸಮುದಾಯ ತೀವ್ರ ಆಘಾತ ಹಾಗೂ ಕಳವಳ ವ್ಯಕ್ತಪಡಿಸಿದ್ದು, ಈ ಘಟನೆಯ ಕುರಿತು ಸ್ವತಂತ್ರ ಹಾಗೂ ಪಾರದರ್ಶಕ ನ್ಯಾಯಾಂಗ ತನಿಖೆ ನಡೆಸಬೇಕೆಂದು ಬೆಂಗಳೂರು ಆರ್ಚ್‍ಬಿಷಪ್ ಡಾ.ಪೀಟರ್ ಮಚಾದೊ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
ಮೃತರನ್ನು ಹನೂರು ತಾಲೂಕಿನ ನಿವಾಸಿಗಳಾದ ಅಂತೋಣಿ ಸ್ವಾಮಿ (50), ಜಾನ್ ರೋಸ್ ಪೀಟರ್ (42) ಹಾಗೂ ಅಂತೋಣಿ ಕುಮಾರ್ (33) ಎಂದು ಗುರುತಿಸಲಾಗಿದೆ. ಕಾವೇರಿ ವನ್ಯಜೀವಿ ವಿಭಾಗದ ವ್ಯಾಪ್ತಿಯ ಚಿಕ್ಕಲ್ಲೂರು ಮೀಸಲು ಅರಣ್ಯ ಪ್ರದೇಶದಲ್ಲಿ ಶನಿವಾರ ಮುಂಜಾನೆ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಅಕ್ರಮ ಪ್ರವೇಶ, ಬೇಟೆ ಅಥವಾ ಯಾವುದೇ ಕಾನೂನುಬಾಹಿರ ಚಟುವಟಿಕೆಯನ್ನು ಕ್ರೈಸ್ತ ಸಮುದಾಯ ಸಮರ್ಥಿಸುವುದಿಲ್ಲ. ಆದರೆ ಇಂತಹ ಆರೋಪಗಳು ಮಾತ್ರ ಯಾರ ಮೇಲಾದರೂ ಮಾರಣಾಂತಿಕ ಬಲಪ್ರಯೋಗ ನಡೆಸಲು ಕಾರಣವಾಗಲು ಸಾಧ್ಯವಿಲ್ಲ. ಕಾನೂನು ಜಾರಿ ಅಥವಾ ಅರಣ್ಯ ಇಲಾಖೆ ಸಿಬ್ಬಂದಿ ಶಸ್ತ್ರಾಸ್ತ್ರ ಬಳಸುವ ಸಂದರ್ಭದಲ್ಲಿ ಅದು ಅತ್ಯಂತ ಅಗತ್ಯ, ಪ್ರಮಾಣಬದ್ಧ ಮತ್ತು ಕಾನೂನುಬದ್ಧವಾಗಿರಬೇಕು ಎಂದು ಅವರು ಹೇಳಿದ್ದಾರೆ.
ಮೂವರ ಸಾವಿನ ಸುತ್ತ ಹಲವು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ. ಅರಣ್ಯ ಇಲಾಖೆ ಸಿಬ್ಬಂದಿಯ ಜೀವಕ್ಕೆ ತಕ್ಷಣದ ಮತ್ತು ನಂಬಬಹುದಾದ ಅಪಾಯವಿತ್ತೇ? ಮಾರಣಾಂತಿಕ ಬಲಪ್ರಯೋಗ ಅನಿವಾರ್ಯವಾಗಿತ್ತೇ? ಎಂಬ ಪ್ರಶ್ನೆಗಳಿಗೆ ಸ್ವತಂತ್ರ ತನಿಖೆಯ ಮೂಲಕ ಉತ್ತರ ದೊರೆಯಬೇಕು ಎಂದು ಕ್ರೈಸ್ತ ಸಮುದಾಯದ ಪರವಾಗಿ ಆರ್ಚ್ ಬಿಷಪ್ ಒತ್ತಾಯಿಸಿದ್ದಾರೆ.
ಹನೂರು ಪೊಲೀಸ್ ಠಾಣೆಯಲ್ಲಿ ಮೃತ ಅಂತೋಣಿ ಅವರ ಪತ್ನಿ ಲೂರ್ದು ಮೇರಿ ನೀಡಿದ ದೂರಿನ ಆಧಾರದ ಮೇಲೆ ಎಫ್‍ಐಆರ್ ದಾಖಲಿಸಲಾಗಿದ್ದು, ಕೊಲೆ ಪ್ರಕರಣ ದಾಖಲಾಗಿದೆ. ಆದರೆ ಅರಣ್ಯ ಇಲಾಖೆ ಸಿಬ್ಬಂದಿಯಲ್ಲಿ ಯಾರನ್ನೂ ಆರೋಪಿಗಳಾಗಿ ಹೆಸರಿಸಲಾಗಿಲ್ಲ ಎಂಬುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ ಎಂದು ಕ್ರೈಸ್ತ ಸಮುದಾಯ ತಿಳಿಸಿದೆ. ಘಟನೆಯಲ್ಲಿ ಭಾಗಿಯಾಗಿರುವ ಎಲ್ಲಾ ಸಿಬ್ಬಂದಿಯ ಪಾತ್ರವನ್ನು ಸಮಗ್ರವಾಗಿ ಪರಿಶೀಲಿಸುವ ಅಗತ್ಯವಿದೆ ಎಂದು ಅವರು ಆಗ್ರಹಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸತ್ಯಾಂಶವನ್ನು ಹೊರತಂದು, ಹೊಣೆಗಾರಿಕೆಯನ್ನು ನಿಗದಿಪಡಿಸಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‍ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸಬೇಕು. ಅಲ್ಲದೆ, ಮೃತಪಟ್ಟವರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವುದರ ಜೊತೆಗೆ, ಪ್ರತಿ ಕುಟುಂಬದ ಅರ್ಹ ಸದಸ್ಯರಿಗೆ ಸರಕಾರಿ ಉದ್ಯೋಗ ಕಲ್ಪಿಸಿ ತಕ್ಷಣದ ಮಾನವೀಯ ನೆರವು ಒದಗಿಸಬೇಕು ಎಂದು ಪೀಟರ್ ಮಚಾದೊ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.






