'ಹರ್ ಘರ್ ತಿರಂಗಾ’ ಅಭಿಯಾನವನ್ನು RSS ಕೇಂದ್ರ ಕಚೇರಿಯಿಂದಲೇ ಆರಂಭಿಸಿ : ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹ

ಪ್ರಿಯಾಂಕ್ ಖರ್ಗೆ | Photo Credit : PTI
ಬೆಂಗಳೂರು: ಪ್ರತಿಯೊಬ್ಬ ಭಾರತೀಯನಿಗೂ ದೇಶಭಕ್ತಿಯ ಪಾಠ ಮಾಡುವ ಮೊದಲು, ಬಿಜೆಪಿಯು ತನ್ನ ಮಾತೃ ಸಂಸ್ಥೆಯಾದ RSS ತ್ರಿವರ್ಣ ಧ್ವಜದ ಬದಲಿಗೆ ಭಗವಾ ಧ್ವಜವನ್ನು ಏಕೆ ಆಯ್ಕೆ ಮಾಡಿಕೊಂಡಿತು ಎಂಬುದನ್ನು ಮೊದಲು ವಿವರಿಸಬೇಕು ಎಂದು ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
ಬಿಜೆಪಿಯ 'ಹರ್ ಘರ್ ತಿರಂಗಾ' ಅಭಿಯಾನದ ವಿರುದ್ಧ ಗುರುವಾರ ಹೊಸ ವಾಗ್ದಾಳಿ ನಡೆಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಈ ಅಭಿಯಾನವು ನಾಗ್ಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ ಎಸ್ ಎಸ್ ) ಕೇಂದ್ರ ಕಚೇರಿಯಿಂದ ಪ್ರಾರಂಭವಾಗಬೇಕು ಎಂದು ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, "ಸ್ವಾತಂತ್ರ್ಯದ ನಂತರ ಐದು ದಶಕಗಳಿಗೂ ಹೆಚ್ಚು ಕಾಲ, RSS ತನ್ನ ನಾಗ್ಪುರ ಪ್ರಧಾನ ಕಚೇರಿಯಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹಾರಿಸಿರಲಿಲ್ಲ. 2002ರಲ್ಲಿ ಮಾತ್ರ ಅಧಿಕೃತವಾಗಿ ತ್ರಿವರ್ಣ ಧ್ವಜವನ್ನು ಅಲ್ಲಿ ಹಾರಿಸಲಾಯಿತು" ಎಂದು ವಿವರಿಸಿದರು.
ಬಿಜೆಪಿಯ ದೇಶಭಕ್ತಿಯ ವಿರೋಧಾಭಾಸವನ್ನು ಪ್ರಶ್ನಿಸಿದ ಅವರು, "ಅದರ ಮಾತೃ ಸಂಸ್ಥೆಯಾದ RSS ತ್ರಿವರ್ಣ ಧ್ವಜದ ಬದಲಿಗೆ ಭಗವಾ ಧ್ವಜವನ್ನು ಏಕೆ ಆಯ್ಕೆ ಮಾಡಿಕೊಂಡಿತು? ಅಲ್ಲದೆ, RSS ಪಥಸಂಚಲನಗಳಲ್ಲಿ ಸ್ವಯಂಸೇವಕರು ಭಾರತದ ತ್ರಿವರ್ಣ ಧ್ವಜವನ್ನು ಹೊತ್ತೊಯ್ಯುವುದನ್ನು ಯಾರಾದರೂ ನೋಡಿದ್ದಾರೆಯೇ?" ಎಂದು ಕೇಳಿದ್ದಾರೆ.
“ಆದರೆ ಈ ಬಿಜೆಪಿಯವರು ಎಲ್ಲರಿಗೂ ದೇಶಭಕ್ತ ಪ್ರಮಾಣಪತ್ರಗಳನ್ನು ನೀಡುತ್ತಾ ತಿರುಗಾಡುತ್ತಾರೆ” ಎಂದು ತಮ್ಮ ಪೋಸ್ಟ್ನಲ್ಲಿ ಟೀಕಿಸಿದ್ದಾರೆ.
ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 'ಹರ್ ಘರ್ ತಿರಂಗಾ' ಅಭಿಯಾನಕ್ಕೆ ಕರೆ ನೀಡಿದ್ದರು. "ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ನಮನ ಸಲ್ಲಿಸೋಣ. ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಪ್ರತಿಜ್ಞೆ ಮಾಡೋಣ. ಹರ್ ಘರ್ ತಿರಂಗಾ, ಘರ್ ಘರ್ ತಿರಂಗಾ, ಹರ್ ಮನ್ ತಿರಂಗಾ (ಪ್ರತಿ ಮನೆಯಲ್ಲೂ ತ್ರಿವರ್ಣ, ಪ್ರತಿ ಮನದಲ್ಲೂ ತ್ರಿವರ್ಣ). ಬನ್ನಿ, ನಾವೆಲ್ಲರೂ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸೋಣ" ಎಂದು ಅವರು ಹೇಳಿದ್ದರು.






