ವಿಕಲಚೇತನರ ಪ್ರಯಾಣಕ್ಕೆ ಅಗತ್ಯ ನೆರವು ಕಲ್ಪಿಸಬೇಕು: ಹೈಕೋರ್ಟ್ ಆದೇಶ

ಬೆಂಗಳೂರು:ವಿಕಲಚೇತನರಿಗೆ(ಅಂಧರು ಮತ್ತು ಅಂಗವಿಕಲರು) ಅನುಕೂಲವಾಗುವ ಸಲುವಾಗಿ ಬಸ್ಗಳಲ್ಲಿ ಆಡಿಯೊ ರೂಪದಲ್ಲಿನ ಪ್ರಕಟಣಾ ವ್ಯವಸ್ಥೆ ಅಳವಡಿಸುವಂತೆ ಖಾಸಗಿ ಬಸ್ ಆಪರೇಟರ್ಗಳಿಗೆ ನಿರ್ದೇಶನ ನೀಡಿ ಎಂದು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ನಗರದ ಎನ್.ಶ್ರೇಯಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ
ಬಿಎಂಟಿಸಿ ಮತ್ತು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಆಡಿಯೊ ವ್ಯವಸ್ಥೆ ಅಳವಡಿಸಲು ನಿರ್ದೇಶನ ನೀಡುವಂತೆ ಅರ್ಜಿದಾರರು ಕೋರಿದ್ದಾರೆ. ಆದರೆ, ಕೆಲವು ಮಾರ್ಗಗಳಲ್ಲಿ ಖಾಸಗಿ ಬಸ್ಗಳೂ ಸಂಚರಿಸುತ್ತಿವೆ. ಈ ಬಸ್ಗಳಲ್ಲಿ ಅಂಗವಿಕಲರ ಪ್ರಯಾಣಕ್ಕೆ ಅಗತ್ಯ ನೆರವು ಕಲ್ಪಿಸಿ ಕೊಡಬೇಕು ಎಂದು ನ್ಯಾಯಪೀಠ ಆದೇಶಿಸಿದೆ.
ಬಿಎಂಟಿಸಿ ಮತ್ತು ರಾಜ್ಯ ಸರಕಾರ ಈ ಸಂಬಂಧ ಕೈಗೊಂಡ ಕ್ರಮಗಳ ಬಗ್ಗೆ ಹೆಚ್ಚುವರಿ ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಿ ನ್ಯಾಯಪೀಠ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿದೆ.





