ʼದ್ವೇಷ ಭಾಷಣ ಮಸೂದೆʼ ನೆನೆಗುದಿಗೆ ಬೀಳಿಸಲು ರಾಷ್ಟ್ರಪತಿಗೆ ವರ್ಗಾವಣೆ : ಗೃಹ ಸಚಿವ ಜಿ.ಪರಮೇಶ್ವರ್

ಜಿ.ಪರಮೇಶ್ವರ್
ಬೆಂಗಳೂರು : ದ್ವೇಷ ಭಾಷಣ ಮಸೂದೆಯಲ್ಲಿನ 28 ಅಂಶಗಳನ್ನು ರಾಜ್ಯಪಾಲರು ಪ್ರಶ್ನಿಸಿದ್ದಾರೆ. ಅದನ್ನು ರಾಷ್ಟ್ರಪತಿಗಳಿಗೆ ಕಳಿಸಿದ್ದಾರೆ. ಮುಂದೆ ಏನಾಗುತ್ತದೆ ನೋಡೋಣ. ರಾಷ್ಟ್ರಪತಿಗಳು ಪರಿಶೀಲಿಸಿ ವಾಪಸ್ ಕೊಟ್ಟರೆ, ಬದಲಾವಣೆ ಮಾಡಿ ಕಳಿಸಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದು ಏನು ಬೇಕಾದರೂ ಮಾತನಾಡಿದರೆ, ಅದರ ಪರಿಣಾಮ ಸಮಾಜಕ್ಕೆ ಆಗುತ್ತದೆ. ಸಮುದಾಯಗಳನ್ನು ದೂಷಣೆ ಮಾಡುವುದು, ವೈಯಕ್ತಿಕವಾಗಿ ಮಾತನಾಡುವುದು. ಆ ಮಾತುಗಳು ಸಮಾಜದ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ದ್ವೇಷಭಾಷಣ ಮಸೂದೆ ತಂದಿದ್ದೇವೆ. ಕೆಲವು ಭಾಗಗಳಲ್ಲಿ, ಕೆಲವರು ಭಾಷಣಗಳನ್ನು ಮಾಡಿದ್ದಾರೆ. ಭಾಷಣ ಮಾಡಿದ ಮೇಲೆ ಏನಾಯಿತು ಎಂಬುದನ್ನು ಗಮನಿಸಿದ್ದೇವೆ. ಇದಕ್ಕೆ ಕಡಿವಾಣ ಹಾಕಬೇಕು ಎಂಬ ಉದ್ದೇಶದಿಂದ ಬಿಲ್ ತಂದಿದ್ದೇವೆ. ಯಾರು ಏನು ಬೇಕಾದರೂ ಮಾತಾಡಬಹುದೇ? ಸಮಾಜದಲ್ಲಿ ಅಶಾಂತಿ ಉಂಟು ಮಾಡಬಹುದೇ ಎಂದು ಪ್ರಶ್ನಿಸಿದರು.
ರಾಜ್ಯಪಾಲರು ಉದ್ದೇಶಪೂರ್ವಕವಾಗಿ, ದ್ವೇಷ ಭಾಷಣ ಮಸೂದೆ ನೆನೆಗುದಿಗೆ ಬೀಳಬೇಕು. ಇದು ಜಾರಿಯಾಗಬಾರದು ಎಂಬ ಉದ್ದೇಶದಿಂದ ರಾಷ್ಟ್ರಪತಿಗಳಿಗೆ ಕಳಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಅತ್ಯಂತ ದುರ್ಬಲ ಬಜೆಟ್ :
ದೇಶದ ಅಭಿವೃದ್ಧಿಗಾಗಿ ಬಜೆಟ್ನಲ್ಲಿ ಜನಸಮುದಾಯ ಅನೇಕ ನಿರೀಕ್ಷೆಗಳನ್ನು ಮಾಡಿತ್ತು. ಎಲ್ಲವು ಹುಸಿಯಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 9 ಬಜೆಟ್ಗಳಲ್ಲಿ, ಇದು ಅತ್ಯಂತ ದುರ್ಬಲ ಬಜೆಟ್ ಎಂದು ಜಿ.ಪರಮೇಶ್ವರ್ ಅವರು ಹೇಳಿದರು.
ಈ ಹಿಂದೆ ಬಜೆಟ್ಗಳನ್ನು ಕೃಷಿ, ಕೈಗಾರಿಕಾ ವಲಯಗಳಿಗೆ ಪ್ರಾತಿನಿಧ್ಯ ಕೊಡುತ್ತಿದ್ದರು. ಬಡತನ ನಿರ್ಮೂಲನೆಗೆ ಸಂಬಂಧಿಸಿದಂತೆ ಅನೇಕ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಮನಮೋಹನ್ ಸಿಂಗ್ ಅವರು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ನೀಡಿದ್ದರು. ಇಡೀ ಪ್ರಪಂಚದಲ್ಲಿ ಅಂತಹ ಕಾರ್ಯಕ್ರಮ ಯಾವ ದೇಶಗಳು ನೀಡಿರಲಿಲ್ಲ. ಅದೆಲ್ಲ ಗಾಳಿಗೆ ತೂರಿ, ಇಡೀ ದೇಶಕ್ಕೆ ನಿರಾಸೆ ಮಾಡಿದ್ದಾರೆ ಎಂದು ಟೀಕಿಸಿದರು.
53.50 ಲಕ್ಷ ಕೋಟಿ ರೂ.ಗಳಲ್ಲಿ 16 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಇಷ್ಟೊಂದು ಸಾಲ ಮಾಡಿಕೊಂಡು, ವಿಧಾನಸಭೆಯಲ್ಲಿ ನಮಗೆ ನೀತಿಪಾಠ ಹೇಳುತ್ತಾರೆ. ಅಷ್ಟೊಂದು ಸಾಲ ಮಾಡಿಕೊಂಡು ಜನ ಸಮುದಾಯಕ್ಕೆ ಏನು ಕೊಟ್ಟಿದ್ದೀರ ಎಂದು ಪ್ರಶ್ನಿಸಿದ ಅವರು, ಕರ್ನಾಟಕಕ್ಕೆ ಏನು ನೀಡಿಲ್ಲ. ಹೇಳಿಕೊಳ್ಳುವಂತಹ ಒಂದೇಒಂದು ಯೋಜನೆಯನ್ನು ನೀಡಿಲ್ಲ. ನೀರಾವರಿ, ಕೃಷಿ, ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಒತ್ತು ಕೊಡಬೇಕಿತ್ತು. ಯಾವುದೇ ಯೋಜನೆಯನ್ನು ನೀಡದೇ ಇರುವುದನ್ನು ಬಜೆಟ್ ಅಂತ ಕರೆಯಬೇಕೇ ಎಂದರು.
ವಿಶ್ವದಲ್ಲಿ ಶಿಕ್ಷಣ ವಲಯ ಸಾಕಷ್ಟು ವೇಗವಾಗಿ ಬದಲಾವಣೆ ಕಾಣುತ್ತಿದೆ. ದೇಶದಲ್ಲಿ ಶಿಕ್ಷಣವನ್ನೇ ಹಿಂದೆ ತಳ್ಳಿದ್ದಾರೆ. ರಾಜ್ಯಕ್ಕೆ ಐಐಟಿ, ಏಮ್ಸ್ ಸಂಸ್ಥೆಗಳನ್ನು ನಿರೀಕ್ಷೆ ಮಾಡಲಾಗಿತ್ತು. ಆದರೆ, ಪ್ಲಾಸ್ಟಿಕ್, ಬೆಂಕಿ ಪಟ್ಟಣದ ಬೆಲೆ ಕಡಿಮೆ ಮಾಡಿದ್ದಾರೆ. ಇದೊಂದು ನಿರಸದಾಯಕ ಬಜೆಟ್ ಎಂದು ಹೇಳಿದರು.
ಸಿ.ಜೆ.ರಾಯ್ ಅತ್ಮಹತ್ಯೆ ಪ್ರಕರಣ
ಉದ್ಯಮಿ ಸಿ.ಜೆ.ರಾಯ್ ಅತ್ಮಹತ್ಯೆ ಪ್ರಕರಣದಲ್ಲಿ ಬೇರೆ ಬೇರೆ ರೀತಿಯಲ್ಲಿ ಊಹಾಪೋಹಾಗಳು ಆಗಬಾರದು ಎಂಬ ಕಾರಣದಿಂದ ಎಸ್ಐಟಿ ರಚನೆ ಮಾಡಿದ್ದೇವೆ. ಎಸ್ಐಟಿ ವರದಿ ಏನು ಬರುತ್ತದೆ ಗಮನಿಸೋಣ. ಯಾರ ಪಾತ್ರಗಳು ಏನಿದೆ ಎಂಬುದು ನೋಡಬೇಕಾಗುತ್ತದೆ ಎಂದು ಹೇಳಿದರು







