ರಸ್ತೆಯಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿ ಹಾಕಿದ್ದ ವ್ಯಕ್ತಿ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ
ಸಾರ್ವಜನಿಕ ರಸ್ತೆಯಲ್ಲಿ ಮರಳು, ಕಲ್ಲು ಹಾಕಿ ರಾಜ್ಯಭಾರ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ ನ್ಯಾಯಾಲಯ

Photo credit: PTI
ಬೆಂಗಳೂರು: ಮನೆ ನಿರ್ಮಾಣ ಕೆಲಸಕ್ಕಾಗಿ ರಸ್ತೆಯಲ್ಲಿ ಮರಳು, ಇಟ್ಟಿಗೆ ಇತರ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಹಾಕಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ನಿರಾಕರಿಸಿರುವ ಹೈಕೋರ್ಟ್, ಸಾರ್ವಜನಿಕ ರಸ್ತೆಯಲ್ಲಿ ಮರಳು, ಕಲ್ಲು ಹಾಕಿ ರಾಜ್ಯಭಾರ ಮಾಡುತ್ತಿದ್ದೀರಾ? ನೀವೇನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೀರೋ? ಅಥವಾ ರಾಜರ ಕಾಲದಲ್ಲಿದ್ದಿರೋ? ಎಂದು ಆರೋಪಿಯನ್ನು ತರಾಟೆಗೆ ತೆಗೆದುಕೊಂಡಿದೆ.
ಪ್ರಕರಣದ ಎಫ್ಐಆರ್ ಹಾಗೂ ದೇವನಹಳ್ಳಿ ಜೆಎಂಎಫ್ಸಿ ಕೋರ್ಟ್ ವಿಚಾರಣೆ ರದ್ದು ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.
ವಿಚಾರಣೆ ವೇಳೆ ಪ್ರಕರಣದ ದೋಷಾರೋಪ ಪಟ್ಟಿ ಮತ್ತು ಅದರಲ್ಲಿ ಲಗತ್ತಿಸಿದ್ದ ಪೋಟೋಗಳನ್ನು ಗಮನಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತಲ್ಲದೆ, ಎಂ-ಸ್ಯಾಂಡ್, ಕಲ್ಲುಗಳು ಇನ್ನಿತರ ನಿರ್ಮಾಣ ಸಾಮಗ್ರಿಗಳನ್ನು ರಸ್ತೆಯಲ್ಲಿ ಹಾಕಿದ್ದಾರೆ. ಅದನ್ನು ತೆರವುಗೊಳಿಸಲು ಸ್ಥಳೀಯ ಅಧಿಕಾರಿಗಳು ಸೂಚಿಸಿದ್ದರೂ ಪದೇಪದೆ ರಸ್ತೆಯಲ್ಲಿಯೇ ಸಾಮಗ್ರಿ ಹಾಕಿದ್ದಾರೆ ಎಂಬ ಆರೋಪ ಅರ್ಜಿದಾರರ ಮೇಲಿದೆ. ಮರಳು, ಕಲ್ಲನ್ನು ರಸ್ತೆ ಮೇಲೆ ಏಕೆ ಹಾಕಿದ್ದೀರಿ? ಜನ ರಸ್ತೆಯಲ್ಲಿ ಓಡಾಡಬಾರದೆ? ರಸ್ತೆ ಇರುವುದು ಮನೆ ಕಟ್ಟುವ ಸಾಮಗ್ರಿ ಹಾಕುವುದಕ್ಕಾಗಿಯೇ? ಸಾರ್ವಜನಿಕರಿಗೆ ಏಕೆ ತೊಂದರೆ ಕೊಟ್ಟಿದ್ದೀರಿ ಎಂದು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿತು.
ಮರಳಿನ ಎರಡು ದೊಡ್ಡ ರಾಶಿಗಳನ್ನು ರಸ್ತೆಯಲ್ಲಿ ಹಾಕಿರುವುದು ಪೋಟೋಗಳಲ್ಲಿ ಕಾಣುತ್ತಿದೆ. ಅದಕ್ಕೆ ಕಲ್ಲುಗಳನ್ನು ಅಡ್ಡಿ ಇಟ್ಟಿದ್ದೀರಿ. ಮನೆ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಮತ್ತು ಪರವಾನಗಿ ಪಡೆದಿದ್ದೀರಾ? ಪರವಾನಗಿ ಎಲ್ಲಿದೆ? ಅದರಲ್ಲಿ ಏನಿರುತ್ತೆ ಗೊತ್ತೇ? ಕಟ್ಟಡ ನಿರ್ಮಾಣ ಮಾಡುವಾಗ ಇಂತಿಷ್ಟೇ ಜಾಗದಲ್ಲಿ ನಿರ್ಮಾಣ ಸಾಮಗ್ರಿಗಳನ್ನು ಸಂಗ್ರಹಿಸಿಡಬೇಕು ಎಂಬ ಷರತ್ತು ಪರವಾನಗಿಯಲ್ಲಿರುತ್ತದೆ. ಅದನ್ನು ಓದಿದ್ದೀರಾ? ರಸ್ತೆಯಲ್ಲಿ ಸಾಮಗ್ರಿ ಹಾಕಿ ನೀವೇನು ರಾಜ್ಯಭಾರ ಮಾಡುತ್ತಿದ್ದೀರಾ? ನೀವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೀರೋ ಅಥವಾ ರಾಜರ ಕಾಲದಲ್ಲಿದ್ದೀರೋ? ಎಂದು ತೀಕ್ಷ್ಣವಾಗಿ ಪ್ರಶ್ನಿಸಿತು.
ತಪ್ಪು ಮಾಡಿದ ನಂತರ ಹೈಕೊರ್ಟ್ಗೆ ಬಂದು ಪ್ರಕರಣ ರದ್ದು ಕೋರುತ್ತಿದ್ದೀರಾ? ಅರ್ಜಿ ಹಿಂಪಡೆಯುತ್ತೀರೋ? ಮೆರಿಟ್ ಮೇಲೆ ತೀರ್ಪು ಬರೆಸಬೇಕೇ? ತೀರ್ಪು ಬರೆದರೆ, ವಿಚಾರಣಾ ಕೋರ್ಟ್ನಲ್ಲಿ ನೀವು ಸಂಕಷ್ಟ ಎದುರಿಸಬೇಕಾಗುತ್ತದೆ? ಎಂದು ಅರ್ಜಿದಾರರಿಗೆ ನ್ಯಾಯಮೂರ್ತಿಗಳು ಸೂಚಿಸಿದರು.
ಆಗ ಅರ್ಜಿದಾರರ ಪರ ವಕೀಲರು, ಅರ್ಜಿ ಹಿಂಪಡೆಯುವುದಾಗಿ ತಿಳಿಸಿದರು.
ಅದನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿದಾರರ ಪರ ವಕೀಲರ ಮನವಿಯಂತೆ ಅರ್ಜಿ ಹಿಂಪಡೆಯಲು ಅನುಮತಿಸಲಾಗುತ್ತಿದೆ. ತಮ್ಮ ಎಲ್ಲ ವಾದಾಂಶಗಳನ್ನು ವಿಚಾರಣಾ ನ್ಯಾಯಾಲಯದ ಮುಂದೆ ಮಂಡಿಸಲು ಅರ್ಜಿದಾರರು ಸ್ವತಂತ್ರರಾಗಿದ್ದಾರೆ ಎಂದು ತಿಳಿಸಿ, ಅರ್ಜಿ ವಜಾಗೊಳಿಸಿ ಆದೇಶಿಸಿತು.






