ಯಾರನ್ನೂ ಗುರಿಯಾಗಿಸಿಕೊಂಡು ದ್ವೇಷ ಭಾಷಣ ತಡೆ ಮಸೂದೆ ತಂದಿಲ್ಲ: ಗೃಹ ಸಚಿವ ಡಾ.ಜಿ. ಪರಮೇಶ್ವರ್

ಗೃಹ ಸಚಿವ ಡಾ.ಜಿ.ಪರಮೇಶ್ವರ್
ಬೆಂಗಳೂರು: ಯಾರನ್ನು ಗುರಿಯಾಗಿಸಿಕೊಂಡು ದ್ವೇಷ ಭಾಷಣ ತಡೆ ಮಸೂದೆ ತಂದಿಲ್ಲ. ಬದಲಾಗಿ, ಯಾರು ದ್ವೇಷ ಭಾಷಣ ಮಾಡುತ್ತಾರೆಯೋ ಅವರಿಗೆ ಮಾತ್ರ ಈ ಮಸೂದೆ ಅನ್ವಯವಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೌನೂನಿಗೆ ಎಲ್ಲರೂ ಗೌರವ ಕೊಡಬೇಕು. ಜತೆಗೆ ಈ ನಾಡಿನಲ್ಲಿ ದ್ವೇಷ ಭಾಷಣ ಹತ್ತಿಕ್ಕಬೇಕಿದೆ. ಈ ಬಗ್ಗೆ ಈಗಾಗಲೇ ಸುಪ್ರೀಂ ಕೋರ್ಟ್ ಕೂಡ ಆದೇಶ ಕೊಟ್ಟಿದೆ. ದ್ವೇಷ ಭಾಷಣದಿಂದ ಅನೇಕ ರ್ದುಘಟನೆಗಳು ನಡೆದಿವೆ. ಕೊಲೆಗಳು ಆಗಿವೆ. ಹೀಗಾಗಿ, ದ್ವೇಷ ಭಾಷಣ ತಡೆ ಮಸೂದೆ ತರಲಾಗಿದೆ ಎಂದರು.
ಅಧಿವೇಶನದಲ್ಲಿ ದ್ವೇಷ ಭಾಷಣ ತಡೆ ಅಂಗೀಕಾರಗೊಂಡಿದೆ. ಶೀಘ್ರದಲ್ಲಿಯೇ ರಾಜ್ಯಪಾಲರಿಗೆ ಕಳಿಸುತ್ತೇವೆ. ಅವರು ವಿವರಣೆ ಕೇಳಿದರೆ ಕೊಡುತ್ತೇವೆ ಎಂದ ಅವರು, ಬಿಜೆಪಿ ನಾಯಕರು ರಾಜಕೀಯ ಲಾಭಕ್ಕಾಗಿ ಈ ಮಸೂದೆಯನ್ನು ವಿರೋಧಿಸುತ್ತಿದ್ದಾರೆ. ಆದರೆ, ಶಾಂತಿ ಸಮಾಜ ನಿರ್ಮಾಣಕ್ಕೆ ಇಂತಹ ಕಾನೂನಿನ ಅಗತ್ಯತೆ ಇದೆ ಎಂದು ಹೇಳಿದರು.
ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ಬಿಜೆಪಿ ಶಾಸಕ ಭೈರತಿ ಬಸವರಾಜ್ ತಲೆಮರೆಸಿಕೊಂಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಸಿಐಡಿ ಅಧಿಕಾರಿಗಳು ನಿರ್ಧರಿಸುತ್ತಾರೆ. ಲುಕ್ಔಟ್ ನೋಟಿಸ್ ಕೊಡುತ್ತಾರೋ? ಬೇರೇನು ನೋಟಿಸ್ ನೀಡುತ್ತಾರೋ ಗೊತ್ತಿಲ್ಲ. ಅದೆಲ್ಲವೂ ಸಿಐಡಿ ಅವರಿಗೆ ಬಿಟ್ಟಿದ್ದು ಎಂದು ತಿಳಿಸಿದರು.







