ವಿಮಾನ ನಿಲ್ದಾಣ ಸ್ಪೋಟಿಸುವುದಾಗಿ ಉಗ್ರ ಸಂಘಟನೆ ಹೆಸರಿನಲ್ಲಿ ಹುಸಿ ಬಾಂಬ್ ಬೆದರಿಕೆ; ಆರೋಪಿ ಅಭಯ್ ಶೀ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ

Photo credit: PTI
ಬೆಂಗಳೂರು: ಲುಲು ಮಾಲ್, ಮಂತ್ರಿ ಸ್ಕ್ವೇರ್ ಸೇರಿ ನಗರದ ಹಲವು ಮಾಲ್ಗಳು ಮತ್ತು ಕೆಂಪೇಗೌಡ ವಿಮಾನ ನಿಲ್ದಾಣವನ್ನು ಸ್ಫೋಟಿಸುವುದಾಗಿ ಉಗ್ರ ಸಂಘಟನೆ ಜೈಶ್-ಏ-ಮೊಹಮ್ಮದ್ ಹೆಸರಿನಲ್ಲಿ ಹುಸಿ ಬಾಂಬ್ ಬೆದರಿಕೆಯೊಡ್ಡಿದ ಪ್ರಕರಣದಲ್ಲಿ ಆರೋಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಆತನ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ನಿರಾಕರಿಸಿದೆ.
ಕಂಪ್ಯೂಟರ್ ಅಥವಾ ಇಂಟರ್ನೆಟ್ ಸಂಪನ್ಮೂಲ ದುರುಪಯೋಗಪಡಿಸಿಕೊಂಡು ಜನರಲ್ಲಿ ಭಯ ಉಂಟುಮಾಡಿದ ಅಪರಾಧ ಸಂಬಂಧ ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ ಸೆಕ್ಷನ್ 66(ಎಫ್) ಅಡಿಯಲ್ಲಿ ಬೆಂಗಳೂರು ಸೈಬರ್ ಕ್ರೈಂ ಠಾಣೆ ಪೊಲೀಸರು ದಾಖಲಿರುವ ಎಫ್ಐಆರ್ ರದ್ದು ಕೋರಿ ದಕ್ಷಿಣ ದಿಲ್ಲಿ ನಿವಾಸಿ ಅಭಯ್ ಶೀ ಎಂಬಾತ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.
ಇ-ಮೇಲ್ ಹ್ಯಾಕ್ ಮಾಡಲಾಗಿತ್ತು ಎಂಬ ಆರೋಪಿಯ ವಾದವನ್ನು ತಳ್ಳಿಹಾಕಿರುವ ನ್ಯಾಯಾಲಯ, ಬಾಂಬ್ ಬೆದರಿಕೆಯೊಡ್ಡಿ ಇ-ಮೇಲ್ ಕಳುಹಿಸಿ, ಜನರನ್ನು ಆತಂಕಕ್ಕೆ ತಳ್ಳುವ ಹಾಗೂ ವ್ಯವಸ್ಥೆಯೊಂದಿಗೆ ಆಟವಾಡುವ ಇಂತಹ ನಡೆಯನ್ನು ಒಪ್ಪಲಾಗದು ಎಂದು ಕಟುವಾಗಿ ನುಡಿದಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, 2025ರ ನವೆಂಬರ್ 30ರಂದು ಇ-ಮೇಲ್ನಿಂದ ಹುಸಿ ಬಾಂಬ್ ಬೆದರಿಕೆ ಹಾಕಿರುವುದಕ್ಕೆ ಇಡೀ ಪ್ರಕರಣ ಸಂಬಂಧಿಸಿದೆ. ಅರ್ಜಿದಾರರ ಇ-ಮೇಲ್ಗೆ ಸಂಪರ್ಕ ಸಮಸ್ಯೆ ಇತ್ತು. ಆ ಬಗ್ಗೆ ಮೊಬೈಲ್ ನೆಟ್ವರ್ಕ್ ಕಂಪನಿಗೆ ದೂರು ನೀಡಿದ್ದು, ಅದನ್ನು ಪರಿಗಣಿಸಿ ಬಗೆಹರಿಸಲಾಗಿದೆ ಎಂದು ವಾದಿಸಿದರು.
ಆಗ ನ್ಯಾಯಪೀಠ, ಅರ್ಜಿದಾರರ ಇ-ಮೇಲ್ ವಿಳಾಸದಿಂದ ಬೆದರಿಕೆ ಸಂದೇಶ ಕಳುಹಿಸಲಾಗಿದೆ ಅಲ್ಲವೇ? ಎಂದು ಕೇಳಿತು.
ಅರ್ಜಿದಾರರ ಪರ ವಕೀಲರು, ಅರ್ಜಿದಾರರ ಇ-ಮೇಲ್ ಖಾತೆ ಹ್ಯಾಕ್ ಆಗಿತ್ತು ಎಂದು ಉತ್ತರಿಸಿದರು.
ಅದಕ್ಕೆ ನ್ಯಾಯಪೀಠ, ಅಚ್ಚರಿಯಿಂದ ಓಹೋ.. ಹೌದಾ! ಹಾಗಾದರೆ ಆ ವಿಚಾರ ಸಾಕ್ಷ್ಯಧಾರಕ್ಕೆ ಸಂಬಂಧಿಸಿದೆ ಬಿಡಿ ಎಂದು ಸೂಚಿಸಿತು. ಅರ್ಜಿದಾರರ ಪರ ವಕೀಲರು ಮುಂದುವರಿದು, ಇ-ಮೇಲ್ ಅರ್ಜಿದಾರರಿಗೆ ಸಂಬಂಧಿಸಿದ್ದಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ಪರೀಕ್ಷೆ ನಡೆಸಿಲ್ಲ. ದೆಹಲಿ ಪೊಲೀಸರು ಸಹ ಇದೇ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಸಮಜಾಯಿಷಿ ನೀಡಿದರು.
ಹ್ಯಾಕ್ ಆಗಿರುವುದು ಸಾಕ್ಷ್ಯಾಧಾರಗಳಿಂದ ಸಾಬೀತಾಗಲಿ:
ಇದಕ್ಕೆ ಕೊಂಚ ಅಸಮಾಧಾನಗೊಂಡ ನ್ಯಾಯಪೀಠ, ಅದರಿಂದ ಸಮಸ್ಯೆ ಏನೂ ಇಲ್ಲ. ಕೆಂಪೇಗೌಡ ವಿಮಾನ ನಿಲ್ದಾಣ, ಲುಲು ಮಾಲ್, ಮಂತ್ರಿ ಸ್ಕ್ವೇರ್, ಒರಾಯನ್ ಮಾಲ್ ಅನ್ನು ಟಾರ್ಗೆಟ್ ಮಾಡಲಾಗಿದೆ. ರಾತ್ರಿ 7 ಗಂಟೆ ನಂತರ ಬಾಂಬ್ನಿಂದ ಸ್ಫೋಟಿಸಲಾಗುವುದು ಎಂಬ ಬೆದರಿಕೆ ಸಂದೇಶ 2025ರ ನವೆಂಬರ್ 30ರಂದು ಬೆಳಗ್ಗೆ 11.53ಕ್ಕೆ ಅರ್ಜಿದಾರರ ಇ-ಮೇಲ್ ಖಾತೆಯಿಂದಲೇ ಬಂದಿದೆ. ಈ ಸಂಗತಿ ಬಹಿರಂಗವಾದ ನಂತರ ಇ-ಮೇಲ್ ಹ್ಯಾಕ್ ಆಗಿದೆ ಎಂದು ಸಬೂಬು ಹೇಳಿದರೆ ನ್ಯಾಯಾಲಯ ಒಪ್ಪುವುದಿಲ್ಲ. ಹ್ಯಾಕ್ ವಿಚಾರ ಸಾಕ್ಷ್ಯಧಾರಗಳಿಂದ ದೃಢಪಡಲಿ ಎಂದು ಹೇಳಿತು.
ಮುಂದುವರಿದು, ಇ-ಮೇಲ್ ಹ್ಯಾಕ್ ಆದ ಬಗ್ಗೆ ದೂರು ನೀಡಲಾಗಿದೆಯೇ? ಎಂದು ಪ್ರಶ್ನಿಸಿದ ನ್ಯಾಯಪೀಠ ಬಾಂಬ್ ಬೆದರಿಕೆ ಹಾಕಿ ಅರ್ಜಿದಾರರು ಇ-ಮೇಲ್ ಕಳುಹಿಸಿದ್ದಾರೆ. ಈಗ ನ್ಯಾಯಾಲಯಕ್ಕೆ ಬಂದು ಹ್ಯಾಕ್ ಕಥೆ ಹೇಳುತ್ತಿದ್ದಾರೆ. ನಿಜವಾಗಿಯೂ ಬಾಂಬ್ ಹಾಕಲಾಯಿತೋ ಅಥವಾ ಇಲ್ಲವೋ ಎಂಬುದು ಬೇರೆ ವಿಚಾರ. ಒಟ್ಟಿನಲ್ಲಿ ಜನರಿಗೆ ಆತಂಕ ಮೂಡಿಸಲಾಗಿದೆ. ಇಂತಹ ನಡೆ ಒಪ್ಪಲಾಗದು. ಪೊಲೀಸರು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಈಗ ಹೈಕೋರ್ಟ್ ಮದ್ಯಪ್ರವೇಶಿಸಿ ಅರ್ಜಿದಾರರ ವಿರುದ್ಧದ ಎಫ್ಐಆರ್ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲಾಗದು ಎಂದು ತಿಳಿಸಿ, ಅರ್ಜಿ ವಜಾಗೊಳಿಸಿ ಆದೇಶಿಸಿತು.






